Advertisement

ಸ್ಮಾರ್ಟ್‌ ಜಗತ್ತಿಗಾಗಿ ಸ್ಮಾರ್ಟ್‌ ಪುಸ್ತಕ

11:16 AM Dec 13, 2021 | Team Udayavani |

ಚಿಕೀ ಸರ್ಕಾರ್‌ ಪಶ್ಚಿಮ ಬಂಗಾಲದ ಕೋಲ್ಕತಾ ಮೂಲದವರು. ಪತ್ರಕರ್ತ ಅವೀಕ್‌ ಸರ್ಕಾರ್‌ ಅವರ ಮಗಳಾಗಿರುವ ಚಿಕೀಗೆ ಬಾಲ್ಯದಿಂದಲೂ ಪುಸ್ತಕ ಲೋಕದ ಪರಿಚಯವಿತ್ತು. ಅವರಲ್ಲಿದ್ದ ಅಪಾರ ಪುಸ್ತಕ ಪ್ರೇಮದಿಂದಲೇ 2003ರಲ್ಲಿ ಲಂಡನ್‌ ಮೂಲದ ಬ್ಲೂಸ್‌ಬರಿ ಪಬ್ಲಿಷಿಂಗ್‌ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದರು. 2006ರಲ್ಲಿ ಭಾರತಕ್ಕೆ ವಾಪಸಾದ ಅವರು ಪೆಂಗ್ವಿನ್‌ ಬುಕ್ಸ್‌ ಇಂಡಿಯಾ, ರ್‍ಯಾಂಡಮ್‌ ಹೌಸ್‌ನಂತಹ ಪ್ರಸಿದ್ಧ ಪಬ್ಲಿಷಿಂಗ್‌ ಸಂಸ್ಥೆಗಳಲ್ಲಿ ಪಬ್ಲಿಷರ್‌ ಆಗಿ ಕೆಲಸ ನಿರ್ವಹಿಸಿದರು. 2013ರಲ್ಲಿ ಈ ಎರಡೂ ಸಂಸ್ಥೆಗಳು ಒಗ್ಗೂಡಿ, ಚಿಕೀ ಅವರನ್ನು ಭಾರತದ ಪಬ್ಲಿಷಿಂಗ್‌ ಹೆಡ್‌ ಆಗಿ ನೇಮಿಸಿದವು. ಅದಾದ ಎರಡೇ ವರ್ಷಗಳಲ್ಲಿ ಚಿಕೀ ತಮ್ಮದೇ ಹೊಸ ಆಲೋಚನೆಯೊಂದಿಗೆ ಆ ಹುದ್ದೆಯಿಂದ ಹೊರಬಂದು, ಜಗ್ಗರ್‌ನಾಟ್‌ ಬುಕ್ಸ್‌ ಹೆಸರಿನ ಸಂಸ್ಥೆ ಆರಂಭಿಸಿದರು. ಈಗ ಸ್ಮಾರ್ಟ್‌ಫೋನ್‌ನಲ್ಲೇ ಪುಸ್ತಕ ಕೊಡುವ ಹತ್ತಾರು ಕಂಪೆನಿಗಳಿವೆಯಾದರೂ ಆ ಆಲೋಚನೆಯನ್ನು ಭಾರತದಲ್ಲಿ ಮೊದಲ ಕಂಡ ಮಹಿಳೆ ಇವರು.

Advertisement

ಪಾರ್ಕ್‌, ರಸ್ತೆ, ರೆಸ್ಟೋರೆಂಟ್‌, ಏರ್‌ಪೋರ್ಟ್‌ ಎಲ್ಲಿಯೇ ಹೋಗಿ ನೋಡಿ.. ಅಲ್ಲಿರುವ ಜನರ ಕೈಯಲ್ಲಿ ಅಥವಾ ಜೇಬಿನಲ್ಲಿ ಮೊಬೈಲ್‌ ಇದ್ದೇ ಇರುತ್ತದೆ. ಅವರಲ್ಲಿ ಎಷ್ಟು ಮಂದಿಯ ಬಳಿ ಪುಸ್ತಕವಿರುತ್ತದೆ ಎಂದು ಕೇಳಿದರೆ ನಮಗೆ ಸಿಗುವ ಉತ್ತರ ದೊಡ್ಡದೊಂದು ಶೂನ್ಯವಷ್ಟೇ. ನಾನು ಪ್ರತೀ ದಿನ ಆಫೀಸ್‌ನಿಂದ ಹೊರ ಜಗತ್ತಿಗೆ ಕಾಲಿಟ್ಟಾಕ್ಷಣ ನೋಡುತ್ತಿದ್ದ ದೃಶ್ಯವೇ ಇದು. ಪ್ರತೀ ದಿನ ಆಫೀಸ್‌ನ ಹೊರಗೆ ಕನಿಷ್ಠ 20 ಮಂದಿಯಾದರೂ ಕಣ್ಣಿಗೆ ಬೀಳುತ್ತಿದ್ದರು. ಪುಸ್ತಕ ಲೋಕದಲ್ಲೇ ಹುಟ್ಟಿ ಬೆಳೆದಿದ್ದ ನನಗೆ ಈ ದೃಶ್ಯ ಕಸಿವಿಸಿ ತರುತ್ತಿತ್ತು.

