ಬೆಂಗಳೂರು: ಸಿನಿಮಾ, ಫ್ಯಾಶನ್ ಮತ್ತು ರಾಜಕೀಯಕ್ಕೆ ನೀಡಿದಷ್ಟು ಪ್ರಚಾರವನ್ನು ಮಾಧ್ಯಮಗಳು ಸಾಮಾಜಿಕ ಕ್ಷೇತ್ರಕ್ಕೆ ನೀಡುತ್ತಿಲ್ಲ ಎಂದು ಹಿರಿಯ ಪತ್ರಕರ್ತ ಈಶ್ವರ ದೈತೋಟ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಸಾಮಾಜಿಕ ಕ್ಷೇತ್ರದಲ್ಲಿ ಹಲವು ಮಂದಿ ದುಡಿಯುತ್ತಿದ್ದು, ಈ ಕ್ಷೇತ್ರಕ್ಕೂ ಮಾಧ್ಯಮಗಳು ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.
ಯಾರದೋ ಒತ್ತಾಯಕ್ಕೆ ಮಣಿದು ಪ್ರಶಸ್ತಿ ನೀಡಿ ಗೌರವಿಸದೆ ಸಾಧಕರನ್ನು ಗುರುತಿಸಿ, ಗೌರವಿಸಬೇಕು. ಸರ್ಕಾರ ನೀಡುವ ಪ್ರಶಸ್ತಿಗಳಿಗೆ ಹಲವರು, ರಾಜಕೀಯ ಮುಖಂಡರ ಮನೆ-ಮನೆ ಅಲೆಯುತ್ತಾರೆ. ಆದರೆ, ನಿಜವಾದ ಸಾಧಕರು ಎಲೆ ಮರೆಕಾಯಂತೆ ಕೆಲಸ ಮಾಡುತ್ತಿದ್ದು, ಅವರನ್ನು ಗುರುತಿಸಿ ಗೌರವಿಸಬೇಕಿದೆ ಎಂದು ತಿಳಿಸಿದರು.
ರಾಜೀವ್‌ಗಾಂಧಿ ವಿವಿಯ ಪ್ರಾಂತೀಯ ನಿರ್ದೇಶಕ ಡಾ.ಜಿ.ಎಚ್.ಇಮ್ರಾಪುರ ಮಾತನಾಡಿ, ಯಾವುದೇ ಪ್ರತಿಫಲ ನಿರೀಕ್ಷೆ ಇಲ್ಲದೆ ಸೇವೆ ಮಾಡಿದರೆ ಅದರಲ್ಲಿ ಸಿಗುವಂತಹ ತೃಪ್ತಿಗೆ ಸಾಟಿಯಿಲ್ಲ. ಪ್ರಶಸ್ತಿಗಳು ವ್ಯಕ್ತಿಗತ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶ್ಯಾಮಸುಂದರ್ ಮಾತನಾಡಿ, ನಾನು ಈಗಲೂ 10 ರೂ. ಫೀಸ್ ಪಡೆದು ಬಡ ರೋಗಿಗಳ ಸೇವೆ ಮಾಡುತ್ತಿದ್ದೇನೆ. ಇದರಲ್ಲಿ ಸಿಗುವ ಖುಷಿ ಬೇರಾವ ಕೆಲಸದಲ್ಲೂ ನನಗೆ ಸಿಗುವುದಿಲ್ಲ ಎಂದರು. ಶಿಕ್ಷಣ ತಜ್ಞ ಜಿ.ಎಚ್.ನಾಗರಾಜಯ್ಯ ಶೆಟ್ಟಿ, ಸಿ.ಎಸ್.ಕೃಷ್ಣಮೂರ್ತಿ, ಹಿರಿಯ ವಕೀಲ ಡಿ.ಎಚ್.ಮೋಖಾಶಿ ಮತ್ತಿತರರು ಉಪಸ್ಥಿತರಿದ್ದರು.