Advertisement

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

03:35 PM Nov 24, 2024 | Team Udayavani |

ನಾವು ನೀರು ಬಳಸುವ ರೀತಿ, ನೀರನ್ನು ಸಂರಕ್ಷಿಸುವ ವಿಧಾನ ಎಲ್ಲವೂ ಬದಲಾಗುತ್ತಿವೆ. ಅದಕ್ಕೆ ಕಾರಣ ಏನು ಗೊತ್ತೇ? ಸ್ಮಾರ್ಟ್ ವಾಟರ್ ಮೀಟರ್ ಗಳು. ಈ ಸ್ಮಾರ್ಟ್ ವಾಟರ್ ಮೀಟರ್ ಗಳು ನೀರನ್ನು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿಯನ್ನೇ ಮಾಡುತ್ತಿವೆ. ಎಷ್ಟು ನೀರನ್ನು ಬಳಸಿದ್ದೀರಿ ಎಂಬುದರ ಕುರಿತು ನಿಖರ ಮಾಹಿತಿ ನೀಡುವ ಈ ಮೀಟರ್ ಗಳು ನಿಮ್ಮ ವರ್ತನೆಯಲ್ಲಿಯೂ ಬದಲಾವಣೆ ಉಂಟು ಮಾಡುತ್ತವೆ. ಸ್ಮಾರ್ಟ್ ವಾಟರ್ ಮೀಟರ್ ಗಳು ತನ್ನ ವಿಶಿಷ್ಟ ತಂತ್ರಜ್ಞಾನದ ಕಾರಣದಿಂದ ಮತ್ತು ಮಾನಸಿಕವಾಗಿ ಮನಪರಿವರ್ತನೆ ಮಾಡುವ ಮೂಲಕ ಉದ್ದಿಮೆಗಳಲ್ಲಿ ಮತ್ತು ಮನೆಗಳಲ್ಲಿ ನೀರನ್ನು ಉಳಿಸುವ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಣೆ ನೀಡುತ್ತವೆ. ಅದು ಹೇಗೆ ಎಂಬುದನ್ನು ಮುಂದೆ ನೋಡೋಣ.

Advertisement

ನೀರಿನ ಬಳಕೆ ಕುರಿತು ಜಾಗೃತಿ

ಸ್ಮಾರ್ಟ್ ವಾಟರ್ ಮೀಟರ್‌ ಗಳು ಜನರಿಗೆ ಅವರು ಎಷ್ಟು ನೀರು ಬಳಸಿದ್ದಾರೆ ಎಂಬುದರ ಕುರಿತು ನಿಖರವಾದ ಮಾಹಿತಿ ಒದಗಿಸುತ್ತವೆ. ಇದರಿಂದ ನೀರಿನ ಬಳಕೆ ಕುರಿತು ಜಾಗೃತಿ ಮೂಡುತ್ತದೆ ಮತ್ತು ಜನರು ತಮ್ಮ ನೀರಿನ ಬಳಕೆಯ ವಿಧಾನಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಜನರು ತಮ್ಮ ನೀರಿನ ಬಳಕೆಯ ಕುರಿತು ಅರ್ಥ ಮಾಡಿಕೊಂಡರೆ ಶೇ.10ರಷ್ಟು ನೀರನ್ನು ಉಳಿಸುವುದು ಸಾಧ್ಯವಾಗುತ್ತದೆ ಎಂಬುದನ್ನು ಕೆಲವು ಅಧ್ಯಯನಗಳು ಈಗಾಗಲೇ ಸಾಬೀತು ಪಡಿಸಿವೆ.

