ವರದಿ :ದತ್ತು ಕಮ್ಮಾರ
ಕೊಪ್ಪಳ: ಕೊರೊನಾ ಸೋಂಕಿತರು ಎಂದರೆ ಭಯ ಪಡುವ ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸ್ಥಳೀಯ ನಿರ್ಮಿತಿ ಕೇಂದ್ರದ ಬಡಾವಣೆಯ ಸಲೀಂ ಅಳವಂಡಿ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಜೀವದ ಹಂಗು ತೊರೆದು ಸೋಂಕಿತರ ಆರೈಕೆಯಲ್ಲಿ ತೊಡಗಿದ್ದಾರೆ.
ನಗರದ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಮೊದಲೆಲ್ಲ ಒಳಗಡೆ ಪ್ರವೇಶಕ್ಕೆ ಅವಕಾಶವಿರಲಿಲ್ಲ. ನಾನು ಸೋಂಕಿತರ ಸೇವೆ ಮಾಡಬೇಕು. ಊಟೋಪಚಾರ, ಚಿಕಿತ್ಸೆಗೆ ನೆರವಾಗಬೇಕು. ಹೀಗಾಗಿ ಸ್ವಯಂ ಸೇವಕನಾಗಿ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಅವರನ್ನು ಕಾಡಿ ಬೇಡಿಕೊಂಡ ಬಳಿಕ ಜಿಲ್ಲಾಡಳಿತ ಸಮ್ಮತಿಸಿದೆ. ಇಂದಿಗೂ ಸಲೀಂ ಅಳವಂಡಿ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದಾನೆ. ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲಿ ಕೋವಿಡ್ ಪರೀಕ್ಷೆ ಮಾಡಿಸುತ್ತಾರೆ? ಹೇಗೆ ಆಸ್ಪತ್ರೆಗೆ ದಾಖಲಾಗಬೇಕು? ಎನ್ನುವ ಬಗ್ಗೆ ಮಾಹಿತಿ ನೀಡುವುದಲ್ಲದೇ, ಕೋವಿಡ್ ಪರೀಕ್ಷೆ ಮಾಡಿಸುತ್ತಾನೆ. ಅವರ ವರದಿ ಪಾಜಿಟಿವ್ ಬಂದರೆ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡುತ್ತಾನೆ.
ಈ ಹಿಂದೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳು ಇಲ್ಲದಿದ್ದಾಗ ಸಲೀಂ ಸ್ವತಃ ಜಿಲ್ಲಾಧಿಕಾರಿ ಕಚೇರಿ ಮುಂದೆ ಏಕಾಂಗಿಯಾಗಿ ಕುಳಿತುಕೊಂಡು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದ. ಕೋವಿಡ್ ಇಲ್ಲದ ವೇಳೆ ಹಿಂದೆ ಸಾಮಾನ್ಯ ದಿನದಲ್ಲೂ ಗರ್ಭಿಣಿ, ವೃದ್ಧರು, ವಿಕಲಚೇತನರು ಸೇರಿ ಯಾರೇ ಕರೆ ಮಾಡಿದರೂ ಕೆಲ ನಿಮಿಷಗಳಲ್ಲಿ ಅವರಿದ್ದ ಸ್ಥಳಕ್ಕೆ ತೆರಳಿ ಅವರ ಸಮಸ್ಯೆ ಅರಿತು ಎಲ್ಲಿಗೆ ತೆರಳಬೇಕು, ಯಾರಿಂದ ಚಿಕಿತ್ಸೆ ಕೊಡಿಸಬೇಕು ಎಂಬುದನ್ನರಿತು ಅವರನ್ನು ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾನೆ.