Advertisement
20/11 ಮುಂಬಯಿ ದಾಳಿ ಬಳಿಕ ಪಾಕಿಸ್ಥಾನ ಮತ್ತು ಭಾರತದ ನಡುವಿನ ಸಂಬಂಧ ಮುರಿದು ಬಿದ್ದಿತ್ತು. ಈ ಸಂದರ್ಭದಲ್ಲಿ ಪಾಕ್ ಜತೆಗೆ ಮಾತುಕತೆ ನಡೆಸಿ ಆಗಿನ ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಟಾನಿ ಖಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದುವಲ್ಲೂ ಕೃಷ್ಣ ಸಫಲರಾದರು. ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಸೇರಿದಂತೆ ಅನೇಕ ದಿಗ್ಗಜರ ಜತೆಗೆ ಸ್ನೇಹಮಯ ಬಾಂಧವ್ಯವನ್ನು ಹೊಂದಿದ್ದರು. ವಿಶ್ವ ರಾಷ್ಟ್ರಗಳೊಂದಿಗೆ ಕೃಷ್ಣ ಉತ್ತಮ ಬಾಂಧವ್ಯ ಹೊಂದಿದ್ದರು ಎಂಬುದಕ್ಕೆ 2010ರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಶಾಶ್ವತವಲ್ಲದ ಸದಸ್ಯತ್ವ ಪಡೆಯಲು ಭಾರತದ ಪ್ರಯತ್ನಕ್ಕೆ ಸಿಕ್ಕ ಫಲವೇ ಸಾಕ್ಷಿ.
Related Articles
ಬೆನ್ನುಬಿಡದ ವಿವಾದಗಳು
ಎಸ್.ಎಂ.ಕೃಷ್ಣ ಅವರು ಅಜಾತಶತ್ರು ಎನಿಸಿಕೊಂಡರೂ ಹಲವು ವಿವಾದಗಳು ಅವರನ್ನು ಕಾಡಿದವು. ಶಾಸಕರಾಗಿದ್ದಾಗ ಹಾಗೂ ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದ ಸಮಯದಲ್ಲಿ ಹೆಚ್ಚು ಕಾಲ ಟೆನಿಸ್ ಆಡುತ್ತಾರೆ. ರಾಜಕೀಯ ಚಟುವಟಿಕೆಗಳಲ್ಲಿ ಅವರ ಭಾಗವಹಿಸುವಿಕೆ ಕಡಿಮೆ ಎಂಬ ಆರೋಪಗಳು ಕೇಳಿಬಂದಿದ್ದವು.
Advertisement
ಬಾಲ್ಯದಿಂದಲೂ ಸಂಗೀತಾಭ್ಯಾಸ ಮಾಡಿದ್ದ ಕೃಷ್ಣ ಅವರು ಬಿಡುವಿನ ಸಮಯದಲ್ಲೆಲ್ಲ ಸಂಗೀತ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗಿಯಾಗುತ್ತಿದ್ದರು. ಪ್ರಮುಖ ಸಂಗೀತಗಾರರ ಕಾರ್ಯಕ್ರಮವಿದ್ದಾಗ ಕೃಷ್ಣ ಅವರು ಭಾಗಿಯಾಗುತ್ತಿದ್ದುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರನ್ನು “ವೈಟ್ ಕಾಲರ್ ಸಿಎಂ’ ಎಂದು ಕರೆಯಲಾಗುತ್ತಿತ್ತು. ಜನರ ಜತೆ ಹೆಚ್ಚು ಬೆರೆಯುವುದಿಲ್ಲ. ಯಾವಾಗಲೂ ಉದ್ಯಮಿಗಳ ಜತೆಯಲ್ಲೇ ಕಾಲ ಕಳೆಯುತ್ತಾರೆ ಎಂಬ ಟೀಕೆಗಳು ಕೇಳಿಬರುತ್ತಿದ್ದವು.
ವಿದೇಶಾಂಗ ಸಚಿವರಾಗಿದ್ದ ಸಮಯದಲ್ಲಿ ವಿಶ್ವಸಂಸ್ಥೆ ಯಲ್ಲಿ ಪೋರ್ಚುಗಲ್ ಭಾಷಣ ಓದಿ ಟೀಕೆಗೆ ತುತ್ತಾಗಿ ದ್ದರು. ಅಲ್ಲದೇ ಭಾರತದ ಅಧಿಕಾರಿಯನ್ನು ಉಗ್ರನಿಗೆ ಹೋಲಿಸಿದ ಸಂದರ್ಭದಲ್ಲಿ ಅದರ ವಿರುದ್ಧ ಕೃಷ್ಣ ಅವರು ಮಾತನಾಡಲಿಲ್ಲ ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಮೃದು ಮಾತನಾಡುವ ಕೃಷ್ಣ ವಿದೇಶಾಂಗ ಸಚಿವರಾಗಲು ಸರಿಯಲ್ಲ ಎಂಬ ಟೀಕೆ ಸದಾ ಕೇಳಿಬರುತ್ತಿತ್ತು.
ಕೃಷ್ಣ ವಿರುದ್ಧ ನೆಹರೂ ಪ್ರಚಾರ ಮಾಡಿದ್ರೂ ಗೆದ್ದಿದ್ದರುಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದ ಎಸ್‌ಎಂಕೆ ಅವರಿಗೆ ಜವಹಾರ್ ಲಾಲ್ ನೆಹರೂ ಅವರ ನೀತಿಗಳು ಹಿಡಿಸುತ್ತಿರಲಿಲ್ಲ. ನೆಹರೂ ಅವರ ಆಪ್ತರಾಗಿದ್ದ ಡಾ| ಅಶೋಕ್ ಮೆಹ್ತಾರ ಜತೆ ನಿರಂತರ ಸಂಪರ್ಕದಲ್ಲಿದ್ದರೂ ಕಾಂಗ್ರೆಸ್ ಸೇರಲು ಅವರಿಂದ ಬಂದಿದ್ದ ಪರೋಕ್ಷ ಆಹ್ವಾನವನ್ನು ತಿರಸ್ಕರಿಸಿದ್ದರು. 1962ರಲ್ಲಿ ಮದ್ದೂರು ಕ್ಷೇತ್ರದಿಂದ ಪಿಎಸ್‌ಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದಾಗ ಪ್ರಧಾನಿಯಾಗಿದ್ದ ನೆಹರೂ ಅವರೇ ಕೃಷ್ಣ ವಿರುದ್ಧ ಪ್ರಚಾರ ನಡೆಸಿದ್ದರು. ಆದರೂ ಗೆಲುವು ಕೃಷ್ಣ ಅವರ ಪಾಲಾಗಿತ್ತು.