Advertisement

ಸಮಾಜವಾದಿ ಎಂದವರು ಸಮಾಜ ವಿರೋಧಿ ಕೆಲಸ ಮಾಡಿದರು

12:07 PM Mar 17, 2018 | Team Udayavani |

ಮೈಸೂರು: ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೊಂಡು ಹಲವು ವರ್ಷ ಕಳೆದರೂ ಪ್ರಜಾಪ್ರಭುತ್ವ ಆಚರಣೆಯಲ್ಲಿ ನಾವು ಇಂದಿಗೂ ಪರಿವರ್ತನೆ ಹಂತದಲ್ಲಿದ್ದೇವೆ ಎಂದು ಮುಂಬೈ ವಿವಿಯ ಪ್ರಾಧ್ಯಾಪಕ ಡಾ. ಜೋಸ್‌ ಜಾರ್ಜ್‌ ಹೇಳಿದರು.

Advertisement

ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದಿಂದ ಮಾನಸಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದಲ್ಲಿ ಆಯೋಜಿಸಿದ್ದ ಭಾರತದ ಪ್ರಜಾಪ್ರಭುತ್ವ ರಾಜಕಾರಣ: ಸಿದ್ಧಾಂತ ಹಾಗೂ ವಾಸ್ತವ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರಿಂದ ಸ್ಥಾಪನೆಗೊಂಡ ಆಲ್‌ ಇಂಡಿಯಾ ಕಾಂಗ್ರೆಸ್‌ ಕಮಿಟಿ ಸ್ವಾತಂತ್ರ್ಯಕ್ಕಾಗಿ ಹೋರಾಡಿತು,

ಅಲ್ಲದೆ ಮಹಾತ್ಮ ಗಾಂಧೀಜಿ ಅವರಿಗೆ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಆಚರಿಸುವ ಭರವಸೆಯನ್ನು ಸಹ ನೀಡಿತು. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೋಲಿಸಿದರೆ ನಮ್ಮ ದೇಶ ಪರಿಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.

ಆದರೆ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೊಂಡು ಹಲವು ವರ್ಷ ಕಳೆದರೂ ಈ ಹಿಂದೆ ಗಾಂಧೀಜಿ ಅವರಿಗೆ ಕೊಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಲು ಆಗದೆ, ಇನ್ನೂ ಪ್ರಜಾಪ್ರಭುತ್ವ ಆಚರಣೆಯಲ್ಲಿ ಪರಿವರ್ತನೆ ಹಂತದಲ್ಲಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಣ್ಣ ಸಾಲಕ್ಕೂ ರೈತರ ಆತ್ನಹತ್ಯೆ: ಪ್ರಧಾನಿ ಜವಾಹರಲಾಲ್‌ ನೆಹರು ತಮ್ಮನ್ನು ತಾವು ಸಮಾಜವಾದಿ ಎಂದು ಬಿಂಬಿಸಿಕೊಂಡರೂ ಸಮಾಜವಾದಿಗಳನ್ನು ವಿರೋಧಿಸುವ ಮೂಲಕ ಸಮಾಜ ವಿರೋಧಿ ಕೆಲಸ ಮಾಡಿದರು. ಇನ್ನೂ ರಾಜೀವ್‌ ಗಾಂಧಿ ಸಹ ಸಮಾಜವಾದಿ ಎಂದು ಬಿಂಬಿಸಿಕೊಂಡಿದ್ದರೂ, ಅವರು ಜಾರಿಗೆ ತಂದ ಹಸಿರು ಕಾಂತ್ರಿ ಫ‌ಲವತ್ತಾದ ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್‌, ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಿಗೆ ಮಾತ್ರವೇ ಸೀಮಿತಗೊಳಿಸಿದರು.

Advertisement

ಇವರ ನಡುವೆ ವಿಜಯ್‌ ಮಲ್ಯ, ಲಲಿತ್‌ ಮೋದಿ, ನೀರವ್‌ ಮೋದಿ ಸೇರಿದಂತೆ ಹಲವು ಮೋದಿಗಳು ರಾಷ್ಟ್ರಕ್ಕೆ ದ್ರೋಹವೆಸಗಿ ಓಡಿ ಹೋದರು. ಆದರೆ, ನಮ್ಮ ರೈತರು ಸಣ್ಣ ಪ್ರಮಾಣದ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದು ಪ್ರಜಾಪ್ರಭುತ್ವ, ಸಮಾನತೆಯೇ? ಎಂದು ಪ್ರಶ್ನಿಸಿದ ಅವರು, ಪ್ರಜಾಪ್ರಭುತ್ವ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ.

ಜನರು ಸ್ವತಂತ್ರವಾಗಿ ಸಂಘ ಸಂಸ್ಥೆಗಳನ್ನು ರೂಪಿಸುವುದು, ತೀರ್ಮಾನ ತೆಗದುಕೊಳ್ಳುವುದು, ಚಿಂತನಾ ಕ್ರಮ, ಕಾನೂನು ಸುವ್ಯವಸ್ಥೆ ಇವೆಲ್ಲವೂ ಪ್ರಜಾಪ್ರಭುತ್ವವೇ ಆಗಿದ್ದು, ಇದನ್ನು ತತ್ವಶಾಸ್ತ್ರದ ನೆಲೆಗಟ್ಟಿನ ಗ್ರಹಿಕೆಯಲ್ಲಿ ನೋಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಮತ್ತು ಚಿಂತಕ ಪ್ರೊ.ಮುಜಾಪರ್‌ ಅಸ್ಸಾದಿ, ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಜಿ.ಟಿ.ರಾಮಚಂದ್ರಪ್ಪ, ಕಾರ್ಯಾಗಾರದ ಸಂಚಾಲಕ ಡಾ.ಕೃಷ್ಣ ಹೊಂಬಾಳ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next