Advertisement
ಸ್ಮಾರ್ಟ್ ಗಾರ್ಡನ್ ಒಂದು ಸಂಪೂರ್ಣ ಸ್ವಯಂಚಾಲಿತ ಉದ್ಯಾನಗಳಾಗಿದ್ದು, ತೋಟಗಾರಿಕೆಯ ಎಲ್ಲಾ ಕೆಲಸಗಳನ್ನು ಮಾಡುತ್ತವೆ. ತರಕಾರಿಗಳನ್ನು ಮತ್ತು ಗಿಡಮೂಲಿಕೆಗಳನ್ನು ಬೆಳೆಸಿ, ಬೆಳೆಯಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಬಾಲ್ಕನಿ, ತೋಟ ಅಥವಾ ಹಿತ್ತಲು ಇರುವುದಿಲ್ಲ. ಹೀಗಿರುವಾಗ ಉದ್ಯಾನವನ್ನು ಬೆಳೆಸಲೂ ಆಗುವುದಿಲ್ಲ. ಹೀಗಾಗಿ ಒಳಾಂಗಣ ತೋಟಗಾರಿಕೆಯನ್ನು ಈ ಸ್ಮಾರ್ಟ್ ಗಾರ್ಡನ್ ಉತ್ತೇಜಿಸುತ್ತದೆ. ಹಾಗಂತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಷ್ಟು ಅಥವಾ ಪ್ರತಿನಿತ್ಯ ಮನೆಯಲ್ಲಿ ಸಲಾಡ್ ಮಾಡಿ ತಿನ್ನುವಷ್ಟು ತರಕಾರಿಗಳನ್ನು ಬೆಳೆಸಲು ಆಗದಿದ್ದರೂ, ಕಡಿಮೆ ಪ್ರಯತ್ನದಲ್ಲಿ ಆರೋಗ್ಯಕರ ತರಕಾರಿ-ಗಿಡಮೂಲಿಕೆಗಳನ್ನು ಬೆಳೆಸಲು, ಇದೊಂದು ಚತುರ ಮಾರ್ಗವಾಗಿದೆ.
Related Articles
Advertisement
ಪ್ರಯೋಜನಗಳು:
ಅನುಕೂಲಕರ ಮತ್ತು ಸರಳವಾಗಿದೆ. ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮತ್ತು ಮನೆ ಬಿಟ್ಟರೆ ಬೇರಾವ ಹಿತ್ತಲ ಪ್ರದೇಶ ಇಲ್ಲದಿರುವವರಿಗೆ ಈ ಒಳಾಂಗಣ ತೋಟಗಾರಿಕೆ ಬಹಳ ಅನುಕೂಲಕರ. ಮನೆಯೊಳಗಿನ ಯಾವುದೇ ಜಾಗದಲ್ಲಿ ಸ್ಮಾರ್ಟ್ ಗಾರ್ಡನ್ ಅನ್ನು ಸ್ಥಾಪಿಸಬಹುದು. ನಾವು ನೆಟ್ಟ ಸಸ್ಯಗಳ ಕಾಳಜಿಯನ್ನು ಅದುವೇ ವಹಿಸುವುದರಿಂದ ತೋಟಗಾರಿಕೆಯನ್ನು ಬಹಳ ಸರಳವನ್ನಾಗಿಸುತ್ತದೆ. ನಾವು ಅದಕ್ಕಾಗಿ ಹೆಚ್ಚೇನೂ ಸಮಯವನ್ನೂ ಮೀಸಲಿಡಬೇಕಾದ ಅನಿವಾರ್ಯತೆಯೂ ಇಲ್ಲ.