ತಕ್ಷಣದ ಮಾಹಿತಿ ಮತ್ತು ಪಾರದರ್ಶಕತೆ

ಸ್ಮಾರ್ಟ್ ಮೀಟರ್‌ ಇನ್ನೂ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತವೆ. ನೀವು ನಿಮ್ಮ ಬಳಕೆಯ ನೀರಿನ ಮಿತಿಯನ್ನು ನಿಗದಿಕೊಂಡಿದ್ದರೆ ಆ ಮಿತಿಗಿಂತ ನಿಮ್ಮ ನೀರಿನ ಬಳಕೆ ಹೆಚ್ಚಾದ ಕೂಡಲೇ ಈ ಮೀಟರ್ ಗಳು ಎಚ್ಚರಿಕೆ ನೀಡುತ್ತವೆ ಮತ್ತು ನೋಟಿಫಿಕೇಷನ್ ಕಳುಹಿಸುತ್ತವೆ. ಸ್ಮಾರ್ಟ್ ಮೀಟರ್ ನೀಡುವ ಈ ತಕ್ಷಣದ ಪ್ರತಿಕ್ರಿಯೆಯಿಂದ ಬಳಕೆದಾರರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬಹುದು ಮತ್ತು ನೀರು ಉಳಿಸುವ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕ ನಡೆಗಳನ್ನು ಇಡಬಹುದು.

Advertisement

ಎಲ್ಲದಕ್ಕಿಂತ ನೀರಿನ ಸರಬರಾಜಿನ ವಿಚಾರದಲ್ಲಿ ಪಾರದರ್ಶಕತೆ ಇರುವುದರಿಂದ ನೀರು ಸರಬರಾಜು ಮಾಡುವವರು ಕೂಡ ಎಚ್ಚರದಿಂದ ಇರಬೇಕಾಗುತ್ತದೆ. ದೂರುಗಳನ್ನು ಸೂಕ್ತ ಸಮಯದಲ್ಲಿ ಪರಿಹರಿಸಬೇಕಾಗುತ್ತದೆ ಮತ್ತು ಸರ್ವೀಸ್ ಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಬೇಕಾಗುತ್ತದೆ.

ಬಳಕೆಯ ಗುರಿ ನಿರ್ಧರಿಸುವಿಕೆ

ಬಹುತೇಕ ಸ್ಮಾರ್ಟ್ ಮೀಟರ್ ವೇದಿಕೆಗಳು ನೀರಿನ ಬಳಕೆಯ ಗುರಿಯನ್ನು ನಿಗದಿ ಪಡಿಸುವ ಆಯ್ಕೆಯನ್ನು ಒದಗಿಸುತ್ತವೆ. ಜೊತೆಗೆ ಇತರ ಮನೆಗಳ ನೀರಿನ ಬಳಕೆ ಅಥವಾ ಉದ್ದಿಮೆಗಳ ನೀರಿನ ಬಳಕೆಯ ಜೊತೆ ಹೋಲಿಸಿ ನೋಡಿಕೊಂಡು ನೀರಿನ ಸಂರಕ್ಷಣೆ ಕುರಿತು ಕ್ರಮ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಇದರಿಂದ ಸ್ಪರ್ಧಾ ಮನೋಭಾವ ಬೆಳೆಯುತ್ತದೆ ಮತ್ತು ನೀರಿನ ಬಳಕೆ ಕಡಿಮೆ ಮಾಡಲು ಜನರಿಗೆ ಸ್ಫೂರ್ತಿ ಒದಗುತ್ತದೆ.

ಹಲವಾರು ಸ್ಮಾರ್ಟ್ ವಾಟರ್ ಮೀಟರ್ ಆಪ್ ಗಳು ಬಳಕೆದಾರರಿಗೆ ನೀರಿನ ಬಳಕೆಯ ಗುರಿಯನ್ನು ನಿಗದಿಪಡಿಸಲು ಅಥವಾ ನೀರಿನ ಸಂರಕ್ಷಣೆ ಕುರಿತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಫೀಚರ್ ಗಳನ್ನು ಒದಗಿಸುತ್ತವೆ.

