ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಾಲಾ ಅಭಿವೃದ್ಧಿ ಏನೆಲ್ಲಾ ಅಂಶಗಳನ್ನು ಹೊಂದಿರಬೇಕು ಎಂಬುದರ ಕುರಿತಾಗಿ 1 ಕಿಮೀ ಉದ್ದದ ಅಭಿವೃದ್ಧಿ ಮಾದರಿ ಸಿದ್ಧಗೊಂಡಿದ್ದು, ಮಾ. 5-6ರಂದು ದೆಹಲಿಯಲ್ಲಿ ನಡೆಯುವ ತಾಂತ್ರಿಕ ತಜ್ಞರು-ಮಾರ್ಗದರ್ಶಕರ ಸಭೆಯಲ್ಲಿ ಒಪ್ಪಿಗೆ ದೊರೆತರೆ, ನಾಲಾ ಅಭಿವೃದ್ಧಿಗೆ ಅಧಿಕೃತ ಚಾಲನೆ ದೊರೆತಂತಾಗಲಿದೆ. ಸುಮಾರು 8.59 ಕಿಮೀ ಉದ್ದದ ಉಣಕಲ್ಲ ನಾಲಾ ಸ್ಮಾರ್ಟ್ ರೂಪ ತಾಳಲಿದೆ.
ಸ್ಮಾರ್ಟ್ ಸಿಟಿಯ ವಿವಿಧ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳಿಗೆ ಸ್ಮಾರ್ಟ್ ರೂಪ ನೀಡಿಕೆಯಲ್ಲಿ ನಾಲಾಗಳ ಅಭಿವೃದ್ಧಿಯೂ ಒಂದಾಗಿದೆ. ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಗುರುತಿಸಿದ ನಾಲಾಗಳಲ್ಲಿ, ಮೊದಲ ಹಂತವಾಗಿ ಉಣಕಲ್ಲ ನಾಲಾವನ್ನು ಪ್ರಾಯೋಗಿಕವಾಗಿ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. 1 ಕಿಮೀ ಪ್ರಾಯೋಗಿಕ: ಉಣಕಲ್ಲ ನಾಲಾ ಉಣಕಲ್ಲ ಕೆರೆ ತುದಿಯಿಂದ ಒಟ್ಟು 11 ಕಿಮೀ ಉದ್ದ ಹರಿಯುತ್ತಿದೆ. ಇದರಲ್ಲಿ 8.59 ಕಿಮೀ ಉದ್ದದ ಪ್ರದೇಶದಲ್ಲಿ ನಾಲಾವನ್ನು ಸ್ಮಾರ್ಟ್ ಸಿಟಿ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದನ್ನು ಕೈಗೊಳ್ಳಬೇಕಾದರೆ ಮೊದಲು ದೆಹಲಿಯಲ್ಲಿನ ತಾಂತ್ರಿಕ ಸಲಹಾ ಕಮಿಟಿ ಒಪ್ಪಿಗೆ ಅಗತ್ಯವಾಗಿದೆ. ನಾಲಾ ಅಭಿವೃದ್ಧಿಗೆ ವಿಶೇಷವಾಗಿ ಗ್ರೀನ್ ಕಾರಿಡಾರ್‌ಗೆ ರಾಷ್ಟ್ರಮಟ್ಟದ ತಾಂತ್ರಿಕ ಸಲಹಾ ಕಮಿಟಿಯ ಅನುಮೋದನೆ ಕಡ್ಡಾಯವಾಗಿದೆ. ಉಳಿದ ಯೋಜನೆಗಳಿಗೆ ರಾಜ್ಯಮಟ್ಟದ ತಾಂತ್ರಿಕ ಸಲಹಾ ಕಮಿಟಿಯೇ ಒಪ್ಪಿಗೆ ನೀಡಲಿದೆ.
ಉಣಕಲ್ಲ ನಾಲಾದ ಗ್ರೀನ್ ಕಾರಿಡಾರ್ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಕೈಗೊಳ್ಳಬೇಕು, ಅದು ಏನೆಲ್ಲಾ ಒಳಗೊಂಡಿರಬೇಕು ಎಂಬುದರ ಸಲಹೆಯನ್ನು ದೇಶ-ವಿದೇಶಗಳ ತಜ್ಞರು ನೀಡಲಿದ್ದು, ಮಾರ್ಗದರ್ಶನ ನೀಡಲಿದ್ದಾರೆ. ಹು-ಧಾ ಸ್ಮಾರ್ಟ್ ಸಿಟಿ ಯೋಜನೆ ಕಂಪೆನಿ ಅಧಿಕಾರಿಗಳು ಈಗಾಗಲೇ ಒಂದು ಕಿಮೀ ವ್ಯಾಪ್ತಿಯ ನಾಲಾ ಅಭಿವೃದ್ಧಿಯ ಮಾದರಿ ಹಾಗೂ ಸಾಧ್ಯತಾ ವರದಿ ಸಿದ್ಧಪಡಿಸಿದ್ದಾರೆ. ಒಂದು ಕಿಮೀ ಉದ್ದದ ನಾಲಾ ಅಭಿವೃದ್ಧಿಯಲ್ಲಿ ನಾಲಾದ ಎರಡು ಕಡೆ ಗೋಡೆ ನಿರ್ಮಾಣ, ಪಾದಚಾರಿ ಮಾರ್ಗ, ಸೈಕಲ್ ಮಾರ್ಗ, ಒಳಚರಂಡಿ ನೀರು ಸಂಸ್ಕರಣಾ ಘಟಕ, ಹಸಿರುಕರಣ ಇನ್ನಿತರ ಅಂಶಗಳನ್ನೊಳಗೊಂಡ ಯೋಜನೆ ಸಿದ್ಧಪಡಿಸಲಾಗಿದೆ.
