Advertisement

ಸೋಷಿಯಲ್‌ ಮೀಡಿಯಾ ಅತಿಬಳಕೆ ಮಾಡಲ್ಲ

12:50 PM Dec 18, 2017 | |

* ಅಂಜನಿಪುತ್ರದಲ್ಲಿ ಏನೆಲ್ಲಾ ನಿರೀಕ್ಷಿಸಬಹುದು?
ಇದು ಪಕ್ಕಾ ಆ್ಯಕ್ಷನ್‌ ಚಿತ್ರ. ಇದೊಂದು ಪವರ್‌ಫ‌ುಲ್‌ ಕಥೆ. ಅದಕ್ಕೊಂದು ಪವರ್‌ಫ‌ುಲ್‌ ಶೀರ್ಷಿಕೆ ಬೇಕಿತ್ತು. ಹರ್ಷ ಅವರಿಗೆ ಆಂಜನೇಯ ಅಂದರೆ ಪ್ರೀತಿ. ಎಲ್ಲರಿಗೂ “ಅಂಜನಿ ಪುತ್ರ’ ಟೈಟಲ್‌ ಇಷ್ಟ ಆಯ್ತು. ಅದನ್ನೇ ಫಿಕ್ಸ್‌ ಮಾಡಿದ್ವಿ. ಇಲ್ಲಿ ಒಳ್ಳೆಯ ಫ್ಯಾಮಿಲಿ ಸೆಂಟಿಮೆಂಟ್‌, ಎಮೋಷನಲ್‌ ಇದೆ. ಇದರೊಂದಿಗೆ ಅಪ್ಪಟ ಮನರಂಜನೆಯೂ ಉಂಟು.

Advertisement

* ಇದು “ಪೂಜೈ’ ಅವತರಣಿಕೆ ಅಲ್ಲಿಗೂ ಇಲ್ಲಿಗೂ ಇರುವ ವ್ಯತ್ಯಾಸ?
ಅದಕ್ಕೂ, ಇದಕ್ಕೂ ಸಾಕಷ್ಟು ವತ್ಯಾಸವಿದೆ. ಒಂದೇ ರೀತಿಯ ಟ್ರಾವೆಲಿಂಗ್‌ ಇದ್ದರೂ, ಶೇ.40 ರಷ್ಟು ಇಲ್ಲಿ ಬದಲಾವಣೆಯಾಗಿದೆ. ಅದನ್ನು ನೋಡಿ, ಇದನ್ನೂ ನೋಡಿದವರಿಗೆ ಇರುವ ವ್ಯತ್ಯಾಸ ಗೊತ್ತಾಗಲಿದೆ. ಹರ್ಷ ಅವರ ಸ್ಟೈಲ್‌ಗೆ ತಕ್ಕ ಸಿನಿಮಾ ಇದು. ಇಲ್ಲಿ ಡೈಲಾಗ್‌, ಸಾಂಗ್‌ ಮತ್ತು ಮೇಕಿಂಗ್‌ ಹೊಸಬಗೆಯದ್ದು.

* ನಿರ್ದೇಶಕ ಹರ್ಷ ಅವರ ಬಗ್ಗೆ ಹೇಳುವುದಾದರೆ?
ನಾನು ಹರ್ಷ ಅವರನ್ನು ಒಬ್ಬ ಒಳ್ಳೆಯ ಕೋರಿಯಾಗ್ರಫ‌ರ್‌ ಆಗಿ ನೋಡಿದ್ದೆ. ಈಗ ಡೈರೆಕ್ಟರ್‌ ಆಗಿ ನೋಡಿದ್ದೇನೆ. ಅವರು ಇಂಡಸ್ಟ್ರಿಗೆ ಬರುವ ಮುಂಚೆಯೇ ಪರಿಚಯವಾದವರು. ಸುಮಾರು ಹದಿನೆಂಟು ವರ್ಷದ ಒಡನಾಟ ನಮ್ಮದು. ಆ ಫ್ರೆಂಡ್‌ಶಿಪ್‌ ಚೆನ್ನಾಗಿದ್ದರಿಂದ ಸುಲಭವಾಗಿಯೇ ಈ ಚಿತ್ರ ಮಾಡೋಕೆ ಸಾಧ್ಯವಾಯ್ತು. ಎಲ್ಲರೂ ನಗುತ್ತಲೇ ಕೆಲಸ ಮಾಡಿದ್ದೇವೆ. ನನಗೆ ಅನಿಸಿದ್ದನ್ನು ಹೇಳುತ್ತಿದ್ದೆ, ಅವರಿಗೆ ಅನಿಸಿದ್ದನ್ನು ಹೇಳುತ್ತಿದ್ದರು. ಮುಕ್ತ ಮನಸ್ಸಿನಿಂದ ಚಿತ್ರ ಮಾಡಿದ್ದರಿಂದ ಔಟ್‌ಪುಟ್‌ ಚೆನ್ನಾಗಿ ಬಂದಿದೆ.

