ಕೊಡಿಯಾಲಬೈಲ್: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಜೈಲ್ ರೋಡ್‌ನ ಅಭಿವೃದ್ಧಿ ಹಾಗೂ ಕಾಂಕ್ರೀಟ್ ಕಾಮಗಾರಿ ಆರಂಭವಾಗಿದ್ದು, ಮುಂದಿನ 3 ತಿಂಗಳುಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಆಗಲಿದೆ.
ಪ್ರಸ್ತುತ ಈ ರಸ್ತೆಯಲ್ಲಿ ಒಂದು ಬದಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ, ಕೆಯುಐಡಿಎಫ್‌ಸಿ ಯೋಜನೆಯಡಿ ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಬಲ್ಲಾಳ್‌ಬಾಗ್‌ನಿಂದ ಪಿವಿಎಸ್ ಕಡೆಗೆ ಸಾಗುವ ರಸ್ತೆಯಲ್ಲಿ ಬೆಸೆಂಟ್ ಜಂಕ್ಷನ್ ಬಳಿ ಎಡ ಬದಿಗೆ ಹೋಗುವ ರಸ್ತೆಯಲ್ಲಿ ಕೆನರಾ ಕಾಲೇಜು, ಸಬ್ ಜೈಲು, ಡಯೆಟ್/ ಶಿಕ್ಷಕಿಯರ ತರಬೇತಿ ಸಂಸ್ಥೆ ಮೂಲಕ ಸಾಗಿ ಕಾಪುಚಿನ್ ಚರ್ಚ್ ವರೆಗಿನ ರಸ್ತೆ, ಜಿಲ್ಲಾ ಪಶು ವೈದ್ಯಕೀಯ ಇಲಾಖಾ ಕಚೇರಿ ಬಳಿಯಿಂದ ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕರ ಕಚೇರಿ ತನಕ, ಜೈಲ್ ರೋಡ್‌ನಿಂದ ಇಬ್ರೋಸ್ ಕಾಂಪ್ಲೆಕ್ಸ್ ಮುಂಭಾಗವಾಗಿ ಎಂ.ಜಿ. ರಸ್ತೆಗೆ ಸಂಪರ್ಕಿಸುವ ತನಕದ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಯಲಿದೆ.
ಪ್ರಥಮ ಹಂತದಲ್ಲಿ ಬೆಸೆಂಟ್ ಜಂಕ್ಷನ್‌ನಿಂದ ಕಾಪುಚಿನ್ ಚರ್ಚ್ ವರೆಗಿನ ರಸ್ತೆಯ ಬದಿಯಲ್ಲಿ ಒಳ ಚರಂಡಿ ನಿರ್ಮಾಣ ಕಾಮಗಾರಿ ಇದೀಗ ಆರಂಭವಾಗಿದ್ದು, ಪ್ರಗತಿಯಲ್ಲಿದೆ. ಒಳಚರಂಡಿ ನಿರ್ಮಾಣ ಕೆಲಸ ಮುಕ್ತಾಯವಾದ ಬಳಿಕ ರಸ್ತೆಯ ಕಾಂಕ್ರೀಟ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ರಸ್ತೆಯು ಕೆಲವು ಕಡೆ 12 ಅಡಿ, ಇನ್ನೂ ಕೆಲವು ಭಾಗಗಳಲ್ಲಿ 15 ಅಡಿ ಅಗಲ ಇರಲಿದೆ. ರಸ್ತೆ ವಿಸ್ತರಣೆಗಾಗಿ ಕೆಲವೆಡೆ ಭೂಸ್ವಾಧೀನ ಮಾಡ ಬೇಕಾಗುತ್ತದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:ಕ್ಯಾಶ್‌ಲೆಸ್ ವ್ಯವಹಾರದತ್ತ ಕೊಂಕಣ ರೈಲ್ವೇ : ಎಸ್ ಬಿಐನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ
ಜನವರಿ ಅಂತ್ಯದ ವೇಳೆ ಪೂರ್ಣ
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧೆಡೆ ಕಾಮಗಾರಿ ನಡೆಯುತ್ತಿದ್ದು, ಜೈಲ್ ರೋಡ್ ಅಭಿವೃದ್ಧಿ ಕೆಲಸ ಇದೀಗ ಆರಂಭವಾಗಿದೆ. 2022 ಜನವರಿ ಅಂತ್ಯದ ವೇಳೆಗೆ ಈ ರಸ್ತೆಗೆ ಕಾಂಕ್ರೀಟ್ ಅಳವಡಿಕೆ, ಒಳ ಚರಂಡಿ ಮತ್ತು ಫುಟ್‌ಪಾತ್ ನಿರ್ಮಾಣ ಕಾಮಗಾರಿ ಪೂರ್ತಿಗೊಳ್ಳುವ ನಿರೀಕ್ಷೆ ಇದೆ. ಇದರ ಹೊರತಾಗಿ ಸದ್ಯದಲ್ಲಿಯೇ ಹಂಪನಕಟ್ಟೆ ಪ್ರದೇಶದಲ್ಲಿ ಶರವು ದೇವಸ್ಥಾನ ರಸ್ತೆಯ ಕಾಂಕ್ರೀಟ್ ಕಾಮಗಾರಿಯನ್ನೂ ಆರಂಭಿ ಸಲಾಗುವುದು.
-ಅರುಣ್ ಪ್ರಭ,ಜನರಲ್ ಮ್ಯಾನೇಜರ್, ಮಂಗಳೂರು ಸ್ಮಾರ್ಟ್ ಸಿಟಿ ಲಿ.