Advertisement

ಅಂಗನವಾಡಿಗಳಿಗೆ 1960 ಸ್ಮಾರ್ಟ್‌ಫೋನ್‌ ಭಾಗ್ಯ

03:29 PM Sep 02, 2020 | Suhan S |

ಶಿಡ್ಲಘಟ್ಟ: ಕೇಂದ್ರ ಸರ್ಕಾರ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಉದ್ದೇಶ  ದಿಂದ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಗೊಳಿಸುವ ಜೊತೆಗೆ ಮಕ್ಕಳ ಪೌಷ್ಟಿಕ ಬೆಳವಣಿಗೆ, ಗರ್ಭಿಣಿ ಮತ್ತು ಬಾಣಂತಿಯರ ಮಾಹಿತಿ ಕಲೆ ಹಾಕಲು ಪೋಷಣ್‌ ಅಭಿಯಾನ ಕಾರ್ಯಕ್ರಮದಡಿ ಅಂಗನವಾಡಿ ಗಳಿಗೆ ಸ್ಮಾರ್ಟ್‌ಫೋನ್‌ ವಿತರಿಸುವ ಭಾಗ್ಯ ಕೂಡಿಬಂದಿದ್ದು ಜಿಲ್ಲೆಗೆ 1961 ಬಂದಿದೆ.

Advertisement

ಉದ್ಯೋಗ ಖಾತ್ರಿ ಯೋಜನೆ ಮೂಲಕ ಚಿಕ್ಕ ಬಳ್ಳಾಪುರ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಲು ಜಿಪಂ ಸಿಇಒ ಫೌಝೀಯಾ ತರುನ್ನುಮ್‌ ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರ ಪೋಷಣ್‌ ಅಭಿಯಾನ ಕಾರ್ಯಕ್ರಮದಡಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ಸ್ಮಾಟ್‌ ಫೋನ್‌ ನೀಡಲು ತೀರ್ಮಾನಿ ಸಿದ್ದು, ಅದರಂತೆ ಜಿಲ್ಲೆಯ 1961 ಅಂಗನವಾಡಿಗಳಿಗೆ ಸ್ಮಾರ್ಟ್‌ಫೋನ್‌ ದೊರೆಯಲಿದೆ. ಏನಿದು ಸ್ಮಾರ್ಟ್‌ಪೋನ್‌ ಯೋಜನೆ: ಕೇಂದ್ರ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಕಾರ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜೊತೆಗೆ ಅಪೌಷ್ಟಿಕತೆಯಿಂದ ಮತ್ತು ರಕ್ತಹೀನತೆಯಿಂದ ಮಕ್ಕಳು ಮತ್ತು ಮಹಿಳೆಯರ ಸಾವಿನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ.

ಪ್ರತಿಯೊಂದು ಅಂಗನವಾಡಿ ಕೇಂದ್ರಗಳ ಮಾಹಿತಿ ಕೇಂದ್ರಗಳಾಗಿ ಪರಿವರ್ತಿಸಲು ಕ್ರಮ ಕೈಗೊಂಡಿದ್ದು, ಸ್ಮಾರ್ಟ್‌ಫೋನ್‌ಗಳ ಮೂಲಕ ಮಕ್ಕಳ ವಿವರ, ಗರ್ಭಿಣಿ ಮತ್ತು ಬಾಣಂತಿಯರ ಮಾಹಿತಿ ದಾಖಲಿಸಲು ಸಹಕಾರಿಯಾಗಲಿದೆ. ತರಬೇತಿ ನೀಡಲಾಗಿದೆ: ರಾಜ್ಯದ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹಕ್ಕಾಗಿ ಸ್ನೇಹ ಆ್ಯಪ್‌ ಅಭಿವೃದ್ಧಿಗೊಳಿಸಲಾಗಿದ್ದು, ಅಂಗನವಾಡಿ ಕಾರ್ಯ ಕರ್ತರು ತಮ್ಮ ಕೇಂದ್ರದ ವಿವರ ದಾಖಲಾತಿ ಮಾಡಬೇಕಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಇಲಾಖೆಯ ಮೇಲ್ವಚಾರಕರಿಗೂ ಸ್ಮಾರ್ಟ್‌  ಫೋನ್‌ ವಿತರಿಸಲು ಯೋಜನೆ ರೂಪಿಸಿ ಸ್ನೇಹ ಆ್ಯಪ್‌ ತಂತ್ರಾಂಶದಲ್ಲಿ ಹೇಗೆ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಬೇಕೆಂದು ತರಬೇತಿ ಸಹ ನೀಡಲಾಗಿದೆ.