* ರಿಮೇಕ್‌ ಒಪ್ಪೋಕೆ ಕಾರಣ?
“ಪೂಜೈ’ ಚಿತ್ರವನ್ನು ನಾನು ಮಾಡೋದು ಅಂತಾಗಿತ್ತು. ಆಮೇಲೆ ಅವರು ಮಾಡ್ತಾರಂತೆ, ಇವರು ಮಾಡ್ತಾರಂತೆ ಎಂಬ ಸುದ್ದಿ ಸುತ್ತಾಡುತ್ತಲೇ ಇತ್ತು. ಕೊನೆಗೆ ಅದು ನನ್ನ ಬಳಿಗೇ ಬಂತು. ಆ ಟೈಮ್‌ನಲ್ಲಿ ಒಂದು ಸ್ಕ್ರಿಪ್ಟ್ ರೆಡಿಯಾಗುತ್ತಿತ್ತು. ಅದು ಬೇಗ ಆಗೋದಿಲ್ಲ ಅಂತ ತಿಳಿದ ಮೇಲೆ, “ಪೂಜೈ’ ಮಾಡುವ ನಿರ್ಧಾರವಾಯ್ತು. ಹಾಗಾಗಿ ಇದನ್ನು ಮಾಡಬೇಕಾಯ್ತು. 

* “ರಾಜಕುಮಾರ’ ಹಿಟ್‌ ಬಳಿಕ ನಿರೀಕ್ಷೆ ಜಾಸ್ತಿ ಇದೆ ಅಲ್ವಾ?
ನಿಜ, ಆದರೆ, ನಾನು “ರಾಜಕುಮಾರ’ನ ದೊಡ್ಡ ಭಾರ ಹೊತ್ತಿಲ್ಲ. ಪ್ರತಿ ಸಿನಿಮಾದಲ್ಲೂ ನಾನು ಒಬ್ಬ ನಟನಾಗಿ ಎಫ‌ರ್ಟ್‌ ಹಾಕ್ತೀನಿ. ಎಲ್ಲಾ ಚಿತ್ರಗಳಲ್ಲೂ ಕಥೆ, ಡೈಲಾಗ್‌ ಚೇಂಜ್‌ ಇದ್ದೇ ಇರುತ್ತೆ. ಇಲ್ಲೂ ಆ ಬದಲಾವಣೆ ಇದೆ. ಅಂತಿಮವಾಗಿ ಜನರ ತೀರ್ಪು ಮುಖ್ಯವಾಗುತ್ತೆ.

Advertisement

* “ಪಿಆರ್‌ಕೆ’ ಆಡಿಯೋ ಕಂಪೆನಿ ಬಗ್ಗೆ?
ನನ್ನ ಪಿಆರ್‌ಕೆ ಆಡಿಯೋ ಕಂಪೆನಿ ಮೂಲಕ “ಅಂಜನಿ ಪುತ್ರ’ ಆಡಿಯೋ ಹೊರಬಂದಿದೆ. ಎಲ್ಲೆಡೆ ಮೆಚ್ಚುಗೆ ಸಿಕ್ಕಿದೆ. ಈಗ ಡಿಜಿಟಲ್‌ ಯುಗ. ಹಾಗಾಗಿ ಆಡಿಯೋ ತಗೋತ್ತಿಲ್ಲ. ನಾವೊಂದು ವೇದಿಕೆ ಹುಟ್ಟುಹಾಕಿದ್ದೇವಷ್ಟೇ. ಮುಂದಿನ ದಿನಗಳಲ್ಲಿ ಹೊಸ ಪ್ರತಿಭಾವಂತರಿಗೊಂದು ವೇದಿಕೆ ಕಲ್ಪಿಸಿ, ಆ ಮೂಲಕ ಅವರ ಆಲ್ಬಂ ಹೊರ ತರುವ ಆಲೋಚನೆ ಇದೆ.

* 2017 ಹೇಗಿತ್ತು?
– ಈ ವರ್ಷ ಸಾಕಷ್ಟು ಘಟನೆಗಳಾದವು. ದೊಡ್ಡ ಲಾಸ್‌ ಅಂದರೆ, ತಾಯಿ ಕಳೆದುಕೊಂಡಿದ್ದು. ಎಲ್ಲವೂ ಸಡನ್‌ ಆದಂತಾಯ್ತು. ತುಂಬಾನೇ ಮಿಸ್‌ ಮಾಡ್ಕೊàತ್ತಿದ್ದೀವಿ. ಆ ಘಟನೆ ಮರೆಯೋಕೆ ಸಾಧ್ಯವಿಲ್ಲ. ಆದರೆ, ಏನಾಗಬೇಕೋ, ಅದು ಆಗಲೇಬೇಕು. ನಮಗೆ ನಾವೇ ಸಮಾಧಾನ ಮಾಡಿಕೊಂಡಿದ್ದೇವೆ. ಇನ್ನು, ನನ್ನ ಪಿಆರ್‌ಕೆ. ಬ್ಯಾನರ್‌ ಆಯ್ತು. ಅದು ನಮ್ಮ ಖುಷಿಗೆ. ಅಮ್ಮ 80 ಪ್ಲಸ್‌ ಚಿತ್ರ ನಿರ್ಮಿಸಿದ್ದಾರೆ. ನಾವು ಮುಂದುವರೆಸಿಕೊಂಡು ಹೋಗುವ ಆಸೆ ಇದೆ.