ಮಾ. 5-6ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ತಾಂತ್ರಿಕ ಸಲಹಾ ಕಮಿಟಿ ಸಭೆಯಲ್ಲಿ ಇದನ್ನು ಪರಿಶೀಲಿಸಲಿದ್ದು, ಅಗತ್ಯ ಸಲಹೆ ನೀಡಲಾಗುತ್ತದೆ. ಒಂದು ಕಿಮೀ ವ್ಯಾಪ್ತಿಯ ನಾಲಾ ಅಭಿವೃದ್ಧಿ ಕಾರ್ಯಕ್ಕೆ ಏನೆಲ್ಲಾ ಬದಲಾವಣೆ, ಸೇರ³ಡೆ ಬಗ್ಗೆ ಸೂಚಿಸಲಾಗುತ್ತದೆ. ಜತೆಗೆ ಅನುದಾನ ನಿಗದಿಪಡಿಸಲಾಗುತ್ತದೆ. ಗುಜರಾತ್‌ನ ಸೂರತ್ ಹಾಗೂ ಅಸ್ಸಾಂನ ಗುವಾಹಟಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಾಲಾಗಳ ಅಭಿವೃದ್ಧಿಗೆ ಸಲಹೆ ನೀಡಿದ ತಾಂತ್ರಿಕ ತಜ್ಞರ ತಂಡವೇ ಹು-ಧಾ ನಗರದ ನಾಲಾ ಅಭಿವೃದ್ಧಿಗೆ ಸಲಹೆ ನೀಡಲಿದೆ.
ಸ್ಮಾರ್ಟ್‌ಸಿಟಿ ಯೋಜನೆ ರಾಷ್ಟ್ರಮಟ್ಟದ ತಾಂತ್ರಿಕ ಸಲಹಾ ಕಮಿಟಿ ಉಣಕಲ್ಲ ನಾಲಾ ಅಭಿವೃದ್ಧಿಯ ಯೋಜನೆಗೆ ಒಪ್ಪಿಗೆ ನೀಡಿದರೆ, ಒಂದು ಕಿಮೀ ವ್ಯಾಪ್ತಿಯ ಅಭಿವೃದ್ಧಿ ಕಾರ್ಯ ಆರಂಭಗೊಳ್ಳಲಿದೆ. ನಂತರದಲ್ಲಿ ಇದೇ ಮಾದರಿಯಲ್ಲಿ ಸುಮಾರು 8.59 ಕಿಮೀ ನಾಲಾವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಸುಮಾರು 8.59 ಕಿಮೀ ಉದ್ದದಲ್ಲಿ ನಾಲಾ ಅಭಿವೃದ್ಧಿಯಲ್ಲಿ ಪ್ರತಿ ಒಂದೂವರೆ ಕಿಮೀಗೆ ಒಂದರಂತೆ ಚರಂಡಿ ನೀರು ಸಂಸ್ಕರಣೆಯ ಸಣ್ಣ ಸಣ್ಣ ಘಟಕಗಳ ಸ್ಥಾಪನೆ ಸಲಹೆ ಬಂದಿದೆಯಾದರೂ, ಅದು ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದ್ದಾಗಿದೆ. ಸಣ್ಣ ಪ್ರಮಾಣದಲ್ಲಿ ಒಂದೆರಡು ಕಡೆ ಸ್ಥಾಪಿಸಿ ಸಂಸ್ಕರಣೆ ನೀರನ್ನು ಎಲ್ಲ ಕಡೆ ಪೂರೈಕೆಗೆ ಕ್ರಮ ಕೈಗೊಳ್ಳಬೇಕೋ ಅಥವಾ ಎಷ್ಟು ಘಟಕ ಸ್ಥಾಪನೆ ಮಾಡಬೇಕೆಂಬುದರ ಬಗ್ಗೆ ಇನ್ನು ಸ್ಪಷ್ಟತೆ ಮೂಡಬೇಕಾಗಿದೆ.
ಉಣಕಲ್ಲ ನಾಲಾ ಅಭಿವೃದ್ಧಿ ಯೋಜನೆಗೆ ಮಾ. 5-6ರಂದು ದೆಹಲಿಯಲ್ಲಿ ನಡೆಯುವ ತಾಂತ್ರಿಕ ಕಮಿಟಿ ಒಪ್ಪಿಗೆ ನೀಡಿದರೆ 1 ಕಿಮೀ ಪ್ರಾಯೋಗಿಕ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ. ಪ್ರಾಯೋಗಿಕ ಕಾಮಗಾರಿ ಮುಗಿದ ನಂತರದಲ್ಲಿ ಅದೇ ಮಾದರಿಯಲ್ಲಿ ಒಟ್ಟು 8.59 ಕಿಮೀ ನಾಲಾ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಬುಧವಾರ ನಡೆಯುವ ರಾಜ್ಯಮಟ್ಟದ ತಾಂತ್ರಿಕ ಕಮಿಟಿ ಸಭೆಯಲ್ಲಿ ಮೂರ್‍ನಾಲ್ಕು ಪ್ರಮುಖ ಯೋಜನೆಗಳಿಗೆ ಒಪ್ಪಿಗೆ ದೊರೆತರೆ ಡಿಪಿಆರ್ ಸಿದ್ಧತೆಗೆ ಎಲ್ಲ ತಯಾರಿ ಕೈಗೊಂಡಿದ್ದೇವೆ.
-ಎಸ್.ಎಚ್. ನರೇಗಲ್, ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್ ಸಿಟಿ ಯೋಜನೆ
-ಅಮರೇಗೌಡ ಗೋನವಾರ