ಬೆಂಗಳೂರು: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ (Mohammed Shami) ಅವರು ಇದೀಗ ಚೇತರಿಕೆಯ ಹಂತದಲ್ಲಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಗುಣಮುಖರಾಗಿರುವ ಶಮಿ ಅವರು ಇದೀಗ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy) ಕೂಟ ಆಡುತ್ತಿದ್ದಾರೆ. ಬಂಗಾಳ ತಂಡದ ಪರವಾಗಿ ಕೂಟದಲ್ಲಿ ಶಮಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶಮಿ ಬ್ಯಾಟಿಂಗ್ ನಲ್ಲಿಯೂ ಮಿಂಚಿದ್ದಾರೆ. ಚಂಡೀಗಢ ವಿರುದ್ದದ ಪಂದ್ಯದಲ್ಲಿ ಶಮಿ ಕೇವಲ 17 ಎಸೆತಗಳಲ್ಲಿ 32 ರನ್ ಬಾರಿಸಿ ಮೆರೆದಿದ್ದಾರೆ.
ಈ ಬ್ಯಾಟಿಂಗ್ ಸಾಹಸ, ಉತ್ತಮ ಬೌಲಿಂಗ್ ನೊಂದಿಗೆ ಮತ್ತೆ ಟೀಂ ಇಂಡಿಯಾ ಸೇರಲು ಶಮಿ ಉತ್ಸುಕರಾಗಿದ್ದಾರೆ. ಸದ್ಯ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗಾವಸ್ಕರ್ ಟ್ರೋಫಿ ಸರಣಿ ಆಡುತ್ತಿದ್ದು, ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಶಮಿ ಲಭ್ಯವಾಗುವ ಸಾಧ್ಯತೆಯಿದೆ.
ಬೆಂಗಾಳ ತಂಡವು 114 ರನ್ ಗಳಿಗೆ ಎಂಟು ವಿಕೆಟ್ ಕಳೆದುಕೊಂಡ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಗೆ ಬಂದ ಶಮಿ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಅಂತಿಮ ಓವರ್ನಲ್ಲಿ ಶಮಿ ಎರಡು ಸಿಕ್ಸರ್ಗಳು ಮತ್ತು ಬೌಂಡರಿಗಳನ್ನು ಸಿಡಿಸಿದರು. ಈ ಮೂಲಕ ಬಂಗಾಳವನ್ನು 159 ರ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.
ಬೌಲಿಂಗ್ ನಲ್ಲಿಯೂ ಮಿಂಚಿದ ಮೊಹಮ್ಮದ್ ಶಮಿ ನಾಲ್ಕು ಓವರ್ ಗಳಲ್ಲಿ 25 ರನ್ ನೀಡಿ ಒಂದು ವಿಕೆಟ್ ಕಿತ್ತರು. ಚಂಡೀಗಢ ಆರಂಭಿಕ ಆಟಗಾರ ಅರ್ಸ್ಲಾಮ್ ಖಾನ್ ಅವರನ್ನು ಗೋಲ್ಡನ್ ಡಕ್ ಗೆ ವಜಾಗೊಳಿಸಿದರು.