* ನಿಮ್ಮ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಚಿತ್ರ ಎಲ್ಲಿಗೆ ಬಂತು?
“ಕವಲು ದಾರಿ’ ಶೇ.60 ರಷ್ಟು ಮುಗಿದಿದೆ. ಎರಡನೇ ಚಿತ್ರ ಜನವರಿಯಲ್ಲಿ ಶುರುವಾಗಲಿದೆ. ರಾಧಾಕೃಷ್ಣ ಅದರ ನಿರ್ದೇಶಕರು. ಶೀರ್ಷಿಕೆ ಫಿಕ್ಸ್‌ ಆಗಿದೆ. ಆದರೆ, ಈಗಲೇ ಹೇಳುವುದಿಲ್ಲ.

* ಶಶಾಂಕ್‌ ಜತೆ ಹೊಸ ಸಿನ್ಮಾ ಯಾವಾಗ?
– ಮುಂದೆ ಅದೇ ಆಗಬೇಕು. ಅದು ನಮ್ಮ ಬ್ಯಾನರ್‌ನಲ್ಲೇ ಆಗಲಿದೆ.

* ನೀವೀಗ ಸೋಷಿಯಲ್‌ ಮೀಡಿಯಾಗೂ ಬಂದಿದ್ದೀರಿ?
ಹೌದು, ಆದರೆ, ನಾನು ಯಾವತ್ತೂ ಪರ್ಸನಲ್‌ ವಿಷಯ ಶೇರ್‌ ಮಾಡಿಲ್ಲ. ನಾವು ಹೊಸ ಬ್ಯಾನರ್‌, ಹೊಸ ಚಿತ್ರ ಮಾಡುತ್ತಿದ್ದೇವೆ. ಹಾಗಾಗಿ ಸೋಷಿಯಲ್‌ ಮೀಡಿಯಾ ಮೂಲಕ ಒಂದಷ್ಟು ಹಂಚಿಕೊಳ್ಳುತ್ತಿದ್ದೇವೆ. ಅದೊಂದು ದೊಡ್ಡ ವೇದಿಕೆ. ಇತ್ತೀಚೆಗೆ ಶಿವಣ್ಣ ಮತ್ತು ನಾನು ಒಟ್ಟಿಗೆ ಲೈವ್‌ ಬಂದಿದ್ವಿ.

* ಸೋಷಿಯಲ್‌ ಮೀಡಿಯಾದ ಪ್ಲಸ್ಸು, ಮೈನಸ್‌ ಬಗ್ಗೆ ಹೇಳ್ಳೋದಾದರೆ?
ನನಗೆ ನನ್ನ ವಿಷಯ ತಲುಪಿಸೋದಷ್ಟೇ ಮುಖ್ಯ. ನೆಗೆಟಿವ್‌ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಯಾರು ಏನೇ ಅಂದರೂ ಗಂಭೀರವಾಗಿ ತೆಗೆದುಕೊಳ್ಳಲ್ಲ. ಅವರವರ ಖುಷಿಗೆ ಮಾತಾಡ್ತಾರೆ. ಅದಕ್ಕೆ ನಾವೇಕೆ ತಲೆಕೆಡಿಸಿಕೊಳ್ಳಬೇಕು. ಒಬ್ಬೊಬ್ಬರಿಗೆ ಒಬ್ಬೊಬ್ಬ ನಟ ಇಷ್ಟ. ಇಷ್ಟ ಇರುವವರು ಹೊಗಳುತ್ತಾರೆ. ಇಲ್ಲದವರು ತೆಗಳುತ್ತಾರೆ. ಅದರ ಬಗ್ಗೆ ಸುಮ್ಮನಿರುತ್ತೇನೆ. 

* ಈಗ ಪುನಃ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದೀರಿ?
– ಹೌದು, ನನಗದು ತುಂಬ ಖುಷಿ ಕೊಡುತ್ತಿದೆ. ಯಾಕೆಂದರೆ, ಎಲ್ಲಾ ವರ್ಗದ ಜನ ಅಲ್ಲಿ ಸಿಗ್ತಾರೆ. ಅವರು ತೋರಿಸುವ ಪ್ರೀತಿ ಅಪಾರ. ಅಪ್ಪಾಜಿ ಬಗ್ಗೆ ಎಲ್ಲರೂ ಎಷ್ಟೊಂದು ಅಭಿಮಾನ ಇಟ್ಟುಕೊಂಡಿದ್ದಾರೆ ಎಂಬುದು ಅಲ್ಲಿ ಹೆಚ್ಚು ಗೊತ್ತಾಗುತ್ತೆ. ಅದರಲ್ಲಿ ನನಗೆ ತೃಪ್ತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next