Advertisement

ಮಣಿಪಾಲ, ಉಡುಪಿ, ಮಲ್ಪೆ ಆಗಲಿದೆ ಸ್ಮಾರ್ಟ್‌ ಸಿಟಿ!

07:06 PM Nov 11, 2020 | mahesh |

ಉಡುಪಿ: ಉಡುಪಿ, ಮಣಿಪಾಲ ಮತ್ತು ಮಲ್ಪೆಯನ್ನು “ಸ್ಮಾರ್ಟ್‌ ಸಿಟಿ’ ಪರಿಕಲ್ಪನೆಯಲ್ಲಿ ಅಭಿವೃದ್ಧಿ ಪಡಿಸಲು ಅಗತ್ಯವಿರುವ ಸಿದ್ಧತೆ ನಡೆಯುತ್ತಿದ್ದು, ಇದೀಗ ಡಿಪಿಆರ್‌ ಪೂರ್ಣಗೊಂಡಿದೆ. ಯೋಜನೆ ಅನುಮೋದನೆಗೆ ರಾಜ್ಯ ಸರಕಾರ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ.

Advertisement

ಅಂತಾರಾಷ್ಟ್ರೀಯ ಗುಣ್ಣಮಟ್ಟದ ಮೂಲಸೌಕರ್ಯ, ಸಂಚಾರ ನಿಯಂತ್ರಣ, ಸುರಕ್ಷತೆ, ಪ್ರವಾಸೋದ್ಯಮ, ಸ್ಥಳೀಯ ಹೂಡಿಕೆ ಹೆಚ್ಚಳ ಮೊದಲಾದವು “ಸ್ಮಾರ್ಟ್‌ ಸಿಟಿ’ಯ ಮುಖ್ಯ ಯೋಜನೆಯ ಉದ್ದೇಶವಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ ಮಾಡೆಲ್‌) ಮಣಿಪಾಲ, ಉಡುಪಿ, ಮಲ್ಪೆ ಯನ್ನು ಸ್ಮಾರ್ಟ್‌ ಸಿಟಿಯಾಗಿ ಪರಿವರ್ತಿಸಲು ಬೆಂಗಳೂರಿನ ಸಂಸ್ಥೆ ಯೋಜನೆಯ ನೀಲನಕಾಶೆ ತಯಾರಿಸಿದೆ.

ಪಿಪಿಪಿ ಮಾಡೆಲ್‌
ಪಿಪಿಪಿ ಮಾಡೆಲ್‌ ಅನ್ವಯ ಸ್ಥಳೀಯಾಡಳಿತ ಅಂದರೆ ನಗರಸಭೆ ಹಾಗೂ ಜಿಲ್ಲಾಡಳಿತ ಖಾಸಗಿ ಸಂಸ್ಥೆಗೆ ಸ್ಮಾರ್ಟ್‌ ಸಿಟಿ ಅಭಿವೃದ್ದಿಗೆ ಅಗತ್ಯವಿರುವ ಸ್ಥಳವನ್ನು ನೀಡುತ್ತದೆ. ಈ ಯೋಜನೆಗೆ ಸ್ಥಳೀಯಾಡಳಿತದಿಂದ ಯಾವುದೇ ರೀತಿಯಾಗಿ ಆರ್ಥಿಕ ಸಹಾಯವಿರುವುದಿಲ್ಲ. ಸ್ಮಾರ್ಟ್‌ ಸಿಟಿ ಸಂಪೂರ್ಣವಾಗಿ ನಿರ್ಮಾಣವಾದ ಬಳಿಕ ಸಂಸ್ಥೆಗೆ ಆಯಾ ಸ್ಥಳದಿಂದ ಬರುವ ಜಾಹೀರಾತುಗಳು ಹಾಗೂ ಅಭಿವೃದ್ಧಿ ಪಡಿಸಿದ ಸ್ಥಳಗಳ ವಾಣಿಜ್ಯ ಅಂಗಡಿಗಳ ಆದಾಯದಿಂದ ನಗರ ನಿರ್ವಹಣೆ ಹಾಗೂ ಯೋಜನೆ ತಗಲಿದ ಮೊತ್ತ ಹಿಂಪಡೆಯಲಿದೆ.

