ಪಾಂಡವಪುರ (ಮಂಡ್ಯ) : ಕಳೆದ ಮೂರು ವರ್ಷಗಳಿಂದಲೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯ ಮಾಡಿಕೊಂಡು ಹೋಗುತ್ತಿದ್ದ ಡಾ.ಎನ್.ಎಸ್.ಇಂದ್ರೇಶ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ಈ ವೇಳೆ ತಾಲೂಕು ಅಧ್ಯಕ್ಷ ಎಲ್.ಅಶೋಕ್ ಮಾತನಾಡಿ, ಗೋದುಳಿ ಲಗ್ನದಲ್ಲಿ ಶುಭದಿನವಾದ ಮಂಗಳವಾರ ಡಾ.ಇಂದ್ರೇಶ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂದೆ ಪಕ್ಷ ಅವರ ಸೇವೆ ಬಳಸಿಕೊಂಡು ಹೆಚ್ಚಿನ ಸ್ಥಾನಮಾನ ನೀಡಲಿದೆ ಎಂದರು.
ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್ ಮಾತನಾಡಿ, ಈ ದಿನ ಸಾಂಕೇತಿಕವಾಗಿ ಡಾ.ಇಂದ್ರೇಶ್ ಅವರು ಪಕ್ಷ ಸೇರ್ಪಡೆಯಾಗಿದ್ದಾರೆ. ಮುಂದೆ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರ ಸಮ್ಮುಖದಲ್ಲಿ ಇಂದ್ರೇಶ್ ಸೇರ್ಪಡೆಯಾಗಲಿದ್ದಾರೆ ಎಂದರು.
ಇಂದ್ರೇಶ್ ಅವರಿಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡುವ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು. ಮುಂದಿನ ದಿನಗಳಲ್ಲಿ ಡಾ.ಇಂದ್ರೇಶ್ ಅವರಿಗೆ ಪಕ್ಷ ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಡಾ.ಇಂದ್ರೇಶ್, ಕಳೆದ ಹಲವಾರು ವರ್ಷಗಳಿಂದಲೂ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಜನರ ಆಶಯದಂತೆ ಈ ದಿನ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದೇನೆ. ಈ ಹಿಂದೆಯೇ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೆ. ಇದೀಗ ಅಧಿಕೃತವಾಗಿ ಪಕ್ಷ ಸೇರ್ಪಡೆಗೊಂಡಿದ್ದು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇನೆ ಎಂದರು.
ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡಲಿದ್ದೇನೆ ಎಂದು ಇದೇ ವೇಳೆ ತಿಳಿಸಿದ ಡಾ.ಇಂದ್ರೇಶ್.
ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಶೋಧ, ತಾಲೂಕು ಅಧ್ಯಕ್ಷೆ ಸವಿತಾ ರಮೇಶ್, ರಾಜ್ಯ ಉಪಾಧ್ಯಕ್ಷೆ ಪದ್ಮ ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಮಂಗಳನವೀನ್, ಮುಖಂಡರಾದ ಎಚ್.ಡಿ.ಶ್ರೀಧರ್, ಕೆನ್ನಾಳು ದುರ್ಗೆಶ್, ಚಿಟ್ಟನಹಳ್ಳಿ ದೇವರಾಜು, ಬೀರಶೆಟ್ಟಹಳ್ಳಿ ಮಧು, ನವೀನ್ ಚಿಕ್ಕಮರಳಿ ಇತರರಿದ್ದರು.