ಚಿಕ್ಕಮಗಳೂರು: ಮಾತೃಶಕ್ತಿ ಜಾಗೃತಗೊಂಡರೆ ಮಾತ್ರ ಸಮಾಜ ಮತ್ತು ದೇಶ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಹಿಳಾ ಮೋರ್ಚಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ತಾಯಂದಿರು ಸುಸಂಸ್ಕೃತ ಕುಟುಂಬಕ್ಕೆ ನೆರವಾಗುತ್ತಾರೆ. ದೇಶದ ಪರಿವರ್ತನೆಯಲ್ಲೂ ಮಹಿಳೆಯರ ಶ್ರಮ ಅಗತ್ಯ. ಮಹಿಳಾ ನಾಯಕತ್ವ ದೇಶ ಮತ್ತು ಪಕ್ಷಕ್ಕೆ ಶಕ್ತಿ ತಂದು ಕೊಡುತ್ತದೆ ಎಂದರು. ಜನಪರವಾಗಿ ಕೆಲಸ ನಿರ್ವಹಿಸುವ ಕಾರ್ಯಕರ್ತರು ರಾಜಕೀಯ ನೇತೃತ್ವ ವಹಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಅಧಿಕಾರ ಕುಟುಂಬದಲ್ಲಿ
ಹಂಚಿಕೆಯಾಗಬಾರದು. ನಿಜವಾದ ಕಾರ್ಯಕರ್ತರಿಗೆ ರಾಜಕೀಯ ಅಧಿಕಾರ ಸಿಗುವಂತಾಗಬೇಕೆಂದು ಹೇಳಿದರು.
ಜಾತಿಯತೆ ಮತ್ತು ಅಸ್ಪೃಶ್ಯತೆ ಸಮಾಜದ ಅತೀ ದೊಡ್ಡ ಪಿಡುಗುಗಳಾಗಿವೆ. ಇವುಗಳನ್ನು ಹೋಗಲಾಡಿಸಲು ಮಹಿಳೆಯರು ನೇತೃತ್ವ ವಹಿಸಿಕೊಳ್ಳಬೇಕು. ಜಾತಿ ಹೆಸರಿನಲ್ಲಿ ನಡೆಯುವ ತಾರತಮ್ಯಕ್ಕೆ ಮಂಗಳ ಹಾಡಬೇಕೆಂದು ಸಲಹೆ ನೀಡಿದರು. ರಾಷ್ಟ್ರ ಪುನರ್‌ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಪಕ್ಷ ಬಿಜೆಪಿ. ಮಹಿಳೆಯರು ಈ ನಿಟ್ಟಿನಲ್ಲಿ ಒತ್ತು ನೀಡಿ ಕಾರ್ಯನಿರ್ವಹಿಸಿದಾಗ ಮಾತ್ರ ರಾಷ್ಟ್ರ ಪುನರ್‌ನಿರ್ಮಾಣ ಸಾಧ್ಯವೆಂದು ತಿಳಿಸಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಬಿಜೆಪಿ ರಾಜ್ಯ ವಕ್ತಾರ ಹಾಗೂ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಮಾತನಾಡಿ, ಶ್ರೇಷ್ಟ ಭಾರತ ನಿರ್ಮಾಣ ನಮ್ಮೆಲ್ಲರ ಕನಸಾಗಿದೆ. ದೇಶ ಮೊದಲು ನಂತರ ಪಕ್ಷ, ನಂತರ ವ್ಯಕ್ತಿ ಎಂಬುದೇ ಬಿಜೆಪಿಯ ಸಿದ್ಧಾಂತವಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಕಾರ್ಯಕರ್ತರು ಉನ್ನತ ಹುದ್ದೆಗೇರಲು ಸಾಧ್ಯ ಎಂಬುದಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಪ್ರಮುಖ ಸಾಕ್ಷಿಯಾಗಿದ್ದಾರೆ ಎಂದರು. ದೇಶದಲ್ಲಿ ತುರ್ತು ಪರಿಸ್ಥಿತಿ ಏರಿದ ಬಳಿಕ ನಡೆದ ಚುನಾವಣೆಯಲ್ಲಿ ಇಂದಿರಾಗಾಂಧಿ ಪರಾಭವಗೊಳ್ಳುತ್ತಾರೆ. ಅವರ ರಾಜಕೀಯ ಭವಿಷ್ಯ ಪುನರ್‌ನಿರ್ಮಾಣಕ್ಕೆ ಅವಕಾಶ ನೀಡಿದ್ದು ಚಿಕ್ಕಮಗಳೂರು ಜಿಲ್ಲೆ. ನ.19ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಕಾಂಗ್ರೆಸ್ ಹಮ್ಮಿಕೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶಿಸುವ ಮೂಲಕ ಇತರ ಪಕ್ಷಗಳ ಶಕ್ತಿ ಕುಂದಿಸಲು ಭಾವನಾತ್ಮಕ ಪ್ರಯೋಗಕ್ಕೆ ಮುಂದಾಗಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಈಗ ಮತ್ತೂಮ್ಮೆ ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಭಾವನಾತ್ಮಕ ಪ್ರಯೋಗಕ್ಕೆ ಅದು ಮುಂದಾಗಿದೆ ಎಂದು ದೂರಿದರು.
ದೇಶದ ಆಡಳಿತ ಚುಕ್ಕಾಣಿಯನ್ನು ಎನ್.ಡಿ.ಎ. ಹಿಡಿದ ನಂತರ ಪ್ರಧಾನಿ ಮೋದಿ ಅವರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಇದರಿಂದ ಬಡವರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಮೂಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕರ್ನಾಟಕದಲ್ಲಿ ಅಧಿಕಾರ ಹಿಡಿದರೆ ದೇಶದಲ್ಲಿ ಶೇ.80ರಷ್ಟು ಆಡಳಿತ ಬಿಜೆಪಿಯದ್ದಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರಲ್ಲಿ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜ ಸುರೇಂದ್ರ, ವ್ಯಕ್ತಿ ಮತ್ತು ಸಮಾಜ ಒಂದಕ್ಕೊಂದು ಪೂರಕ. ವ್ಯಕ್ತಿಗಳಿಂದ ಸಮಾಜ ನಿರ್ಮಾಣವಾಗಿದೆ. ಪುರುಷ ಮತ್ತು ಮಹಿಳೆಯರು ಒಟ್ಟಾಗಿ ಸಾಗಿದರೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ಸಲಹೆ ನೀಡಿದರು. ಬಿಜೆಪಿ ರಾಜ್ಯ ಸಹ ವಕ್ತಾರರಾದ ಮಾಳವಿಕ ಅವಿನಾಶ್, ಮಹಿಳಾ ಮೋರ್ಚಾದ ಮುಖಂಡರಾದ ಪುಷ್ಪ ಮೋಹನ್, ಶೀಲಾ ಪ್ರಸನ್ನ, ವೀಣಾ ಆರ್. ಶೆಟ್ಟಿ, ಸೌಭಾಗ್ಯ, ಶುಭ, ದಾಕ್ಷಾಯಿಣಿ, ಸುಶೀಲ, ಭವ್ಯ, ಶೋಭಾ, ಜಿ.ಪಂ. ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ, ಸದಸ್ಯರಾದ ಕವಿತಾ ಲಿಂಗರಾಜು, ಜಸಿಂತಾ, ಬಿಜೆಪಿ ನಗರ ಅಧ್ಯಕ್ಷ ರಂಗನಾಥ್, ಗ್ರಾಮಾಂತರ ಅಧ್ಯಕ್ಷ ಸೋಮಶೇಖರ್ ಇದ್ದರು. ಸುವರ್ಣ ಕೇಶವಮೂರ್ತಿ ಸ್ವಾಗತಿಸಿದರು.