ಅಹ್ಮದಾಬಾದ್: ಭಾರತ ವಿರುದ್ಧದ ಏಕದಿನ ಸರಣಿಯಲ್ಲೂ ಸ್ಟೀವನ್ ಸ್ಮಿತ್ ಅವರೇ ಆಸ್ಟ್ರೇಲಿಯ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ತಾಯಿಯ ನಿಧನದಿಂದ ನಾಯಕ ಪ್ಯಾಟ್ ಕಮಿನ್ಸ್ ತವರಲ್ಲೇ ಉಳಿಯುವುದರಿಂದ ಈ ಬದಲಾವಣೆ ಎಂಬುದಾಗಿ ಆಸ್ಟ್ರೇಲಿಯ ತಂಡದ ಕೋಚ್ ಆ್ಯಂಡ್ರೂ ಮೆಕ್‌ಡೊನಾಲ್ಡ್ ಹೇಳಿದ್ದಾರೆ.
“ನಾವು ಪ್ಯಾಟ್ ಕಮಿನ್ಸ್ ಜತೆ ಮಾತು ಕತೆ ನಡೆಸಿದ್ದೇವೆ. ಅವರು ಭಾರತಕ್ಕೆ ವಾಪಸಾಗುವುದಿಲ್ಲ. ಹೀಗಾಗಿ ಸ್ಟೀವನ್ ಸ್ಮಿತ್ ಏಕದಿನ ಸರಣಿಯಲ್ಲೂ ತಂಡವನ್ನು ಮುನ್ನಡೆಸುವರು ” ಎಂಬುದಾಗಿ ಮೆಕ್‌ಡೊನಾಲ್ಡ್ ಹೇಳಿದರು.
ಮೊದಲೆರಡು ಟೆಸ್ಟ್ ಪಂದ್ಯಗಳ ಬಳಿಕ ನಾಯಕ ಪ್ಯಾಟ್ ಕಮಿನ್ಸ್, ತಾಯಿಯ ಅನಾರೋಗ್ಯದಿಂದ ತವರಿಗೆ ವಾಪಸಾಗಿದ್ದರು. ಆಗ ಸ್ಟೀವನ್ ಸ್ಮಿತ್‌ಗೆ ನೇತೃತ್ವ ವಹಿಸಲಾಯಿತು. ಆಸೀಸ್ ತಂಡದ ಅದೃಷ್ಟವೂ ಖುಲಾಯಿಸಿತು. ಸ್ಮಿತ್ ಸಾರಥ್ಯದಲ್ಲಿ ಆಸ್ಟ್ರೇಲಿಯ ತೃತೀಯ ಟೆಸ್ಟ್ ಪಂದ್ಯವನ್ನು ಗೆದ್ದಿತು. ಕೊನೆಯ ಟೆಸ್ಟ್ ಡ್ರಾಗೊಂಡಿತು.
ಅನೇಕರ ಪುನರಾಗಮನ
ಕಳೆದ ವರ್ಷ ಆರನ್ ಫಿಂಚ್ ನಿವೃತ್ತಿ ಘೋಷಿಸಿದ ಬಳಿಕ ಪ್ಯಾಟ್ ಕಮಿನ್ಸ್ ಅವರಿಗೆ ಏಕದಿನ ನಾಯಕತ್ವ ನೀಡಲಾಗಿತ್ತು. ಆದರೆ ಅವರು ಈವರೆಗೆ ತಂಡವನ್ನು ಮುನ್ನಡೆಸಿದ್ದು 2 ಪಂದ್ಯಗಳಲ್ಲಿ ಮಾತ್ರ. ಕಮಿನ್ಸ್‌ಗೆ ಬದಲಿಯಾಗಿ ಬೇರೆ ಆಟಗಾರನನ್ನು ಆಸ್ಟ್ರೇಲಿಯ ಹೆಸರಿಸಿಲ್ಲ. ಇತ್ತೀಚೆಗಷ್ಟೇ ಗಾಯಾಳು ಜೇ ರಿಚರ್ಡ್‌ಸನ್ ತಂಡದಿಂದ ಬೇರ್ಪಟ್ಟಾಗ ನಥನ್ ಎಲ್ಲಿಸ್ ಅವರನ್ನು ಸೇರಿಸಿಕೊಳ್ಳಲಾಗಿತ್ತು.
Related Articles
ಅಷ್ಟೇನೂ ಫಾರ್ಮ್ನಲ್ಲಿಲ್ಲದ ಆರಂಭಕಾರ ಡೇವಿಡ್ ವಾರ್ನರ್ ಏಕದಿನದಲ್ಲಿ ಆಡುವುದು ಖಚಿತ ವಾಗಿದೆ. ಟೆಸ್ಟ್ ಸರಣಿಯ ನಡುವೆ ತವರಿಗೆ ವಾಪಸಾಗಿದ್ದ ಸ್ಪಿನ್ನರ್ ಆ್ಯಶrನ್ ಅಗರ್ ಏಕದಿನ ಸರಣಿಗೆ ಲಭ್ಯರಾಗಲಿದ್ದಾರೆ. ಹಾಗೆಯೇ ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್ ಕೂಡ ಪುನರಾಗಮನ ಸಾರುತ್ತಿದ್ದಾರೆ.
ಆಸ್ಟ್ರೇಲಿಯ ಏಕದಿನ ತಂಡ: ಸ್ಟೀವನ್ ಸ್ಮಿತ್ (ನಾಯಕ), ಅಲೆಕ್ಸ್ ಕ್ಯಾರಿ, ಸೀನ್ ಅಬೋಟ್, ಆ್ಯಶನ್ ಅಗರ್, ನಥನ್ ಎಲ್ಲಿಸ್, ಕ್ಯಾಮರಾನ್ ಗ್ರೀನ್, ಟ್ರ್ಯಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪ.