ಬೆಂಗಳೂರು: ಇತ್ತೀಚೆಗಷ್ಟೇ 100 ವರ್ಷಗಳನ್ನು ಪೂರೈಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆ 2016-17ನೇ ಸಾಲಿನಲ್ಲಿ 521.55 ಕೋಟಿ ರೂ.ಗಳ ದಾಖಲೆ ವಹಿವಾಟು ನಡೆಸಿದೆ. ಸಂಸ್ಥೆಯು ದೃಢವಾದ ಕಾರ್ಯ ತಂತ್ರಗಳನ್ನು ಅಳವಡಿಸಿ ಕಾರ್ಯಗತಗೊಳಿಸುವ ಮೂಲಕ ಉತ್ಪನ್ನಗಳ ಮಾರಾಟ ಜಾಲದ ಸಾಮರ್ಥ್ಯವನ್ನು ದೇಶದಾದ್ಯಂತ ವಿಸ್ತರಿಸಿದೆ.
ಸರ್ಕಾರಿ, ಖಾಸಗಿ ಸಂಘ-ಸಂಸ್ಥೆಗಳಿಗೂ ತನ್ನ ಉತ್ಪನ್ನಗಳ ಮಾರಾಟವನ್ನು ವಿಸ್ತರಿಸಿದ್ದಲ್ಲದೆ, ಉತ್ಪನ್ನದ ವೆಚ್ಚವನ್ನು ನಿಯಂತ್ರಣಗೊಳಿಸಿದೆ. ಈ ಮೂಲಕ ನಿಗಮ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಶೇ.10 ರಷ್ಟು ಪ್ರಗತಿ ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರಿಕುಮಾರ್ ಝಾ ತಿಳಿಸಿದ್ದಾರೆ.
ಸುಗಂಧ ರಾಯಭಾರಿ: ಮಹಾರಾಜ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ, ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಮಾರ್ಗ ದರ್ಶನದಲ್ಲಿ ಪ್ರಾರಂಭವಾದ ಸಂಸ್ಥೆ ಇಂದಿಗೂ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿಸಿದೆ.
ವಿಶ್ವದ ನೈಸರ್ಗಿಕ ಶ್ರೀಗಂಧದೆಣ್ಣೆ ಯ ತಯಾರಕ ಸಂಸ್ಥೆ ಎಂದೇ ಹೆಸರುವಾಸಿಯಾಗಿರುವ ಕೆಎಸ್ ಆ್ಯಂಡ್ ಡಿಎಲ್ ಇಂದು “ಭಾರತದ ಸುಗಂಧ ರಾಯಭಾರಿ’ ಎನಿಸಿದೆ. ವ್ಯಾಪಾರ ವಹಿವಾಟನ್ನು ವೃದ್ಧಿಸುವ ಉದ್ದೇಶದಿಂದ ಸಂಸ್ಥೆಯು ದೇಶಾದ್ಯಂತ ತನ್ನದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿದೆ.
ರಫ್ತು ವಹಿವಾಟಿಗೆ ಸಂಬಂಧಿಸಿದಂತೆ ಸಂಸ್ಥೆ ಯುಎಇ, ಕುವೈತ್, ಸೌದಿ ಅರೇಬಿಯಾ, ಬಹರೀನ್, ಕತಾರ್, ಯುಎಸ್‌ಎ, ಇಂಗ್ಲೆಂಡ್, ಫ್ರಾನ್ಸ್, ಚೈನಾ, ಜಪಾನ್, ಹಾಂಗ್ ಕಾಂಗ್, ಇರಾಕ್, ಮಲೇಶಿ, ಸಿಂಗಪುರ, ತೈವಾನ್, ಆಸ್ಟ್ರೇಲಿಯಾ, ನೇಪಾಳ ಹಾಗೂ ಇತರ ರಾಷ್ಟ್ರಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.
ನಿಗಮಕ್ಕೆ ಕೇಂದ್ರ ಸರ್ಕಾರದ ವತಿಯಿಂದ “ಅರ್ಹತಾ ಪ್ರಮಾಣ ಪತ್ರ’, ಮುಖ್ಯಮಂತ್ರಿಗಳ ವಾರ್ಷಿಕ “ರತ್ನ’ ಪ್ರಶಸ್ತಿ, ಮೈಸೂರು ಸ್ಯಾಂಡಲ್ ಸೋಪ್‌ಗೆ ವಿಶ್ವದರ್ಜೆಯ ಜಿಐ ಪ್ರಮಾಣ ಪತ್ರ ದೊರೆತಿದೆ ಎಂದು ಸಂಸ್ಥೆ ತಿಳಿಸಿದೆ.