ಮಕ್ಕಳ ವಿವರ, ಆಹಾರ ಮಾಹಿತಿ: ಅಂಗನವಾಡಿ ಕೇಂದ್ರ ಗಳಲ್ಲಿ ಮಕ್ಕಳ ವಿವರ, ಅವರ ತೂಕ, ಎತ್ತರ, ನೀಡಿದ ಆಹಾರದ ವಿವರ ಮತ್ತು ಕೇಂದ್ರ ವ್ಯಾಪ್ತಿಯಲ್ಲಿರುವ ಗರ್ಭಿಣಿಯರು, ಬಾಣಂತಿಯರ ವಿವರಗಳನ್ನು ದಾಖಲಾತಿ ಮಾಡಬೇಕಾಗುತ್ತದೆ. ಕೋವಿಡ್‌ ಸೋಂಕು ನಿಯಂತ್ರಿಸಲು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಬರುತ್ತಿಲ್ಲ. ಆದರೂ ಸಹ ಅಂಗನವಾಡಿ ಕಾರ್ಯಕರ್ತರು ಇಲಾಖೆಯ ಯೋಜನೆಗಳನ್ನು ಜಾರಿಗೊಳಿಸಲು ಶ್ರಮ ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಂಗನ ವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್‌ಫೋನ್‌ ವಿತರಿಸಲು ಇಲಾಖಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಇಲಾಖೆಯ ಮಾಹಿತಿ ಅಪ್‌ಲೋಡ್‌ :  ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಶಿಡ್ಲಘಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಒಟ್ಟು 6 ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಕಚೇರಿಗಳಿದ್ದು, ಇದರ ವ್ಯಾಪ್ತಿಯಲ್ಲಿ ಒಟ್ಟು 1960 ಅಂಗನವಾಡಿ ಕೇಂದ್ರಗಳು ಕಾರ್ಯಾನಿರ್ವಹಿಸುತ್ತಿವೆ. ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣೆಯ ಮೇಲುಸ್ತುವಾರಿಗಾಗಿ 70 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಸರ್ಕಾರದಿಂದ ನೀಡುವ ಸ್ಮಾರ್ಟ್ ಫೋನ್‌ ಬಳಸಿ ಇಲಾಖೆಯ ಪ್ರಗತಿಯನ್ನು ಅಪ್‌ಲೋಡ್‌ ಮಾಡಬೇಕು. ಅನ್ಯ ಉದ್ದೇಶಗಳಿಗೆ ಬಳಕೆ ಮಾಡಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Advertisement

‌ಗರ್ಭಿಣಿ, ಬಾಣಂತಿಯರು, ಮಕ್ಕಳ ಮನೆಗೆ ಪೌಷ್ಟಿಕ ಆಹಾರ: ಸಿಡಿಪಿಒ ವೈ.ನಾಗವೇಣಿ : ಕೋವಿಡ್ ಸೋಂಕು ಹರಡಿರುವುದರಿಂದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಹಾಜರಾಗುತ್ತಿಲ್ಲ. ಕೇಂದ್ರಗಳ ಕಾರ್ಯಕರ್ತರು ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಮನೆಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಶಿಡ್ಲಘಟ್ಟ ಸಿಡಿಪಿಒ ವೈ.ನಾಗವೇಣಿ ತಿಳಿಸಿದರು. ಯೋಜನೆ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳಂತೆ ಮನೆ ಮನೆಗೆ ಜನರ ಆರೋಗ್ಯ ಮಾಹಿತಿ ಕಲೆ ಹಾಕುವ ಕೆಲಸ ಕಾರ್ಯಕರ್ತರು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ಸ್ಮಾರ್ಟ್‌ಫೋನ್‌ ಮತ್ತು ಸಿಮ್‌ ವಿತರಿಸಲಾಗುವುದು ಎಂದು ತಿಳಿಸಿದರು.

