ವಿಜಯಪುರ: ಭಾರತದಲ್ಲಿ ಸಮಾಜವಾದ ತರುವುದು ಭಗತ್‌ಸಿಂಗ್ ಮತ್ತು ನೇತಾಜಿ ಅವರ ಕನಸಾಗಿತ್ತು ಎಂದು ಎಸ್‌ಯೂಸಿಐ ಕಮ್ಯೂನಿಷ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ಹೇಳಿದರು.
ಗುರುವಾರ ನಗರದಲ್ಲಿ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವದ ಜೀಪ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ ಸಂಧಾನಪರ ಪಂಥದವರಿಗೆ ಸ್ವಾತಂತ್ರ್ಯ ಬೇಕಾಗಿತ್ತು. ಆದರೆ ಕ್ರಾಂತಿಕಾರಿಗಳಿಗೆ ಸ್ವಾತಂತ್ರ್ಯ ಮಾತ್ರ ಬೇಕಿರಲಿಲ್ಲ. ಸಮಾಜವಾದದ ಸಿದ್ಧಾಂತದ ಸ್ಥಾಪನೆಯ ಗುರಿ ಹೊಂದಿದ್ದರು.
ರಷ್ಯಾದ ಮಾದರಿಯಲ್ಲಿಯೇ ಭಾರತದಲ್ಲಿ ಸಮಾಜವಾದಿ ಕ್ರಾಂತಿಯಾಗಬೇಕು. ದುಡಿಯುವ ವರ್ಗ ಅಧಿಕಾರಕ್ಕೆ ಬರಬೇಕೆಂದು ಕನಸು ಕಂಡಿದ್ದರು. ಕ್ರಾಂತಿಯಾದ ಕೆಲವೇ ವರ್ಷಗಳಲ್ಲಿ ಬಡತನ, ನಿರುದ್ಯೋಗ, ಜಾತಿ ಪದ್ದತಿ, ಬೆಲೆ ಏರಿಕೆ ತೊಡೆದು ಹಾಕಿತ್ತಲ್ಲದೆ ಎರಡನೆ ಮಹಾಯುದ್ದದ ಹೊತ್ತಿಗೆ ಅಮೆರಿಕಾ, ಜರ್ಮನಿ, ಫ್ರಾನ್ಸ್ ದೇಶಗಳಷ್ಟೇ ಬಲಿಷ್ಟವಾಗಿ ಬೆಳೆಯಿತು ಎಂದರು.
ಭಾರತಕ್ಕೆ ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾಯಿತೆ ಹೊರತು ಪ್ರಜಾತಾಂತ್ರಿಕ ಕ್ರಾಂತಿಯಾಗಿ ದೇಶಕ್ಕೆ ನೈಜ ಸ್ವಾತಂತ್ರ್ಯ ಸಿಗಲಿಲ್ಲ. ಇದರ ಪರಿಣಾಮ ಪ್ರಸಕ್ತ ಸಂದರ್ಭದಲ್ಲಿ ದೇಶದಲ್ಲಿ ಅಧಿಕಾರ ಎಂಬುದು ಭ್ರಷ್ಟರು ಮತ್ತು ಬಂಡವಾಳಿಗರ ಕೈ ಸೇರುವಂತಾಯಿತು. ಕೇಂದ್ರದಲ್ಲಿ ಅಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ, ಚುನಾವಣೆಯ ಸಂದರ್ಭ ದೇಶದ ಜನತೆಗೆ ನೀಡಿದ ಆಶ್ವಾಸನೆ ಈಡೇರಿಸದೇ ಮಾತಿನಲ್ಲೇ ಮರೆಸುತ್ತಿದೆ.
ವಿದೇಶದಲ್ಲಿರುವ ಕಪ್ಪುಹಣ ಭಾರತಕ್ಕೆ ತರುವುದು, ಭ್ರಷ್ಟಾಚಾರ ನಿರ್ಮೂಲನೆ, ನಿರುದ್ಯೋಗ ನಿವಾರಣೆ, ಬೆಲೆ ನಿಯಂತ್ರಣಗಳಂಥ ಪ್ರಮುಖ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ . ಬದಲಾಗಿ ಧರ್ಮಾಂಧತೆ, ಕೋಮುವಾದ ಹೆಚ್ಚುವುದಕ್ಕೆ ಕಾರಣವಾಗುತ್ತಿದೆ ಎಂದು ಕಿಡಿ ಕಾರಿದರು.
ಪ್ರಕಾಶ ಹಿಟ್ನಳ್ಳಿ, ಮಲ್ಲಿಕಾರ್ಜುನ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ, ಬಾಳು ಜೇವೂರ, ಸುನೀಲ, ಸುರೇಖಾ, ಜ್ಯೋತಿ, ಶೋಭಾ, ಶಿವಬಾಳಮ್ಮ ಮುಂತಾದವರು ಮಾತನಾಡಿದರು.
ನಗರದ ಕೆ.ಎಸ್.ಆರ್.ಟಿ.ಸಿ ವರ್ಕಶಾಪ್, ಹುತ್ತಾತ್ಮ ವೃತ್ತ, ಕೇಂದ್ರ ಬಸ್ ನಿಲ್ದಾಣ, ಆರ್‌ಟಿಒ ಕಚೇರಿ, ಗಣೇಶ ನಗರ, ಇಬ್ರಾಹಿಂಪೂರ, ಟೆಕಡೆ ಗಲ್ಲಿ, ಹಳೇತಹಸಿಲ್ದಾರ ಕಾರ್ಯಾಲಯದ ಹತ್ತಿರ, ಎಪಿಎಂಸಿ ರೈಲ್ವೇ ಸ್ಟೇಷನ್, ಝಂಡಾ ಕಟ್ಟಿ, ಹಕೀಂ ಚೌಕ, ಗೋಳಗುಮ್ಮಟ, ಸಿಂಧಗಿ ನಾಕಾ, ಸಿದ್ದೇಶ್ವರ ದೇವಸ್ಥಾನ, ಗಣಪತಿಚೌಕ, ಬಂಜಾರ ಕ್ರಾಸ್, ಆದರ್ಶನಗರ ಮೂಲಕ ಆಶ್ರದ ಹತ್ತಿರ ತೆರಳಿ ಜಾಥಾ ಮುಕ್ತಾಯವಾಯಿತು.