ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲ. ಅವಕಾಶಗಳು ಹುಡುಕಿಕೊಂಡು ಬಂದಂತೆಲ್ಲ ಕೆಲವು ಪ್ರತಿಭೆಗಳ ಅನಾವರಣ ಆಗುತ್ತಲೇ ಇರುತ್ತವೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮಿಂಚಬಹುದು ಎಂಬುದಕ್ಕೆ ಅನೇಕ ನಿದರ್ಶನಗಳನ್ನೂ ಕಾಣಬಹುದು. ಈ ಮಧ್ಯೆ ಸಂಗೀತ, ನೃತ್ಯ, ಕ್ರೀಡೆ, ನಟನೆ – ಎಲ್ಲವನ್ನೂ ಒಲಿಸಿಕೊಂಡು ಸೈ ಎನ್ನಿಸಿಕೊಂಡ ಪ್ರತಿಭೆ ಸ್ಮಿತಾ ದಿನಕರ್ ವಿಶೇಷ ಸಾಧನೆಯ ಮೂಲಕ ಗಮನ ಸೆಳೆಯುತ್ತಾರೆ.
ಸುಳ್ಯ ತಾಲೂಕು ದೊಡ್ಡತೋಟ ಗ್ರಾಮ ಮುಳುಬಾಗಿಲಿನ ಸ್ಮಿತಾ, ದಿನಕರ ಹಾಗೂ ನಾಗವೇಣಿ ದಂಪತಿಯ ಪುತ್ರಿ. ಚಿಕ್ಕಂದಿನಿಂದಲೂ ಹಾಡುವುದೆಂದರೆ ಸ್ಮಿತಾಗೆ ಹುಚ್ಚು ಪ್ರೀತಿ. ತನ್ನೆಲ್ಲ ಸಾಧನೆಗೆ ಅಜ್ಜಿ ದೇವಕಿ ಅವರೇ ಕಾರಣ, ಸ್ಫೂರ್ತಿ ಎಂದು ಹೇಳಿಕೊಳ್ಳುತ್ತಾರೆ ಸ್ಮಿತಾ.
ಸಿರಿಗನ್ನಡ, ಕನ್ನಡ ಪ್ರತಿಭಾ ಪರೀಕ್ಷೆಗಳಲ್ಲಿ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡ ಸ್ಮಿತಾ ಜನಪದ ಗೀತೆ, ಜನಪದ ನೃತ್ಯದಲ್ಲಿ ಬಹಳವಾಗಿ ಆಸಕ್ತಿಯನ್ನು ಹೊಂದಿದ್ದಾರೆ. ರಾಜ್ಯಮಟ್ಟದ ಯುವಜನೋತ್ಸವ ಜಾನಪದ ಗೀತೆಯಲ್ಲಿ ದ್ವಿತೀಯ ಸ್ಥಾನವನ್ನೂ ಪಡೆದಿದ್ದಾರೆ. ಕಾಲೇಜಿನಲ್ಲಿ ರೆಡ್‌ಕ್ರಾಸ್ ಕ್ಯಾಂಪ್‌ಗ್ಳಲ್ಲೂ ಭಾಗವಹಿಸಿದ ಅನುಭವವಿದೆ. ಸುಳ್ಯ ಹಬ್ಬ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಪುಸ್ತಕ ಹಬ್ಬ 2017 ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ, ಕಬಡ್ಡಿ, ಪೈಲಾರ್ ಶೌರ್ಯ ಯುವತಿ ಮಂಡಲ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಲಿರಿಕ್ಸ್, ರಾಗಿ ಬೀಸುವ ಪದ ಇತ್ಯಾದಿಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ, ರಾಜ್ಯಮಟ್ಟದ ಮಕ್ಕಳ ಬೇಸಗೆ ಶಿಬಿರದಲ್ಲಿ ತರಬೇತುದಾರರಾಗಿಯೂ ಭಾಗವಹಿಸಿದ್ದಾರೆ.
ಹಾಡುಗಾರಿಕೆಯಲ್ಲಿ ಬಹಳ ಆಸಕ್ತಿ ಹೊಂದಿರುವ ಸ್ಮಿತಾ, ಪುತ್ತೂರು ಗಾನಸಿರಿ ಕಲಾಕೇಂದ್ರದ ‘ಹಾಡು ಆಟ ಆಡು’ ಮ್ಯೂಸಿಕಲ್ ರಿಯಾಲಿಟಿ ಶೋದಲ್ಲಿ ಡ್ಯುಯೆಟ್ ಹಾಡುಗಾರಿಕೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ನಟನೆಯನ್ನೂ ತಮ್ಮ ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ. ನೃತ್ಯದೊಂದಿಗೆ ನಾಟಕಗಳಲ್ಲೂ ಭಾಗವಹಿಸಿರುವ ಸ್ಮಿತಾ, ಕಿರುಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿ ಪಾತ್ರಕ್ಕೂ ಸೈ ಎನಿಸಿಕೊಂಡು, ತಟ್ಟಿ-ಮುಟ್ಟಿ ಆಲ್ಬಮ್ ಸಾಂಗ್, ವೈಷಮ್ಯ ಕಿರುಚಿತ್ರದಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಪ್ರಚಲಿತದಲ್ಲಿರುವ ‘ಅಲೆಗೋಸ್ಕರ’ ತುಳು ಆಲ್ಬಂ ಸಾಂಗ್‌ನಲ್ಲೂ ನಾಯಕಿಯ ಸ್ನೇಹಿತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ, ಝೀ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾಗುತ್ತಿದ್ದ ‘ಹೆಮ್ಮೆಯ ಕನ್ನಡಿಗ’ ಕಾರ್ಯಕ್ರಮದಲ್ಲಿ ಧಾರವಾಹಿಯ ನಾಯಕ ನಾಯಕಿಯರೊಂದಿಗೆ ನೃತ್ಯ ಪ್ರದರ್ಶನದಲ್ಲೂ ಕಾಣಿಸಿಕೊಂಡಿದ್ದಾರೆ.
ಸುಳ್ಯ ರಂಗಮಯೂರಿ ಕಲಾ ಶಾಲೆಯ ಶಿಷ್ಯೆಯಾಗಿರುವ ಸ್ಮಿತಾ ಡಾ| ಕಿರಣ್ ಗಾನಸಿರಿ ಬಳಿ ಸಂಗೀತಾಭ್ಯಾಸವನ್ನು ಮಾಡಿದ್ದಾರೆ. ಸುಳ್ಯ ಎನ್‌ಎಂಸಿಯಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ನಾದ ಪಯಸ್ವಿನಿ ಆರ್ಕೆಸ್ಟ್ರಾ ತಂಡದೊಂದಿಗೆ ಹಲವೆಡೆ ಸಂಗೀತ ಕಾರ್ಯಕ್ರಮಗಳನ್ನೂ ನೀಡುತ್ತಿದ್ದಾರೆ. ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದಾರೆ.
ಲಿಖಿತಾ ಗುಡ್ಡೆಮನೆ, ಪುತ್ತೂರು