ಹೊಸದಿಲ್ಲಿ: ಅಂಧರು ಬಳಸಲು ಅನುಕೂಲವಾಗುವಂತೆ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲು ಸಿಜೆಐ ಡಿ.ವೈ.ಚಂದ್ರಚೂಡ್ ಸೂಚಿಸಿದ್ದಾರೆ.
ಈ ಪ್ರಯತ್ನದ ಭಾಗವಾಗಿ ಅಂಧರಾದ ಹಿರಿಯ ನ್ಯಾಯವಾದಿ ಎಸ್.ಕೆ. ರುಂಗ್ಟ ಅವರ ಸಲಹೆ, ಸಹಕಾರ ಪಡೆಯುವ ನಿಟ್ಟಿನಲ್ಲಿ ಅವರಿಗೆ ಕೆಲವು ಪ್ರಶ್ನೆಗಳನ್ನು ಸಿಜೆಐ ಗುರುವಾರ ಕೇಳಿದರು.
“ಇದೊಂದು ವೈಯಕ್ತಿಕ ಪ್ರಶ್ನೆ. ನೀವು ಏನು ಭಾವಿಸುವುದಿಲ್ಲ ಎಂದು ನಾನು ತಿಳಿದುಕೊಳ್ಳುತ್ತೇನೆ. ನೀವು ಇತರ ನ್ಯಾಯವಾದಿಗಳ ಲಿಖಿತ ವಾದವನ್ನು ಹೇಗೆ ಗ್ರಹಿಸುತ್ತೀರಿ? ಅದನ್ನು ಬ್ರೈಲ್ ಲಿಪಿಗೆ ಹೇಗೆ ಪರಿವರ್ತಿಸಿಕೊಳ್ಳುತ್ತೀರಿ,’ ಎಂದು ಸಿಜೆಐ ಅವರು ನ್ಯಾಯವಾದಿ ರುಂಗ್ಟ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರುಂಗ್ಟ, ಅಂಧರಿಗೆ ಅನುಕೂಲವಾಗುವ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ರುಂಗ್ಟ ಅವರು ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ಕಳೆದುಕೊಂಡರು. ಅನೇಕ ವರ್ಷಗಳಿಂದ ಸುಪ್ರೀಂ ಕೋರ್ಟ್ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.