Advertisement

ಹೀಗೊಂದು ಸಮಾಜಮುಖಿ ಮನೆ

02:55 AM Jun 18, 2018 | Team Udayavani |

ಉಡುಪಿ: ಹೆಣ್ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಕಾಳಜಿ, ವಚನ ಸಾಹಿತ್ಯ ಪ್ರಚಾರವೇ ಮೊದಲಾದ ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತಿರುವ ಮನೆಯೊಂದು ಮೂಡನಿಡಂಬೂರಿನಲ್ಲಿದೆ. ಇವೆಲ್ಲದರ ರೂವಾರಿ ಹಿರಿಯಡಕ ಸ.ಪ.ಪೂ. ಕಾಲೇಜಿನ ಹಿರಿಯ ಉಪನ್ಯಾಸಕ, ಮೂಲತಃ ಶಿವಮೊಗ್ಗ ಜಿಲ್ಲೆ ಕ್ಯಾತನ ಕೊಪ್ಪದ ಎಚ್‌. ಸಿದ್ಧೇಶ್ವರಪ್ಪ ಇವರು ಮೂಡನಿಡಂಬೂರಿನಲ್ಲಿ ಹತ್ತು ವರ್ಷಗಳ ಹಿಂದೆ ಮನೆಯೊಂದನ್ನು ಖರೀದಿಸಿದ್ದರು. ಅಂದಿನಿಂದಲೇ ಪರಿಚಯದ ಹೆಣ್ಮಕ್ಕಳನ್ನು ಕರೆತಂದು ಅವರಿಗೆ ವಿದ್ಯಾಭ್ಯಾಸದೊಂದಿಗೆ ಬದುಕಿನ ಪಾಠ ಮಾಡುತ್ತ ಪೊರೆಯುತ್ತಿದ್ದಾರೆ. ಈವರೆಗೆ 29 ಹೆಣ್ಮಕ್ಕಳು ಇಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಪೂರೈಸಿ ಬದುಕು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸಿದ್ಧೇಶ್ವರಪ್ಪರ ಮಗಳು ನಂದಿನಿಗೆ 3 ವರ್ಷವಿರುವಾಗ ಮೆದುಳು ಜ್ವರ ಬಂದು ಅನಾರೋಗ್ಯದಿಂದ ಬಳಲುತ್ತಿದ್ದಳು. ಆಕೆಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ಇದರಿಂದ ಆಕೆಯ ವಿದ್ಯಾಭ್ಯಾಸ ಕುಂಠಿತಗೊಂಡಿತು. ಮಗಳಿಗಾದ ಪರಿಸ್ಥಿತಿಯನ್ನು ಗಂಭೀರವಾಗಿ ಚಿಂತಿಸಿದ ದಂಪತಿ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂದು ನಿರ್ಣಯಿಸಿದರು. ದಂಪತಿ ಉಡುಪಿಗೆ ಬಂದು ನೆಲೆಸಿದ ಬಳಿಕ ಹೆಣ್ಮಕ್ಕಳಿಗೆ ಆಶ್ರಯ ನೀಡಲಾರಂಭಿಸಿದರು.

ಸಾಹಿತ್ಯ ಸೇವೆ
ಸಿದ್ದೇಶ್ವರಪ್ಪ ಅವರ ಪತ್ನಿ ಅನ್ನಪೂರ್ಣಾ ಹೆಣ್ಮಕ್ಕಳ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುತ್ತಾರೆ. ಇವರಿಗೆ ಮೂವರು ಮಕ್ಕಳಿದ್ದು, ಹೆತ್ತವರ ಕೆಲಸದಲ್ಲಿ ನೆರವಾಗುತ್ತಾರೆ. ಸಿದ್ದೇಶ್ವರಪ್ಪ ಅವರು ಮಹಾಜಗದ್ಗುರು ಬಸವಣ್ಣ ಚಾರಿಟೆಬಲ್‌ ಟ್ರಸ್ಟ್‌ ಬೆಂಗಳೂರು ಇದರ ಉಡುಪಿ ಶಾಖೆಯ ಕಾರ್ಯದರ್ಶಿಯಾಗಿದ್ದು, ದ.ಕ., ಉಡುಪಿ, ಉ.ಕ. ಜಿಲ್ಲೆಗಳ ಆಸಕ್ತರ ಮನೆಗಳಲ್ಲಿ ಬಸವಾದಿ ಪ್ರಮಥರ ವಚನ ಸಾಹಿತ್ಯವನ್ನು ಜನರಿಗೆ ಮುಟ್ಟಿಸಲು ‘ತಿಂಗಳ ಬೆಳಕಿನ ಮನೆಯಂಗಳದಲ್ಲಿ ಅನುಭವ ಮಂಟಪ’ ಎನ್ನುವ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ.

