ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ದಾ ವಾಕರ್ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದೆ. ನಾನಾ ಆಯಾಮದಲ್ಲಿ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಮಂದಿ ಘಟನೆಯನ್ನು ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಸ್ಟಾರ್ ( social media influencer) ಯೂಟ್ಯೂಬರ್ ಆರುಷ್ ಗುಪ್ತಾ ಶ್ರದ್ದಾ ವಾಕರ್ ವಿಚಾರವನ್ನಿಟ್ಟುಕೊಂಡು ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿರುವುದು ಹಲವರ ಕೆಂಗೆಣ್ಣಿಗೆ ಗುರಿಯಾಗಿದೆ.
ವಿಡಿಯೋದಲ್ಲಿ ಪ್ರಕರಣದ ಬಗ್ಗೆ ಯಾವುದೇ ಸರಿಯಾದ ಜ್ಞಾನವಿಲ್ಲದೆ – ಇಬ್ಬರು ಪ್ರೇಮಿಗಳ ನಡುವೆ ಏನಾಯಿತೆಂದು ತಮ್ಮದೇ ಧ್ವನಿಯಲ್ಲಿ ಡಬ್ ಮಾಡಿ ರೀಲ್ಸ್ ಮಾಡಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಶ್ರದ್ಧಾ ಹಾಗೂ ಅಫ್ತಾಬ್ ಇಬ್ಬರ ಪಾತ್ರವನ್ನು ತಾವೇ ಮಾಡಿ ಶ್ರದ್ಧಾಳ ಧ್ವನಿಯಲ್ಲಿ “ನಾನು ನಿನ್ನಗಾಗಿ ಅಪ್ಪ- ಅಮ್ಮನನ್ನು ಬಿಟ್ಟು ಬಂದಿದ್ದೇನೆ” ಎಂದು ಹೇಳುವ ಹಾಗೆ ಆ ಮಾತಿಗೆ “ಅಫ್ತಾಬ್ ಪರವಾಗಿಲ್ಲ ನಾನು ಮತ್ತು ನೀನು ಲೀವಿಂಗ್ ರಿಲೇಷನ್ ಶಿಪ್ ನಲ್ಲಿರುವ” ಎಂದು ಹೇಳುವುದನ್ನು ಮಾತಿನ ಮೂಲಕ ನಟಿಸುವ ಹಾಗೆ ಆರುಷ್ ಗುಪ್ತಾ ಮಾಡಿ ತೋರಿಸಿದ್ದಾರೆ.
Related Articles
ವಿಡಿಯೋದ ಕೊನೆಯಲ್ಲಿ ಇಬ್ಬರ ಜಗಳ ಹಾಗೂ ದುರಂತದ ಅಂತ್ಯದ ಬಗ್ಗೆ ಹೇಳಲಾಗಿದೆ. ʼಶಾಂತಿ ಓಂʼನ ದಾನಸ್ತಾನ್-ಇ-ಓಂ ಶಾಂತಿ ಓಂ ಹಾಡನ್ನು ವಿಡಿಯೋದ ಹಿನ್ನೆಲೆಯಲ್ಲಿ ಬಳಸಿದ್ದಾರೆ.
ವಿಡಿಯೋ ಮುಗಿಸುವ ಮುನ್ನ ಜಸ್ಟೀಸ್ ಫಾರ್ ಶ್ರದ್ಧಾ ಎಂದು ಬರೆದಿದ್ದಾರೆ. ಇದೊಂದು ಜಾಗೃತಿ ಮೂಡಿಸುವ ವಿಡಿಯೋವೆಂದು ಆರುಷ್ ಹೇಳುತ್ತಾರೆ. ಆದರೆ ಈ ವಿಚಾರದ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳದೇ ಅದನ್ನು ರೀಲ್ಸ್ ಕಂಟೆಂಟ್ ಮಾಡಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಎಲ್ಲ ವಿಚಾರವೂ ಕಂಟೆಂಟ್ ಅಲ್ಲ. ಪ್ರಕರಣದ ಬಗ್ಗೆ ಜಾಗೃತಿ ಮೂಡಿಸುವುದು ಅವರ ಉದ್ದೇಶವಾಗಿದ್ದರೂ ಸಹ, ಅವರು ಅದನ್ನು ತೋರಿಸದೆಯೇ ಮಾಡಬಹುದಿತ್ತು. ಇದು ಕಾನೂನು ಸಮಸ್ಯೆಯಾಗಿದೆ. ಇದೊಂದು ಹೆಚ್ಚು ಸೂಕ್ಷ್ಮವಾದ ವಿಷಯವಾಗಿದೆ, ”ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಮತ್ತೊಬ್ಬರು ಮಾಡಿದ ಕೃತ್ಯವನ್ನು ಸಮರ್ಥಿಸಲು ಈ ವಿಡಿಯೋದಲ್ಲಿ ಪ್ರಯತ್ನಿಸಿದ್ದಾರೆ ಎಂದಿದ್ದಾರೆ. ಇನ್ನೊಬ್ಬರು ಆಕ್ರೋಶಗೊಂಡು “ಇಂಥ ಹುಚ್ಚು ಮನಸ್ಸಿನ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಜಾಗೃತಿ ಮೂಡಿಸುವ ವಿಡಿಯೋವಲ್ಲ, ಲೈಕ್ಸ್, ಫಾಲೋವರ್ಸ್ ಗಾಗಿ ಮಾಡಿರುವ ವಿಡಿಯೋ” ಎಂದಿದ್ದಾರೆ.
ಆರುಷ್ ಗುಪ್ತಾ 179,000 ಫಾಲೋವರ್ಸನ್ನು ಹೊಂದಿದ್ದಾರೆ. ಯೂಟ್ಯೂಬ್ ನಲ್ಲಿ 300,000 ಸಬ್ ಸ್ಕೈಬರ್ಸನ್ನು ಹೊಂದಿದ್ದಾರೆ.