ಸ್ವಯಂಚಾಲಿತ ನೀರು-ಬೆಳಕಿನ ವ್ಯವಸ್ಥೆ
ಸ್ಮಾರ್ಟ್ ಗಾರ್ಡನ್‌ಗೆ ಯಾವುದೇ ಸೂರ್ಯಕಿರಣದ ಅಗತ್ಯತೆ ಇಲ್ಲ. ಇನ್-ಬಿಲ್ಟ್ ಎಲ್‌ಇಡಿ ಬೆಳಕಿನ ವ್ಯವಸ್ಥೆ ಇರುವುದರಿಂದ ಅದು ಸಸ್ಯಗಳನ್ನು ಪೌಷ್ಟಿಕವಾಗಿ ಬೆಳೆಸಲು ಸಹಕಾರಿಯಾಗುತ್ತದೆ. ಹಾಗೆಯೇ ಕಿಟ್‌ನಲ್ಲಿರುವ ಸಾಕೆಟ್‌ನೊಳಗೆ ಭರ್ತಿ ಆಗುವಷ್ಟು ನೀರನ್ನು ನಾವು ಒಮ್ಮೆ ತುಂಬಿಸಿಟ್ಟರೆ, ಮುಂದಿನ ಎಲ್ಲಾ ಕೆಲಸವನ್ನು ಅದುವೇ ಸ್ವಯಂಚಾಲಿತವಾಗಿ ಮಾಡುತ್ತದೆ. ಬೀಜ-ಸಸ್ಯಗಳಿಗೆ ಬೇಕಾದ ಹಾಗೆ, ಕಾಲಕಾಲಕ್ಕೆ ನೀರು ಬಿಡುಗಡೆ ಮಾಡುತ್ತದೆ. ಆ ಸಾಕೆಟ್‌ನಲ್ಲಿ ನೀರು ಖಾಲಿ ಆದ ಹಾಗೆ ತುಂಬಿಸಿಡುವ ಜವಾಬ್ದಾರಿ ನಮ್ಮದು.
ಸ್ಮಾರ್ಟ್ ಮಣ್ಣು
ಕ್ಲಿಕ್ ಆ್ಯಂಡ್ ಗ್ರೋ ಸಂಸ್ಥೆಯು ನಾಸಾದ ತಂತ್ರಜ್ಞಾನದಿಂದ ಪ್ರೇರಿತವಾದ ಸ್ಮಾರ್ಟ್ ಮಣ್ಣನ್ನು ಬಳಸುತ್ತದೆ. ಈ ಸ್ಮಾರ್ಟ್ ಮಣ್ಣು ಸಾಮಾನ್ಯ ಮಡಕೆ ಮಣ್ಣಿಗಿಂತ ಭಿನ್ನವಾಗಿದೆ. ಇದು ಸಸ್ಯದ ಜೀವನ ಚಕ್ರದೊಂದಿಗೆ ಹೊಂದಿಕೊಂಡು, ಅದಕ್ಕೆ ಬೇಕಾದ ರೀತಿಯಲ್ಲಿ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಹಾಗೆಯೇ ಮಣ್ಣಿನ ಪಿ ಹೆಚ್ ಅನ್ನು ಸಮತೋಲನದಲ್ಲಿರಿಸುತ್ತದೆ.
365 ದಿನವೂ ಬೆಳೆಸಬಹುದು
ಸ್ಮಾರ್ಟ್ ಗಾರ್ಡನ್‌ನಲ್ಲಿ ವರ್ಷದ 365 ದಿನವೂ ಗಿಡಗಳನ್ನು ಬೆಳೆಸಬಹುದು. ಮಳೆ, ಬಿಸಿಲು, ಮಣ್ಣು ಯಾವುದರ ಮೇಲೆಯೂ ಅವಲಂಬಿತವಾಗದೇ, ಎಲ್ಲವನ್ನೂ ಸ್ಮಾರ್ಟ್ ಆಗಿ ನಿಭಾಯಿಸುತ್ತದೆ.
ನಿಮ್ಮ ಸಸ್ಯಗಳನ್ನು ಸ್ಥಳಾಂತರಿಸಬಹುದು.