ವೈಯಕ್ತಿಕ ಸಲಹೆ, ಸೂಚನೆಗಳು

ಅತ್ಯಾಧುನಿಕ ಸ್ಮಾರ್ಟ್ ಮೀಟರ್ ವ್ಯವಸ್ಥೆಗಳು ಜನರ ನೀರಿನ ಬಳಕೆಯ ಮಾಹಿತಿಯ ವಿಶ್ಲೇಷಣೆ ನಡೆಸುತ್ತವೆ. ಜೊತೆಗೆ ಬಳಕೆಯ ಕ್ರಮವನ್ನು ಸುಧಾರಿಸಲು ವೈಯಕ್ತಿಕ ಸಲಹೆ ಸೂಚನೆಗಳನ್ನು ನೀಡುತ್ತವೆ. ಈ ಸೂಚನೆಗಳನ್ನು ಕೇಳಿಕೊಂಡು ಬಳಕೆದಾರರು ವಿವೇಚನಾಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಲೀಕ್ ಆಗುವ ಜಾಗಗಳನ್ನು ದುರಸ್ತಿಪಡಿಸಬಹುದು. ನೀರು ಕಡಿಮೆ ಬಳಸುವ ಉಪಕರಗಳನ್ನು ಬಳಸಬಹುದು.

ಆರ್ಥಿಕ ಪ್ರೋತ್ಸಾಹ

ಸ್ಮಾರ್ಟ್ ಮೀಟರ್‌ಗಳು ಹೆಚ್ಚು ನೀರು ಬಳಸಿದರೆ ಹೆಚ್ಚಿನ ದರ ವಿಧಿಸುತ್ತವೆ. ಅದರಿಂದ ಜನರು ಕಡಿಮೆ ನೀರು ಬಳಸುವುದಕರ ಕಡೆಗೆ ಹೆಚ್ಚಿನ ಗಮನ ನೀಡುವುದು ಸಾಧ್ಯವಾಗುತ್ತದೆ. ಕಡಿಮೆ ನೀರು ಬಳಕೆಗೆ ಕಡಿಮೆ ದರ ಇರುವುದರಿಂದ, ನೀರಿನ ಕಡಿಮೆ ಬಳಕೆ ಮಾಡುವುದರಿಂದ ಹಣ ಉಳಿತಾಯ ಆಗುವುದರಿಂದ ಮನೆಯಲ್ಲಿ, ಉದ್ದಿಮೆಯಲ್ಲಿ ನೀರಿನ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡುವುದು ಸಾಧ್ಯವಾಗಲಿದೆ.

ಸಮುದಾಯ ಕಾರ್ಯಕ್ರಮ

ಸ್ಮಾರ್ಟ್ ಮೀಟರ್‌ ಗಳ ಮಾಹಿತಿಯನ್ನು ಬಳಸಿಕೊಂಡು ನೀರು ಸರಬರಾಜುದಾರರು ಆಯಾ ಪ್ರದೇಶದ ಜನರಲ್ಲಿ ಕಡಿಮೆ ನೀರು ಬಳಕೆ ಮಾಡಲು ಪ್ರೋತ್ಸಾಹ ನೀಡಲು ಸಮುದಾಯ ಕಾರ್ಯಕ್ರಮ ಆಯೋಜಿಸಬಹುದು. ಈ ಮೀಟರ್‌ ಗಳಿಂದ ದೊರೆತ ಮಾಹಿತಿಯನ್ನು ಬಳಸಿಕೊಂಡು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಬಹುದು. ಆ ಮೂಲಕ ಜಲ ಸಂರಕ್ಷಣಾ ಜಾಗೃತಿ ಉಂಟು ಮಾಡಬಹುದು. ನಮ್ಮ ನೆರೆಹೊರೆಯವರ ಅಥವಾ ಸ್ನೇಹಿತರ ವರ್ತನೆಯನ್ನು ನೋಡಿಕೊಂಡು ನಾವು ಅದರಿಂದ ಪ್ರೇರೇಪಣೆ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಒಂದು ಮನೆಯವರು ನೀರನ್ನು ಉಳಿಸಿ, ಆ ಸಾಧನೆಯನ್ನು ಹಂಚಿಕೊಂಡರೆ ಉಳಿದವರು ಕೂಡ ಅದೇ ರೀತಿ ಮಾಡುವ ಸಾಧ್ಯತೆ ಇದೆ. ಇದರಿಂದ ದೊಡ್ಡ ಮಟ್ಟದ ಜಾಗೃತಿ ಉಂಟಾಗಲಿದೆ.

