ಕಲಬುರಗಿ: ಹಣಗಳಿಕೆ ಅಥವಾ ಭಾರಿ ಚಿಕಿತ್ಸೆ ಕೊಡುವುದರೊಂದಿಗೆ ಆಸ್ಪತ್ರೆಗಳಿಗೆ ಸಾಮಾಜಿಕ ಕಾಳಜಿಯೂ ಇರಬೇಕು. ಇದರಿಂದ ಅವುಗಳನ್ನು ಜನರು ವಿಶ್ವಾಸದಿಂದ ಕಾಣಲು ಸಾಧ್ಯವಾಗುತ್ತದೆ. ಅಂತಹ ವಿಶ್ವಾಸವೇ ಆಸ್ಪತ್ರೆ ಮತ್ತು ವೈದ್ಯ ಹೆಚ್ಚು ಕಾಲ ಸೇವೆ ಕೊಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಮಾತನಾಡಿದರು.
ನಗರದ ರಿಂಗ್ ರಸ್ತೆಯಲ್ಲಿರುವ ಬಾರೆಹಿಲ್ Õನಲ್ಲಿರುವ ಮಣ್ಣೂರು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಜಿಲ್ಲಾ ಕಾರ್ಯನಿತರ ಪತ್ರಕರ್ತ ಸಂಘ ಹಾಗೂ ಆಸ್ಪತ್ರೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೋಗಿಗಳಿಗೆ ಚಿಕಿತ್ಸೆ ನೀಡುವುದ ಜತೆಯಲ್ಲಿ ಮಣ್ಣೂರು ಆಸ್ಪತ್ರೆಯ ನಿರ್ದೇಶಕ ಡಾ|ಫಾರುಖ್ ಅಹ್ಮದ್ ಮಣ್ಣೂರು ಅವರ ಸಾಮಾಜಿಕ ಕರ್ತವ್ಯ ನಿಜಕ್ಕೂ ಶ್ಲಾಘನೀಯ. ಸ್ವಚ್ಛ ಭಾರತದ ಯೋಜನೆಯ ರಾಯಭಾರಿಗಳು ಆಗಿರುವ ಫಾರುಖ್, ತಾಲೂಕು ಕೇಂದ್ರಗಳಲ್ಲಿ ಶುದ್ಧ ನೀರಿನ ಅರವಟ್ಟಿಗೆ ಸ್ಥಾಪನೆ, ಬೀದಿ ವ್ಯಾಪಾರಿಗಳಿಗೆ ಕೊಡೆ ವಿತರಣೆ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ ಎಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತರ ಆರೋಗ್ಯ ಒಳ್ಳೆಯಾಗಿದ್ದರೆ ಊರಿನ ಆರೋಗ್ಯವೂ ಒಳ್ಳೆಯದಾಗಿರುತ್ತದೆ ಎಂದು ಹಾಸ್ಯ ವ್ಯಕ್ತಪಡಿಸಿದ ಅವರು, ಪತ್ರಕರ್ತರು ಸದಾ ಒತ್ತಡದಲ್ಲಿಯೇ ಇರುತ್ತಾರೆ. ಅವರ ಮತ್ತು ಅವರ ಕುಟುಂಬದ ಆರೋಗ್ಯದ ಕುರಿತು ಕಾಳಜಿ ವಹಿಸಿ ಆರೋಗ್ಯ ತಪಾಸಣೆ ಹಮ್ಮಿಕೊಂಡಿರುವುದು ತುಂಬಾ ಯೋಗ್ಯ ಕೆಲಸವಾಗಿದೆ. ಇತ್ತೀಚಿನ ದಿನಗಲ್ಲಿ ಡೈಗ್ನೋಸ್ ಹೆಸರಿನಲ್ಲೇ ಸಾಕಷ್ಟು ಹಣ ವ್ಯಯವಾಗುವ ಸಾಧ್ಯತೆಗಳಿವೆ. ಆದ್ದರಿಂದ ಇಂತಹ ಶಿಬಿರಗಳು ಪತ್ರಕರ್ತರಿಗೆ ಆಸರೆಯಾಗಲಿವೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ಸದಾನಂದ ಜೋಶಿ, ಶೇಷಮೂರ್ತಿಅವಧಾನಿ, ಡಾ| ಫಾರುಖ್ ಅಹ್ಮದ್ ಮಣ್ಣೂರ್ ಆಗಮಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಿಗೆ ಆಸ್ಪತ್ರೆಯಿಂದ ರಿಯಾಯ್ತಿ ಸೌಲಭ್ಯದ ಆರೋಗ್ಯ ಕಾರ್ಡ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ನಾಸೀರ ಹುಸೇನ್ ಉಸ್ತಾದ, ಬಾಲರಾಜ್ ಗುತ್ತೇದಾರ, ಶಾಮರಾವ ಸೂರನ್, ಬಸವರಾಜ ತಡಕಲ್ ಸೇರಿದಂತೆ ಅನೇಕರಿದ್ದರು.