Advertisement

ಸಾಮಾಜಿಕ ಭದ್ರತೆ ಯೋಜನೆ ಶೀಘ್ರ

06:30 AM Oct 18, 2017 | Team Udayavani |

ಹೊಸದಿಲ್ಲಿ: ಸಮಾಜದ ಎಲ್ಲ  ಸ್ತರದ ಜನರನ್ನೂ ಒಳಗೊಳ್ಳುವ ಬೃಹತ್‌ ಸಾಮಾಜಿಕ ಭದ್ರತಾ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ. ಅಂದಾಜು 1.2 ಲಕ್ಷ ಕೋಟಿ ರೂ. ಮೌಲ್ಯದ ಈ ಯೋಜನೆ ಬಡವರು, ಶ್ರೀಮಂತರು ಹಾಗೂ ಮಧ್ಯಮ ವರ್ಗದವರೆಲ್ಲರನ್ನೂ ಒಳಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಸರಕಾರದ “ಸಬ್‌ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಉದ್ಘೋಷಕ್ಕೆ ಪೂರಕವಾಗಿರಲಿದೆ. ಅವರವರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಈ ಯೋಜನೆಯಡಿ ಜನರು ಸೌಲಭ್ಯ ಪಡೆಯಬಹುದಾಗಿದೆ.

Advertisement

ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಡಿಯನ್ವಯ, ದೇಶದಲ್ಲಿ ಶೇ.20 ರಷ್ಟಿರುವ ಬಡವರಿಗೆ ಸರಕಾರವೇ ಆರ್ಥಿಕ ನೆರವು ನೀಡಲಿದೆ. ಇನ್ನೊಂದೆಡೆ ಉತ್ತಮ ಆದಾಯ ಹೊಂದಿರುವವರು ತಾವಾಗಿಯೇ ಈ ಯೋಜನೆಗೆ ಚಂದಾದಾರರಾಗಬಹುದಾಗಿದೆ. ಅಲ್ಲದೆ ಕಡಿಮೆ ಆದಾಯ ಹೊಂದಿರುವ ಅಸಂಘಟಿತ ವಲಯದ ಕಾರ್ಮಿಕರು ಕಡಿಮೆ ಪ್ರಮಾಣದ ಮೊತ್ತವನ್ನು ಈ ಯೋಜನೆಗೆ ಮೀಸಲಿಟ್ಟು, ಹೆಚ್ಚು ಅನುಕೂಲ ಪಡೆಯಬಹುದು. ಈ ಯೋಜನೆ ಅಡಿಯಲ್ಲಿ ಪಿಂಚಣಿ, ವಿಮೆ ಸೌಲಭ್ಯದ ಜತೆಗೆ, ಮೆಟರ್ನಿಟಿ ಕವರೇಜ್‌ ಕಡ್ಡಾಯವಾಗಿರಲಿದೆ. ಇದರ ಜತೆಗೆ ಐಚ್ಛಿಕ ವೈದ್ಯಕೀಯ, ಅನಾರೋಗ್ಯ ಮತ್ತು ನಿರುದ್ಯೋಗ ಕವರೇಜ್‌ ಅನ್ನೂ ಪಡೆಯಬಹುದಾಗಿದೆ.

ಲೋಕಸಭೆ ಚುನಾವಣೆಗೆ ಯೋಜನೆ
ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯ ಲ್ಲಿರಿಸಿಕೊಂಡು ಇದನ್ನು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ಘೋಷಿಸಿ, ಚುನಾವಣೆ ವೇಳೆ ಜನರಿಗೆ ತಲುಪುವಂತೆ ಮಾಡುವುದು ಸರಕಾರದ ಉದ್ದೇಶವಾಗಿದೆ. ಆದರೆ ಇದಕ್ಕೆ ಹಣಕಾಸು ಮೂಲದ ಸಾಧ್ಯಾಸಾಧ್ಯತೆಗಳ ಪರಿಶೀಲನೆ ನಡೆಯುತ್ತಿದೆ. ಹಣಕಾಸಿನ ಮೂಲ ನಿಗದಿಪಡಿಸುತ್ತಿದ್ದಂತೆಯೇ ಯೋಜನೆ ಘೋಷಣೆ ಮಾಡುವ ಸಾಧ್ಯತೆಯಿದೆ. ಯೋಜನೆಯ ಚಂದಾದಾರರಿಂದ ಸಂಗ್ರಹಿಸುವ ಹಣವು ಒದಗಿಸಲಾಗುವ ಲಾಭಗಳಿಗೂ ಸಾಲುತ್ತದೆಯೇ ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ.

45 ಕೋಟಿ ಉದ್ಯೋಗಸ್ಥರಿಗೆ ಲಾಭ
ಸದ್ಯ ದೇಶದಲ್ಲಿ 45 ಕೋಟಿ ಉದ್ಯೋಗಸ್ಥರಿದ್ದಾರೆ. ಈ ಪೈಕಿ ಕೇವಲ ಶೇ. 10ರಷ್ಟು ಉದ್ಯೋಗಿಗಳು ಸಂಘಟಿತ ವಲಯದವರಾಗಿದ್ದು, ಪಿಎಫ್, ಇಎಸ್‌ಐ, ವಿಮೆ ಸಹಿತ ವಿವಿಧ ರೀತಿಯ ಸಾಮಾಜಿಕ ಭದ್ರತೆ ಯೋಜನೆಯ ಫ‌ಲಾನುಭವಿಗಳಾಗಿದ್ದಾರೆ. ಆದರೆ ಉಳಿದವರಿಗೆ ಕನಿಷ್ಠ ವೇತನವೂ ಸಿಗುತ್ತಿಲ್ಲ. ಜತೆಗೆ ಸಾಮಾಜಿಕ ಭದ್ರತೆ ಕವರೇಜ್‌ ಕೂಡ ಇಲ್ಲ. ಹೀಗಾಗಿ ಈ ವರ್ಗದವರಿಗೆ ಸಾಮಾಜಿಕ ಭದ್ರತೆ ಯೋಜನೆಯನ್ನು ಜಾರಿಗೊಳಿಸಲು ಸುಮಾರು 1.2 ಲಕ್ಷ ಕೋಟಿ ರೂ.ಬೇಕಾಗುತ್ತದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next