ನಗರದ ತುಂಬ ಹದ್ದಿನ ಕಣ್ಣು
ಇನ್ನೂ ನಗರದ ಪ್ರಮುಖ ಕಡೆಗಳಲ್ಲಿ ಸಂಚಾರಿ ನಿಯಮವನ್ನು ಉಲ್ಲಂ ಸುವ ವಾಹನಗಳ ಪತ್ತೆಗೆ ಎಲ್‌ಪಿ ಕ್ಯಾಮೆರಾ, ಸ್ಮಾರ್ಟ್‌ಪೋಲ್ಸ್‌, ಸ್ಮಾರ್ಟ್‌ ಟವರ್, ಕಂಟ್ರೋಲ್‌ ಸೆಂಟರ್‌, ಬಸ್‌ಬೇ, ಆಟೋ ಬೇ, ಬೈಕ್‌ ಬೇ, ಸೈಕ್ಲಿಂಗ್‌ ಪಾಥ್‌, ಇ-ಟಾಯ್ಲೆಟ್‌, ಸ್ಮಾರ್ಟ್‌ ಲಾಂಜ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸ್ಮಾರ್ಟ್‌ ಲೈಟ್ಸ್‌, ಕೆಮರಾ, ಸರ್ವೀಲೆನ್ಸ್‌, ವೈಫೈ ಹಾಟ್‌ಸ್ಪಾಟ್‌, ಡಿಜಿಟಲ್‌ ಡಿಸ್‌ಪ್ಲೇ, ಆರ್‌ಎಫ್ಐಡಿ ಕಾರ್ಡ್‌ ರೀಡರ್‌ ಮೊದಲಾದವುಗಳನ್ನು ಒಳಗೊಂಡ 10ಕ್ಕೂ ಅಧಿಕ ಸ್ಮಾರ್ಟ್‌ ಪೋಲ್‌, ಸ್ಮಾಟ್‌ ಟವರ್‌ಗಳನ್ನು ನಿರ್ಮಿಸುವ ಯೋಜನೆ ಇದೆ.

ಏನೆಲ್ಲ ಸ್ಮಾರ್ಟ್‌?
ಸ್ಮಾರ್ಟ್‌ ಮಣಿಪಾಲ, ಉಡುಪಿ, ಮಲ್ಪೆಯ ಚಿತ್ರಣ ಸಂಪೂರ್ಣವಾಗಿ ಬದಲಾಗಲಿದೆ. ಮಲ್ಟಿಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆಯಿಂದ ಪ್ರಸ್ತುತ ಉಡುಪಿ, ಮಲ್ಪೆ, ಮಣಿಪಾಲದಲ್ಲಿ ಕಾಡುತ್ತಿರುವ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ಸಿಗಲಿದೆ. ಟ್ರಾಫಿಕ್‌ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಲಿದೆ. ಮುಂದೆ ರೋಡ್‌ಗೆ ಇಳಿಯಲಿರುವ ಇಲೆಕ್ಟ್ರಾನಿಕ್‌ ವಾಹನಗಳಿಗಾಗಿ ಚಾರ್ಜಿಂಗ್‌ ವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಆಯ್ದ ಭಾಗದಲ್ಲಿ ಪ್ಯಾನಿಕ್‌ ಬಟನ್‌ ವ್ಯವಸ್ಥೆ ಇರಲಿದೆ.

Advertisement

ನೀಲನಕಾಶೆ ಸಿದ್ಧ
ಕೇಂದ್ರ ಸರಕಾರ ಸ್ಮಾರ್ಟ್‌ ಸಿಟಿಯಾಗಿ ಘೋಷಣೆ ಮಾಡಿದ ಬಳಿಕ ಏನೆಲ್ಲ ಸೌಲಭ್ಯ ನೀಡುತ್ತದೆಯೋ ಅದೆಲ್ಲವು ನಮ್ಮ ಪಿಪಿಪಿ ಮಾಡೆಲ್‌ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಇರಲಿದೆ. ಬೆಂಗಳೂರಿನ ಸಂಸ್ಥೆಯೊಂದು ನೀಲನಕಾಶೆ ಸಿದ್ಧಪಡಿಸಿದೆ. ನಗರ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಅನುಕೂಲವಾಗಲಿದೆ. ಡಿಪಿಆರ್‌ ಪೂರ್ಣಗೊಂಡಿದ್ದು, ಸರಕಾರದಿಂದ ಅನುಮೋದನೆ ಸಿಕ್ಕದ ಬಳಿಕ ಶೀಘ್ರದಲ್ಲಿ ಟೆಂಡರ್‌ ಆಗಲಿದೆ.
– ಕೆ.ರಘುಪತಿ ಭಟ್‌,  ಶಾಸಕರು, ಉಡುಪಿ

ವಿವಿಧ ಸಮಸ್ಯೆಗಳು ದೂರ
ಮಣಿಪಾಲ, ಉಡುಪಿ, ಮಲ್ಪೆ ಆರ್ಥಿಕ, ಶೈಣಿಕ, ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿ ಸ್ಮಾರ್ಟ್‌ ಸಿಟಿ ನಿರ್ಮಾಣ ಮಾಡಲು ಖಾಸಗಿ ಸಂಸ್ಥೆ ಮುಂದೆ ಬಂದಿದೆ. ಸ್ಮಾರ್ಟ್‌ ಸಿಟಿ ನಿರ್ಮಾಣವಾದರೆ ಟ್ರಾಫಿಕ್‌ ಸೇರಿದಂತೆ ವಿವಿಧ ಸಮಸ್ಯೆಗಳು ದೂರವಾಗಲಿದೆ.
-ಜಿ.ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next