Advertisement

ಶಿಕ್ಷಣದಿಂದಷ್ಟೇ ಸಮಾಜ ಪರಿವರ್ತನೆ

04:17 PM Oct 30, 2017 | Team Udayavani |

ಚಿತ್ರದುರ್ಗ: “ದುಡ್ಡೇ ದೊಡ್ಡಪ್ಪ, ವಿದ್ಯೆ ಅವರಪ್ಪ’ ಎಂಬಂತೆ ವಿದ್ಯಾವಂತರಾದರೆ ಸಮಾಜದ ಬದಲಾವಣೆ ಸೇರಿದಂತೆ ಏನನ್ನಾದರೂ ಸಾಧಿಸಬಹುದು. ಆದ್ದರಿಂದ ಪೋಷಕರು ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಕರೆ ನೀಡಿದರು.

Advertisement

ನಗರದ ಹೊರ ವಲಯದಲ್ಲಿನ ಚಳ್ಳಕೆರೆ ರಸ್ತೆಯ ವೆಂಕಟೇಶ್ವರ ಬಡಾವಣೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ “ದುರ್ಗದ ಚಿತ್ರ ಶಾಲೆಯತ್ತ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತರಲು ವಿನೂತನವಾದ ಯೋಜನೆಯನ್ನು ಜಿಲ್ಲಾಧಿಕಾರಿಯವರ ನೇತೃತ್ವದ ಅಧಿಕಾರಿಗಳ ತಂಡ ರೂಪಿಸಿದೆ. ರಾಜ್ಯದಲ್ಲೇ ವಿನೂತನ ಕಾರ್ಯಕ್ರಮ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದೆ ಸಮಾಜದಲ್ಲಿ ಬಡತನ ಹೆಚ್ಚಿತ್ತು. ಶೈಕ್ಷಣಿಕ ಅಭಿವೃದ್ಧಿಗೆ ಹಳಿಕೊಳ್ಳುವಂತಹ ಕಾರ್ಯಕ್ರಮವೂ ಇರಲಿಲ್ಲ. ಆದರೆ ಈಗ ಸರ್ಕಾರ ಜನರಿಗೆ ಅನ್ನಭಾಗ್ಯ, ಮಕ್ಕಳಿಗಾಗಿ ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯ ಒದಗಿಸುತ್ತಿದೆ. ಸರ್ಕಾರದ ಸವಲತ್ತು ಸದುಪಯೋಗಪಡಿಸಿಕೊಂಡು ಉನ್ನತಿ ಸಾಧಿಸಬೇಕು ಎಂದರು. ಮಕ್ಕಳು ಅಕ್ಷರ ವಂಚಿತರಾಗಿ ಸಮಾಜಕ್ಕೆ ಶಾಪವಾಗಬಾರದು. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಗ್ರಾಮ ಪಂಚಾಯಿತಿಗಳ ಸದಸ್ಯರ ಜವಾಬ್ದಾರಿ ಹೆಚ್ಚಿದೆ. ಜನರೇ ಸರ್ಕಾರಿ ಶಾಲೆಗಳ ಮಾಲೀಕರಾಗಿದ್ದು, ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗಳಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಲೆ ಬಿಟ್ಟಿದ್ದರು. ಇದನ್ನು ಗಮನಿಸಿದ ಶಿಕ್ಷಕರು ನೇರವಾಗಿ ಐದನೇ ತರಗತಿಗೆ ಸೇರಿಸಿದ್ದರಿಂದ ಇಂದು ಅತ್ಯುತ್ತಮ ಮುಖ್ಯಮಂತ್ರಿಯಾಗಿ ದೇಶಕ್ಕೆ ಮಾದರಿ ಆಡಳಿತ ನೀಡುತ್ತಿದ್ದಾರೆ ಎಂದರು. ಅ. 29 ರಿಂದ ಒಂದು ವಾರದವರೆಗೆ ಜಿಲ್ಲೆಯ 180 ಗ್ರಾಮಗಳಲ್ಲಿ ಅ ಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ಬೀದಿನಾಟಕ, ಜಾಥಾ ಏರ್ಪಡಿಸಲಾಗಿದ್ದು, ಈ ವಾಹನಗಳಿಗೆ ಸಚಿವರು ಹಸಿರು ನಿಶಾನೆ ತೋರಿದರು.

ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ತಾಪಂ ಅಧ್ಯಕ್ಷ ವೇಣುಗೋಪಾಲ್‌, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಂದ್ರ ನಾಯ್ಕ, ಸದಸ್ಯ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾ°, ಜಿಪಂ ಸಿಇಒ ರವೀಂದ್ರ, ಅಪರ ಜಿಲ್ಲಾಧಿಕಾರಿ ಟಿ. ರಾಘವೇಂದ್ರ, ಗ್ರಾಪಂ ಸದಸ್ಯೆ ರಜನಿ, ತಹಶೀಲ್ದಾರ್‌ ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ, ದೈಹಿಕ ಶಿಕ್ಷಣ ನಿರ್ದೇಶಕ ಜಯಣ್ಣ ಹಾಗೂ ವಿವಿಧ ಅಧಿಕಾರಿಗಳು ಇದ್ದರು.  

Advertisement

ಡಿಡಿಪಿಐ ರೇವಣಸಿದ್ದಪ್ಪ ಸ್ವಾಗತಿಸಿದರು. ವೆಂಕಟೇಶ್ವರ ಬಡಾವಣೆಯಿಂದ ಆರಂಭಗೊಂಡ ಜಾಥಾ, ಚಳ್ಳಕೆರೆ ಟೋಲ್‌ಗೇಟ್‌ ಮೂಲಕ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ತಲುಪಿತು.

ಮರಾಠಿ ಶಿಕ್ಷಕರ ನೇಮಕಕ್ಕೆ ಸೂಚನೆ 
ಜಾಥಾ ಅಂಗವಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಸಚಿವ ಎಚ್‌. ಆಂಜನೇಯ ಅವರು ರಸ್ತೆ ಬದಿಯ ಬಿಡಾರದ ಕಡೆ ಕಣ್ಣಾಯಿಸಿದರು. ಕೂಡಲೇ ಸ್ಥಳಕ್ಕೆ ಹೋಗಿ ಬಿಡಾರದಲ್ಲಿದ್ದವರ ಅಹವಾಲು ಆಲಿಸಿದರು. ಬಿಡಾರದಲ್ಲಿದ್ದ ಮಕ್ಕಳು ಮರಾಠಿಗರು ಎಂಬುದು ಗೊತ್ತಾಯಿತು. ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಆದ್ದರಿಂದ ಮರಾಠಿ ಶಿಕ್ಷಕರನ್ನು ನೇಮಕ ಮಾಡಿ ಗುಡಾರದಲ್ಲಿನ ಮಕ್ಕಳಿಗೆ ಶಿಕ್ಷಣ ಕಲಿಸಬೇಕು. ಸರ್ಕಾರಿ ಶಾಲೆಯಲ್ಲಿ ಈ ಮಕ್ಕಳನ್ನು ದಾಖಲು ಮಾಡಿಕೊಳ್ಳುವಂತೆ ಎಂದು ಡಿಡಿಪಿಐಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next