ಮಾಪನ ಯಂತ್ರ :  ಪೋಷಣ್‌ ಅಭಿಯಾನದ ಮೂಲಕ ಅಂಗನ ವಾಡಿಗಳಿಗೆ ಮಕ್ಕಳ ತೂಕ ಹಾಗೂ ಎತ್ತರ ಅಳೆಯುವ ಹೊಸದಾದ ಯಂತ್ರಗಳು ಕೂಡ ಬಂದಿದ್ದು, ಈಗಾಗಲೇ ಅದನ್ನು ಎಲ್ಲಾ ಕೇಂದ್ರಗಳಿಗೆ ತಲುಪಿಸಲಾಗಿದೆ. ಸ್ಯಾಮ್‌ಸಂಗ್‌ ಕಂಪನಿಯ ಮೊಬೈಲ್‌ಗ‌ಳಾಗಿದ್ದು, ಜೊತೆಗೆ ಪವರ್‌ಬ್ಯಾಂಕ್‌, ಹೆಡ್‌ಫೋನ್‌, ಡಸ್ಟ್‌ಪ್ರೂಫ್‌ ಪೌಚ್‌, ಮೆಮೊರಿ ಕಾರ್ಡ್‌ ಮೊದಲಾದ ಸಲಕರಣೆಗಳಿರುತ್ತವೆ.

ಸರ್ಕಾರ ಸ್ಮಾರ್ಟ್‌ಫೋನ್‌ ನೀಡುತ್ತಿರುವುದು ಸಂತೋಷ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್‌ ಇರುವುದಿಲ್ಲ. ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರ ಮಾಹಿತಿ ಅಪ್‌ ಲೋಡ್‌ ಮಾಡಲು ಮತ್ತು ಯೋಜನೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರ ನೀಡುತ್ತೇವೆ. ತಾಂತ್ರಿಕ ದೋಷವಾದರೆ ಅದಕ್ಕೆ ಅಂಗನವಾಡಿ ಕಾರ್ಯಕರ್ತರನ್ನು ಹೊಣೆ ಮಾಡಬಾರದು.  ಲಕ್ಷ್ಮೀದೇವಮ್ಮ, ಸಿಐಟಿಯು ಜಿಲ್ಲಾಧ್ಯಕ್ಷೆ

ಪೋಷಣ್‌ ಅಭಿಯಾನದ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಕ್ಕಳು, ಗರ್ಭಿಣಿಯರು,ಬಾಣಂತಿಯರ ಮಾಹಿತಿ ದಾಖಲಿಸಲು ಸ್ಮಾರ್ಟ್‌ಫೋನ್‌ ವಿತರಿಸಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಜಿಲ್ಲೆಯ 1960 ಅಂಗನವಾಡಿಗಳಿಗೆ ಮತ್ತು 70

ಮೇಲ್ವಿಚಾರಕರಿಗೆ ಶೀಘ್ರವೇ ಸ್ಮಾರ್ಟ್‌ಫೋನ್‌ ಗಳನ್ನು ವಿತರಿಸಿ ಅದರ ಮೂಲಕ ಸ್ನೇಹ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮಾಹಿತಿ ಅಪ್‌ಲೋಡ್‌ ಮಾಡಲು ತರಬೇತಿ ನೀಡಲಾಗಿದೆ.  ನಾರಾಯಣಸ್ವಾಮಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

 

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next