Advertisement

ಸಮಾಜವಾದಿ ಮುಖಂಡ ರಾಚಪ್ಪ ಹಡಪದಗೆ ಗೋಪಾಲಗೌಡ ಪ್ರಶಸ್ತಿ

01:22 PM Jun 21, 2017 | |

ಧಾರವಾಡ: ಬೆಂಗಳೂರಿನ ಕನ್ನಡ ಜನಶಕ್ತಿ ಸಂಘ ಕೊಡ ಮಾಡುವ ಶಾಂತವೇರಿ ಗೋಪಾಲಗೌಡರ ಪ್ರಶಸ್ತಿಯು ಇಲ್ಲಿನ ಹಿರಿಯ ಸಮಾಜವಾದಿ ಮುಖಂಡ ರಾಚಪ್ಪ ಹಡಪದ ಅವರಿಗೆ ಲಭಿಸಿದೆ. ಶಾಂತವೇರಿ ಗೋಪಾಲಗೌಡರ ಜೀವನ ಆದರ್ಶಗಳನ್ನು ಪಾಲಿಸುತ್ತ, ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ವ್ಯಕ್ತಿಗಳಿಗೆ ಕೊಡುವ ಪ್ರಶಸ್ತಿಗೆ ಕನ್ನಡ ಜನಶಕ್ತಿ ಈ ಬಾರಿ ರಾಚಪ್ಪ ಹಡಪದ ಅವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ಪ್ರಶಸ್ತಿ ಪತ್ರ, ಕಂಚಿನ ಫಲಕ ಹಾಗೂ 25 ಸಾವಿರ ರೂಪಾಯಿ ನಗದು ಪುರಸ್ಕಾರ ಒಳಗೊಂಡಿದೆ. 

Advertisement

ಬೆಂಗಳೂರಿನಲ್ಲಿ ಸಮಾರಂಭ: ಜೂ.25ರಂದು ಬೆಳಗ್ಗೆ 10:45 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ|ಚಂದ್ರಶೇಖರ ಕಂಬಾರ ಪ್ರಶಸ್ತಿ ಪ್ರದಾನ ಮಾಡುವರು. ಕಸಾಪ ಮಾಜಿ ಅಧ್ಯಕ್ಷ ಪ್ರೊ|ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ವಿಮರ್ಶಕ ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ, ಹಿರಿಯ ನ್ಯಾಯವಾದಿ ಕೆ.ದಿವಾಕರ್‌ ಅತಿಥಿಗಳಾಗಿ ಆಗಮಿಸುವರು. 

ರಾಚಪ್ಪರ ಬಗ್ಗೆ ಒಂದಿಷ್ಟು: 1937ರಲ್ಲಿ ಬೈಲಹೊಂಗಲ ತಾಲೂಕಿನ ಹೊಳೆಹೊಸೂರು ಗ್ರಾಮದಲ್ಲಿ ಜನಿಸಿದ ರಾಚಪ್ಪ ಹಡಪದ ಅವರು, 1980ರ ದಶಕದಲ್ಲಿನ ಗೋಕಾಕ ಚಳವಳಿ ಸೇರಿದಂತೆ ಅನೇಕ ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಹಲವಾರು ಬಾರಿ ಜೈಲುವಾಸ ಅನುಭವಿಸಿದ್ದಾರೆ.

ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ 1950ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಕಾಗೋಡನಲ್ಲಿ ನಡೆದ ಭೂ ಸತ್ಯಾಗ್ರಹ ಚಳವಳಿ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಜಮೀನಾರರಿಂದ ಗೇಣಿದಾರರಿಗೆ 12 ಸಾವಿರ ಎಕರೆ ಜಮೀನು ಪಡೆಯಲು ಹೋರಾಟ, 1975ರಲ್ಲಿನ ಜೆ.ಪಿ.ಚಳವಳಿ, ಬೆಳಗಾವಿಯಲ್ಲಿನ ರೈತರ ಸಾಲ ವಸೂಲಾತಿ ನೆಪದಲ್ಲಿನ ಆಸ್ತಿ ಜಪ್ತಿ ವಿರುದ್ಧದ ಪ್ರಬಲ ಹೋರಾಟ ಹಾಗೂ ನವಲಗುಂದ-ನರಗುಂದ ರೈತ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ.

ಹಿರಿಯ ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲಗೌಡ, ಕೆ.ಎಚ್‌. ರಂಗನಾಥ, ಜೆ.ಎಚ್‌.ಪಟೇಲ, ಎಸ್‌.ಬಂಗಾರಪ್ಪ ಮುಂತಾದವರ ಜೊತೆ ಕೂಡಿ ನಿರಂತರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಗತಿಪರ ಲೇಖಕರು, ಚಿಂತಕರು, ನಾಟಕಕಾರರು, ಹೋರಾಟಗಾರರ ವಿಚಾರಗಳೊಂದಿಗೆ ಬೆರೆತು, ಅದೇ ಮಾರ್ಗದಲ್ಲಿ ಇಂದು ತಮ್ಮ ಬದುಕು ಸಾಗಿಸುತ್ತ ಬಂದಿದ್ದಾರೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next