Advertisement

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ ಮೂರನೇ ಸ್ಥಾನಕ್ಕೆ ಏರಿದ ಸ್ಮಿತ್‌

03:36 AM Aug 07, 2019 | Team Udayavani |

ದುಬಾೖ: ಆತಿಥೇಯ ಇಂಗ್ಲೆಂಡ್‌ ತಂಡದೆದುರಿನ ಆ್ಯಶಸ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ ನಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರು ಮಂಗಳವಾರ ಪ್ರಕಟಗೊಂಡ ನೂತನ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

Advertisement

ಚೆಂಡಿನ ರೂಪ ಕೆಡಿಸಿದ ಕಾರಣಕ್ಕಾಗಿ ಒಂದು ವರ್ಷ ನಿಷೇಧಕ್ಕೆ ಒಳಗಾದ ಬಳಿಕ ಸ್ಮಿತ್‌ ಮೊದಲ ಟೆಸ್ಟ್‌ ಸರಣಿಯಲ್ಲಿ ಆಡಿದ್ದರು. ಅವರ ಸತತ ಶತಕ ಸಾಧನೆಯಿಂದ ಆಸ್ಟ್ರೇಲಿಯ ಭರ್ಜರಿ ಗೆಲುವು ದಾಖಲಿಸುವಂತಾಯಿತು.

ಬ್ಯಾಟಿಂಗಿಗೆ ಕಠಿನವಾದ ಪಿಚ್‌ನಲ್ಲಿ ಅಮೋಘವಾಗಿ ಆಡಿದ್ದ ಸ್ಮಿತ್‌ 144 ಮತ್ತು 142 ರನ್‌ ಬಾರಿಸಿ ಗಮನ ಸೆಳೆದಿದ್ದರು. ಇದರಿಂದ ಅವರು ನೂತನ ರ್‍ಯಾಂಕಿಂಗ್‌ನಲ್ಲಿ ಭಾರತದ ಚೇತೇಶ್ವರ ಪೂಜಾರ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆದರು.

ಆ್ಯಶಸ್‌ ಸರಣಿ ಆರಂಭಕ್ಕೆ ಮೊದಲು ಸ್ಮಿತ್‌ 857 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರು. ಇದೀಗ ಅವರ ಅಂಕ ಗಳಿಗೆ 900 ಪ್ಲಸ್‌ಗೆ ಏರಿದೆ. 922 ಅಂಕ ಹೊಂದಿರುವ ವಿರಾಟ್‌ ಕೊಹ್ಲಿ ಅಗ್ರಸ್ಥಾನದಲ್ಲಿ ಮುಂದುವರಿದರೆ ಕೇನ್‌ ವಿಲಯಮ್ಸನ್‌ (913) ದ್ವಿತೀಯ ಸ್ಥಾನದಲ್ಲಿದ್ದಾರೆ.

ಆ್ಯಶಸ್‌ ಸರಣಿಯ ಮೊದಲ ಪಂದ್ಯದ ವೇಳೆ ಆಸ್ಟ್ರೇಲಿಯ ವಿರುದ್ಧ 100 ವಿಕೆಟ್‌ ಪೂರ್ತಿಗೊಳಿಸಿದ ಸ್ಟುವರ್ಟ್‌ ಬ್ರಾಡ್‌ 2 ಸ್ಥಾನ ಮೇಲಕ್ಕೇರಿ 16ನೇ ಸ್ಥಾನದಲ್ಲಿ ನಿಂತಿದ್ದಾರೆ.

Advertisement

ಲಿಯೋನ್‌ 6 ಸ್ಥಾನ ಏರಿಕೆ
ಒಟ್ಟಾರೆ 9 ವಿಕೆಟ್‌ ಕಿತ್ತು ಆಸ್ಟ್ರೇಲಿಯ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಥನ್‌ ಲಿಯೋನ್‌ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಆರು ಸ್ಥಾನ ಏರಿ 13ನೇ ಸ್ಥಾನದಲ್ಲಿದ್ದಾರೆ. 7 ವಿಕೆಟ್‌ ಹಾರಿಸಿದ್ದ ವೇಗಿ ಪ್ಯಾಟ್‌ ಕಮಿನ್ಸ್‌ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. ಅವರು ತನ್ನ ಜೀವನಶ್ರೇಷ್ಠ 898 ರೇಟಿಂಗ್‌ ಅಂಕ ತಲುಪಿದ್ದಾರೆ. ಇದು ಆಸ್ಟ್ರೇಲಿಯದ ಬೌಲರೊಬ್ಬರ ಮೂರನೇ ಶ್ರೇಷ್ಠ ನಿರ್ವಹಣೆಯಾಗಿದೆ. ಗ್ಲೆನ್‌ ಮೆಕ್‌ಗ್ರಾಥ್‌ ಮತ್ತು ಶೇನ್‌ ವಾರ್ನ್ ಮೊದಲ ಇಬ್ಬರು.

Advertisement

Udayavani is now on Telegram. Click here to join our channel and stay updated with the latest news.

Next