Advertisement

ದೇವದುರ್ಗ ಸರಕಾರಿ ಬಾಪೂಜಿ ಶಾಲೆ “ಮಾಡೆಲ್‌”

09:56 PM Aug 10, 2022 | Team Udayavani |

ದೇವದುರ್ಗ: ಸರಕಾರಿ ಶಾಲೆಯೆಂದರೆ ಮೂಗು ಮುರಿಯುವವರೇ ಹೆಚ್ಚು. ಅಂತಹದರಲ್ಲಿ ಹಳೆ ವಿದ್ಯಾರ್ಥಿಗಳ ನೆರವಿನಿಂದ ಸರಕಾರಿ ಶಾಲೆಯೊಂದು ಮಧುವಣಗಿತ್ತಿಯಂತೆ ಶೃಂಗಾರಗೊಂಡು ನೋಡುಗರ ಗಮನ ಸೆಳೆಯುತ್ತಿದೆ.

Advertisement

ಪಟ್ಟಣದ ಗೌತಮ ವಾರ್ಡ್‌ನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಬಾಪೂಜಿ ಪಾಠಶಾಲೆ 1ರಿಂದ 7ನೇ ತರಗತಿ 140 ಮಕ್ಕಳ ದಾಖಲಾತಿ ಹೊಂದಿದೆ. ಇಲ್ಲಿ ಮಕ್ಕಳಿಗೆ ಸ್ಮಾರ್ಟ್‌ ಕ್ಲಾಸ್‌ ಬೋಧನೆ ವ್ಯವಸ್ಥೆ ಮಾಡಲಾಗಿದೆ. ಶಾಲಾ ಮಕ್ಕಳೇ ಪರಿಸರ ಸಂರಕ್ಷಣೆಯ ಹೊಣೆ ಹೊತ್ತಿದ್ದಾರೆ.

ಮಧುವಣಗಿತ್ತಿಯಂತೆ ಶೃಂಗಾರ: ಸರಕಾರಿ ಹಿರಿಯ ಪ್ರಾಥಮಿಕ ಬಾಪೂಜಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಕಿರಿದಾದ ಕಾಂಪೌಂಡ್‌ ಎತ್ತರಗೊಳಿಸಿ ಕಿಡಿಗೇಡಿಗಳ ಕಾಟ ತಪ್ಪಿಸಿದ್ದಾರೆ. ಹೀಗಾಗಿ ಮಕ್ಕಳ ಕಲಿಕೆಗೆ ಅನುಕೂಲವಾದಂತಾಗಿದೆ. ಹಳೆ ವಿದ್ಯಾರ್ಥಿ ಬಸವರಾಜ ಅಕ್ಕರಕಿ ಒಬ್ಬರೇ ಶಾಲೆಗೆ ಸುಣ್ಣ-ಬಣ್ಣ, ಶಾಲಾ ಪ್ರವೇಶ ದ್ವಾರದಲ್ಲಿ ಗೇಟ್‌ ಅಳವಡಿಸಿದ್ದಾರೆ. 60ರಿಂದ 70 ಸಾವಿರ ರೂ. ಸ್ವಂತ ಖರ್ಚು ಮಾಡಿ ಶಾಲೆಯನ್ನು ಮಧುವಣಗಿತ್ತಿಯಂತೆ ಶೃಂಗಾರಗೊಳಿಸಿದ್ದಾರೆ. ಪಟ್ಟಣದ ಕ್ಲಸ್ಟರ್‌ ವ್ಯಾಪ್ತಿಯ ಸರಕಾರಿ ಶಾಲಾ ಶಿಕ್ಷಕರ ಮೀಟಿಂಗ್‌, ತರಬೇತಿಗಳು ಇಲ್ಲಿಯೇ ನಡೆಯುತ್ತಿರುವುದು ವಿಶೇಷ.

ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್‌: ಇಲ್ಲಿನ ಸರಕಾರಿ ಬಾಪೂಜಿ ಶಾಲಾ ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್‌ ನೀಡಲಾಗುತ್ತಿದೆ. ಪಟ್ಟಣ ವ್ಯಾಪ್ತಿಯ ಸರಕಾರಿ ಶಾಲೆಯಲ್ಲಿ ಇಂತಹದೊಂದು ಸ್ಮಾರ್ಟ್‌ ಕ್ಲಾಸ್‌ ವ್ಯವಸ್ಥೆ ಎಲ್ಲಿಯೂ ಇಲ್ಲ. ಹಳೆ ವಿದ್ಯಾರ್ಥಿಗಳ ನೆರವಿನಿಂದ ಮಕ್ಕಳ ಬೋಧನೆಗೆ ಅನುಕೂಲವಾಗಿದೆ ಎನ್ನುತ್ತಾರೆ ಮುಖ್ಯಶಿಕ್ಷಕ ಮಹಾದೇವಪ್ಪ.

ಮಕ್ಕಳಿಗೆ ಪರಿಸರ ಹೊಣೆ: ಶಾಲೆ ಸುಸಜ್ಜಿತ ಕಾಂಪೌಡ್‌ ಹೊಂದಿದ್ದು, ಪ್ರವೇಶ ದ್ವಾರದಲ್ಲಿ ಗೇಟ್‌ ಇದೆ. ಶಾಲಾ ಆವರಣದಲ್ಲಿ ವಿವಿಧ ಬಗ್ಗೆಯ ಗಿಡಗಳು ನೆಡಲಾಗಿದ್ದು, ಶಿಕ್ಷಕರು ಒಂದೊಂದು ಗಿಡಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಒಬ್ಬೊಬ್ಬ ವಿದ್ಯಾರ್ಥಿಗಳಿಗೆ ವಹಿಸಿದ್ದಾರೆ. ಶಾಲೆಯಲ್ಲಿ ಕುಡಿವ ನೀರಿನ ಸೌಲಭ್ಯ ಇದ್ದು, ಆಟಕ್ಕೆ ಬಿಟ್ಟ ವೇಳೆ ಮಕ್ಕಳು ಅವರವರ ಗಿಡಗಳಿಗೆ ನೀರು ಹಾಕುವ ಮೂಲಕ ರಕ್ಷಣೆಗೆ ಮುಂದಾಗಿದ್ದಾರೆ.

Advertisement

ಇತಿಹಾಸ ಹೊಂದಿದ ಶಾಲೆ: ಈ ಶಾಲೆಯಲ್ಲಿ ಕಲಿತಿರುವ ಬಹುತೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಕೆಲ ವಿದ್ಯಾರ್ಥಿಗಳು ವಿದೇಶದಲ್ಲಿ ಹಲವು ಹುದ್ದೆಗಳಲ್ಲಿದ್ದಾರೆ. ಬಾಗಲಕೋಟೆ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಪ್ರಕಾಶ ಅಕ್ಕರಕಿ ಬಾಪೂಜಿ ಶಾಲೆಯಲ್ಲೇ ಕಲಿತಿದ್ದಾರೆ. ಪುರಸಭೆ ಸದಸ್ಯರು, ಪತ್ರಕರ್ತರು, ವಿವಿಧ ಸರಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳು ಶಾಲೆಯ ಬಗೆ ಮುಚ್ಚಿಗೆ ವ್ಯಕ್ತಪಡಿಸಿದ್ದಾರೆ ಎಂದು ವಾರ್ಡ್‌ನ ಪುರಸಭೆ ಸದಸ್ಯ ಚಂದ್ರಶೇಖರ ಕುಂಬಾರ ತಿಳಿಸಿದ್ದಾರೆ.

-ನಾಗರಾಜ ತೇಲ್ಕರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next