ನೀರು ಸೋರಿಕೆ ಪತ್ತೆ ಮತ್ತು ನೀರಿನ ತ್ಯಾಜ್ಯ ತಡೆಗಟ್ಟುವಿಕೆ

ಸ್ಮಾರ್ಟ್ ಮೀಟರ್‌ಗಳು ನೀರಿನ ಸೋರಿಕೆಯನ್ನು ತಕ್ಷಣವೇ ಪತ್ತೆ ಮಾಡುತ್ತವೆ. ಆ ಮೂಲಕ ಸೋರಿಕೆ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಗ್ರಾಹಕರಿಗೆ ನೆರವಾಗುತ್ತವೆ.

ನೀರು ಸರಬರಾಜುದಾರರು ನೀರಿನ ಮೇಲೆ ನಿಗಾವಹಿಸುವ ರೀತಿಯನ್ನು ಮತ್ತು ಆದಾಯ ರಹಿತ ನೀರಿನ ಪ್ರಮಾಣವನ್ನು ಮತ್ತು ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಅರಿಯುವ ರೀತಿಯನ್ನು ಬಹಳಷ್ಟು ಬದಲಾಯಿಸುತ್ತದೆ.

ಕೆಲಸದ ನಿರ್ವಹಣೆಯಲ್ಲಿ ಬದಲಾವಣೆ

ಸ್ಮಾರ್ಟ್ ಮೀಟರ್‌ಗಳು ನೀರು ಸರಬರಾಜುದಾರರು / ಮುನ್ಸಿಪಲ್ ಕಾರ್ಪೊರೇಷನ್‌ಗ ಳು ತಮ್ಮ ಕಾರ್ಮಿಕ ಬಲವನ್ನು ನಿರ್ವಹಿಸುವ ವಿಧಾನವನ್ನು ಕೂಡ ಬದಲಿಸುತ್ತದೆ. ಸ್ಮಾರ್ಟ್ ಮೀಟರ್ ಬಳಸಿದರೆ ಮನುಷ್ಯರು ಪದೇ ಪದೇ ಅದೇ ಕೆಲಸ ಮಾಡುವುದು ತಪ್ಪುತ್ತದೆ ಮತ್ತು ಅವರು ಅದೇ ವೇಳೆಯಲ್ಲಿ ಅದಕ್ಕಿಂತ ಮಹತ್ವದ ಮಹತ್ವದ ಕೆಲಸಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಮೀಟರ್‌ ಗಳನ್ನು ಓದುವುದು, ನೀರಿನ ಬಳಕೆಯನ್ನು ಲೆಕ್ಕಹಾಕುವುದು ಮತ್ತು ಬಿಲ್‌ ಗಳನ್ನು ತಲುಪಿಸುವುದು ಇತ್ಯಾದಿ ಕೆಲಸಗಳನ್ನು ಸ್ಮಾರ್ಟ್ ಮೀಟರ್ ಗಳ ಮೂಲಕ ಸ್ವಯಂಚಾಲಿತವಾಗಿ ಮಾಡಬಹುದು. ಮನುಷ್ಯರು ಮೀಟರ್ ಹತ್ತಿರ ಹೋಗಿ ಅದನ್ನು ನೋಡಿ ಲೆಕ್ಕ ಬರೆಯುವ ಅವಶ್ಯಕತೆ ಇಲ್ಲ. ಜೊತೆ ತಪ್ಪು ನಡೆಯುವ ಅವಕಾಶಗಳೂ ಇಲ್ಲ. ಇದರಿಂದ ಮೀಟರ್ ರೀಡಿಂಗ್ ಮತ್ತು ಬಿಲ್ಲಿಂಗ್ ಮಾಡುವ ಸಂಪೂರ್ಣ ಪ್ರಕ್ರಿಯೆಯೇ ಸುಲಭವಾಗಿ ನಡೆಯುತ್ತದೆ. ಯಾವುದೇ ಅಡೆತಡೆ, ಕಿರಿಕಿರಿ ಇರಲಾರದು. ನೀರು ಸರಬರಾಜುದಾರರು ಮತ್ತು ಮನೆಮಂದಿ ಎಲ್ಲರಿಗೂ ಎಲ್ಲಾ ವಿಚಾರವೂ ಪಾರದಾರ್ಶಕವಾಗಿ ತಿಳಿಯುತ್ತದಾದ್ದರಿಂದ ಯಾವುದೇ ತೊಂದರೆ ಇರುವುದಿಲ್ಲ.