ಎಲ್ಲಾ ಸಸ್ಯಗಳೂ ತನ್ನದೇ ಆದ ಜೀವಿತಾವಧಿಯನ್ನು ಹೊಂದಿರುತ್ತದೆ. ತನ್ನ ಜೀವನ ಚಕ್ರದ ಅವಧಿ ಮುಗಿಯುವವರೆಗೆ ಸ್ಮಾರ್ಟ್ ಗಾರ್ಡನ್‌ನಲ್ಲಿ ಬೆಳೆಯುತ್ತವೆ. ಆದರೆ, ಇನ್ನಷ್ಟು ವರ್ಷ ಆ ಸಸ್ಯಗಳನ್ನು ಬೆಳೆಸಲು ನೀವು ಬಯಸಿದರೆ, ಅದನ್ನು ಬೇರೆಡೆ, ಮಣ್ಣಿನ ಮಡಕೆಯೊಳಗೆ ಅಥವಾ ಇತರ ಹೊರಾಂಗಣ ಪ್ರದೇಶಗಳಿಗೆ ಸ್ಥಳಾಂತರಿಸಿ ಬೆಳೆಸಬಹುದು.
ಆದರೆ, ಈ ಸಂದರ್ಭ ನೀವು ಏನನ್ನು ಗಮನದಲ್ಲಿರಿಸಬೇಕೆಂದರೆ, ಯಾವುದೇ ಗಿಡದ ನೈಸರ್ಗಿಕ ಜೀವಿತಾವಧಿ ಮುಗಿಯುವ ಮುನ್ನವೇ ನೀವು ಅದನ್ನು ಸ್ಥಳಾಂತರಿಸಬೇಕು. ಸಸ್ಯಗಳನ್ನು ಕಸಿ ಮಾಡಿದ ನಂತರ, ಅದಕ್ಕೆ ಪುಷ್ಟೀಕರಿಸಿದ ಮಣ್ಣನ್ನು ಸೇರಿಸಿ, ಪ್ರತಿನಿತ್ಯ ನೀರು ಹಾಕುತ್ತಿರಬೇಕು.
ಯಾವ ಬೀಜವನ್ನೂ ಬಿತ್ತಬಹುದು
ಸಾಮಾನ್ಯವಾಗಿ ಈ ಸ್ಮಾರ್ಟ್ ಗಾರ್ಡನ್ ಕಿಟ್‌ನಲ್ಲಿ ಒಂದಷ್ಟು ಬೀಜಗಳು ಲಭ್ಯವಿರುತ್ತದೆ. ಇದನ್ನು ಹೊರತುಪಡಿಸಿ ನಾವೇ ಮಾರುಕಟ್ಟೆಯಿಂದ ಬೀಜಗಳನ್ನು ತಂದು ಬಿತ್ತಬಹುದು. ತುಳಸಿ, ಟೊಮ್ಯಾಟೋ, ಎಲೆ ಸಾಸಿವೆ, ಮೆಣಸಿನಕಾಯಿ, ಸಿಹಿ ಮೆಣಸು ಇತ್ಯಾದಿ ಜನಪ್ರಿಯವಾದವುಗಳು.
‘ಅದನ್ನೆಲ್ಲಾ ಮಾಡೋಕೆ ನನಗೆ ಟೈಮ್ ಇಲ್ಲ’ ಎಂದು ಹೇಳುವವರಿಗೆ ಇದು ಬಹಳ ಉಪಕಾರಿಯಾಗಬಲ್ಲದು. ಎಲ್ಲವನ್ನೂ ಸ್ಮಾರ್ಟ್ ಆಗಿ ನಿಭಾಯಿಸಬಲ್ಲ ಈ ಗಾರ್ಡನ್ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ. ನೀವೇ ತರಕಾರಿಗಳನ್ನು ಬೆಳೆಸಿ, ಸವಿಯಿರಿ.