29 ಹೆಣ್ಮಕ್ಕಳಿಗೆ ಆಶ್ರಯ
ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ದಾವಣಗೆರೆ ಜಿಲ್ಲೆಯಿಂದ ಬಂದ ಹೆಣ್ಮಕ್ಕಳು ಆಶ್ರಯ ಪಡೆದು, ವಿದ್ಯಾಭ್ಯಾಸ ಪೂರೈಸಿ ವಾಪಸ್‌ ಊರಿಗೆ ತೆರಳಿದ್ದಾರೆ. ಪ್ರಸ್ತುತ ಮನೆಯಲ್ಲಿ 4 ಮಂದಿ ಹೆಣ್ಮಕ್ಕಳು, ಓರ್ವ ಬಾಲಕ ವಿದ್ಯಾಭ್ಯಾಸಕ್ಕಾಗಿ ಆಶ್ರಯ ಪಡೆದುಕೊಂಡಿದ್ದಾರೆ. ಇಲ್ಲಿ ಆಶ್ರಯ ಪಡೆದಿರುವ ಶೃಂಗೇರಿಯ ಮುಕ್ತಾ ಉಡುಪಿಯ ಖಾಸಗಿ ಸಂಸ್ಥೆಯೊಂದರಲ್ಲಿ ಸಿಎ ಅಭ್ಯಾಸ ಮಾಡುತ್ತಿದ್ದಾರೆ. ಕಮಲಶಿಲೆಯ ಶ್ಯಾಮಲಾ ವೈಕುಂಠ ಬಾಳಿಗಾ ಲಾ ಕಾಲೇಜಿನಲ್ಲಿ ಅಂತಿಮ ವರ್ಷದ ಎಲ್‌.ಎಲ್‌.ಬಿ. ಮಾಡುತ್ತಿದ್ದಾಳೆ. ಮಣಿಪಾಲ ವಿ.ವಿ.ಯಲ್ಲಿ ಶಿವಮೊಗ್ಗದ ಅನುಷಾ ಎಂ.ಲಿಬ್‌. ಕಲಿಯುತ್ತಿದ್ದರೆ, ಶಿವಮೊಗ್ಗದ ಕಾವ್ಯಾ ಎಂ.ಲಿಬ್‌. ಮತ್ತು ಐಸಿ ಕೋರ್ಸ್‌ ಮಾಡುತ್ತಿದ್ದಾಳೆ. ಕ್ಯಾತನಕೊಪ್ಪದ ಕೃಷಿಕರೊಬ್ಬರ ಮಗ ಚರಣ್‌ರಾಜ್‌ ಮುಕುಂದಕೃಪಾ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ. ಸದ್ಯದಲ್ಲೇ ಇನ್ನೈದು ಹೆಣ್ಮಕ್ಕಳು ಮನೆಗೆ ಬರಲಿದ್ದಾರೆ. ಇಲ್ಲಿಗೆ ಬಂದು ವಿದ್ಯಾಭ್ಯಾಸ ಪೂರೈಸಿ ಹೋದವರಲ್ಲಿ ಇದುವರೆಗೆ 13 ಮಂದಿ ಹೆಣ್ಮಕ್ಕಳು ಮದುವೆಯೂ ಆಗಿದ್ದಾರೆ.

— ಎಸ್‌.ಜಿ. ನಾಯ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next