ಬಾಗಲಕೋಟೆ: ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಿ ಹೋಟೆಲ್‌ಗೆ ಬರುವ ಜನರ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ನಗರಸಭೆಯ ಪೌರಾಯುಕ್ತ ಮುನಿಶಾಮಪ್ಪ ಸೂಚಿಸಿದರು.
ನಗರಸಭೆಯ ಸಭಾಭವನದಲ್ಲಿ ಜರುಗಿದ ಹೋಟೆಲ್, ಸಲೂನ್ ಮಾಲೀಕರ ಮತ್ತು ಮಸೀದಿಯ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಹೋಟೆಲ್, ರೆಸ್ಟೋರೆಂಟ್, ಸಲೂನ್, ಪಾರ್ಲರ್, ಧಾರ್ಮಿಕ ಸ್ಥಳಗಳಿಗೆ ಅನುಮತಿ ನೀಡಿದೆ. ಆದರೆ ಸರಕಾರ ನೀಡಿರುವ ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೋವಿಡ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಹೋಟೆಲ್‌ಗೆ ಬರುವವರನ್ನು ಥರ್ಮಲ್ ಟೆಸ್ಟಿಂಗ್ ಮಾಡಲು ತಿಳಿಸಿದರು.
ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಸ್ಥಳೀಯ, ಹೊರ ರಾಜ್ಯ, ಹೊರ ದೇಶದಿಂದ ಬರುವದರಿಂದ ಅವರ ಮೇಲೆ ನಿಗಾ ವಹಿಸಬೇಕು. ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹೋಟೆಲ್‌ನಲ್ಲಿ ಕೈತೊಳೆಯಲು ಹ್ಯಾಂಡ್ ಸ್ಯಾನಿಟೈಸರ್, ಸೋಪನ್ನು ವಾಷಬೇಸ್‌ನಲ್ಲಿ ಇಡಬೇಕು. ಸ್ನಾನಗೃಹ, ಶೌಚಾಲಯಗಳ ಸ್ವತ್ಛತೆ ಕಾಪಾಡಿಕೊಳ್ಳಬೇಕು. ಊಟ, ಉಪಹಾರ ನಂತರ ಪ್ಲೇಟ್, ಗ್ಲಾಸ್, ಲೋಟಾ ಮತ್ತು ಕಪ್‌ಗ್ಳನ್ನು ತಕ್ಷಣವೇ ಬಿಸಿ ನೀರಿನಲ್ಲಿ ಸ್ವಚ್ಛವಾಗಿ ತೊಳೆಯಲು ತಿಳಿಸಿದರು. ಸಾರ್ವಜನಿಕರಿಗೆ ಕುಡಿಯಲು ಬಿಸಿ ನೀರನ್ನು ಹಾಗೂ ಚೆನ್ನಾಗಿ ಬೇಯಿಸಿದ ಆಹಾರ ಪೂರೈಸಬೇಕು. ಹೋಟೆಲ್ ಮಾಲಿಕರು ಮತ್ತು ಕಾರ್ಮಿಕರು ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಬೆಳಗ್ಗೆ ಕಷಾಯ ಕುಡಿಯಲು ಸಲಹೆ ನೀಡಿದರು.
ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ: ಮಸೀದಿಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮಸೀದಿಗೆ ಬರುವ ಮಕ್ಕಳು ಮತ್ತು ವೃದ್ಧªರನ್ನು ಥರ್ಮಲ್ ಟೆಸ್ಟ್ ಮಾಡಬೇಕು. ಬೇರೆ ಬೇರೆ ದೇಶ, ರಾಜ್ಯಗಳಿಂದ ಬಂದವರಿದ್ದರೆ ಸ್ವಯಂ ಪ್ರೇರಿತರಾಗಿ ನಗರಸಭೆ ತಿಳಿಸಬೇಕು. ಇಲ್ಲವೇ ಬಸ್ ನಿಲ್ದಾಣದಲ್ಲಿರುವ ಕೋವಿಡ್-19 ಕ್ಲಿನಿಕ್ ಬಸ್‌ನಲ್ಲಿ ಪರೀಕ್ಷೆಗೆ ಒಳಪಡಿಸಲು ತಿಳಿಸಿದರು. ಮಸೀದಿಗಳಲ್ಲಿ ಸ್ಯಾನಿಟೈಸರ್ ಮಾಡಬೇಕು. ಆದಷ್ಟು ಮನೆಯಲ್ಲಿಯೇ ಪ್ರಾರ್ಥನೆ ಮಾಡಲು ತಿಳಿಸಬೇಕು. ಸ್ವತ್ಛತೆಗೆ ಗಮನ ಹರಿಸಿ ಪ್ರಾರ್ಥನೆಗೆ ಬರುವವರ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಪರಿಸರ ಅಭಿಯಂತರ ಹನಮಂತ ಕಲಾದಗಿ, ಹಿರಿಯ ಆರೋಗ್ಯ ನಿರೀಕ್ಷಕ ಸತೀಶ, ಚೌಡಿ, ಸುನಿಲಕುಮಾರ, ಶಶಿಕುಮಾರ, ಮೌನೇಶ ಉಪಸ್ಥಿತರಿದ್ದರು