ಸವಾಲುಗಳು ಮತ್ತು ಮಿತಿಗಳು

ಸ್ಮಾರ್ಟ್ ವಾಟರ್ ಮೀಟರ್‌ ಗಳಿಂದ ಅನೇಕ ಪ್ರಯೋಜನಗಳು ಇವೆಯಾದರೂ ಅದರ ಜೊತೆ ಕೆಲವು ಸವಾಲುಗಳೂ ಇವೆ:

  1. ಹೊಸ ತಂತ್ರಜ್ಞಾನಕ್ಕೆ ಬಳಕೆದಾರರ ಪ್ರತಿರೋಧ.
  2. ಅಭ್ಯಾಸಗಳನ್ನು ಬದಲಿಸಲು ಸ್ಫೂರ್ತಿಯ ಕೊರತೆ.
  3. ಖಾಸಗಿತನದ ಕುರಿತು ಆತಂಕ.

ಗ್ರಾಹಕರು ತಮ್ಮ ನಡವಳಿಕೆ ಬದಲಿಸಿಕೊಳ್ಳಲು ಪ್ರೋತ್ಸಾಹಿಸುವ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್ ವಾಟರ್ ಮೀಟರ್ ಗಳು ನೀರು ಸಂರಕ್ಷಣೆಯನ್ನು ಸಾಧಿಸಲು ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ. ಆಯಾ ಸಮಯದ ಮಾಹಿತಿಗಳನ್ನು ತಕ್ಷಣವೇ ನೀಡುವ, ನೀರು ಸೋರಿಕೆಯ ಕುರಿತು ಎಚ್ಚರಿಕೆ ಒದಗಿಸುವ, ನೀರಿನ ಬಳಕೆಯ ಗುರಿಯನ್ನು ನಿಗದಿಗೊಳಿಸಲು ಅನುವು ಮಾಡಿಕೊಡುವ ಮತ್ತು ಸಮಾಜದಲ್ಲಿ ಜಲ ಸಂರಕ್ಷಣೆ ಜಾಗೃತಿ ಮೂಡಿಸುವ ಈ ಸಾಧನಗಳು ಜವಾಬ್ದಾರಿಯುತವಾಗಿ ನೀರಿನ ಬಳಕೆ ಮಾಡಲು ಅನುವು ಮಾಡಿ ಕೊಡುತ್ತದೆ.

-ರಘುನಂದನ್ ಪ್ರಸಾದ್ (ಎಂಡಿ) ಕೋನಾರಕ್ ಮೀಟರ್ಸ್

Advertisement

Udayavani is now on Telegram. Click here to join our channel and stay updated with the latest news.

Next