ನಾನಂತೂ ಪುಸ್ತಕದ ಹುಳು. ನನ್ನ ಜೀವನದ ಪ್ರತೀ ಮೈಲಿಗಲ್ಲಿಗೂ ಪುಸ್ತಕವೇ ಕಾರಣವೆನ್ನಬಹುದು. ನಾನು ಪ್ರೀತಿಸಿದ ಮೊದಲನೇ ವ್ಯಕ್ತಿಯೆಂದರೆ ಅದು ಲೇಖಕ ಡಾರ್ಸಿಯವರು. 21 ವರ್ಷದವಳಿದ್ದಾಗ ಕಾಲೇಜಿನ ಬೇಸಗೆ ರಜೆಯಲ್ಲಿ ಮೊದಲ ಬಾರಿಗೆ ಹ್ಯಾರಿ ಪಾಟರ್‌ ಪುಸ್ತಕ ಓದಿದ್ದೆ. ಅಂದಿನಿಂದ ಇಂದಿನವರೆಗೂ ಪುಸ್ತಕವನ್ನು ಪ್ರೀತಿಸುತ್ತಲೇ ಬಂದಿದ್ದೇನೆ. ಸ್ವಂತ ಹಣದಲ್ಲಿ ಫ್ಲ್ಯಾಟ್‌ ಖರೀದಿಸಿದ ಖುಷಿಯಲ್ಲಿ ಎಲ್ಲರೂ ಪಾರ್ಟಿ ಮಾಡಿದರೆ, ನಾನು ಮಾತ್ರ ಆ ಫ್ಲ್ಯಾಟ್‌ನಲ್ಲಿ ಮೊದಲ ರಾತ್ರಿಯನ್ನು ಡಾರ್ಸಿಯವರ “ದಿ ಡಾ ವಿನ್ಸಿ ಕೋಡ್‌’ ಪುಸ್ತಕ ಓದುತ್ತಲೇ ಕಳೆದಿದ್ದೆ.

ನಾನು ಸ್ಪೆಶಲ್‌ ಎಂದು ನನಗೆಂದೂ ಎನಿಸಿರಲಿಲ್ಲ. ಏಕೆಂದರೆ ವೃತ್ತಿ ಆರಂಭಿಸಿದ ಪ್ರಾರಂಭಿಕ ದಿನಗಳಲ್ಲಿ ನಾನೂ ಕೂಡ ನನ್ನ ಸುತ್ತಲಿನ ಜನರಂತೆಯೇ ಮೊಬೈಲ್‌ನಲ್ಲೇ ಲೋಕ ಕಾಣುತ್ತಿದ್ದೆ. ವಿಶ್ವದಲ್ಲೇ ಅತೀ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ. ಅದರಲ್ಲಿ ನಾನೂ ಒಬ್ಬಳಾಗಿದ್ದೆ.
ನಮ್ಮ ದೇಶದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ದಿನೇದಿನೆ ಬೆಳೆಯುತ್ತಲೇ ಇದೆ. ಸ್ಮಾರ್ಟ್‌ಫೋನ್‌ಗಳ ಸಶಕ್ತೀಕರಣದ ಕೆಲಸ ನನ್ನ ಪುಸ್ತಕ ಲೋಕದಲ್ಲಿ ಪ್ರತಿಫ‌ಲನವಾಗದಿರುವುದನ್ನು ನಾನು ಕಂಡುಕೊಂಡೆ. ಇಷ್ಟು ದೊಡ್ಡ ದೇಶದಲ್ಲಿ ಕೇವಲ ಬೆರಳಂಕಿಯ ಪುಸ್ತಕದಂಗಡಿಗಳು ಪ್ರಸಿದ್ಧಿ ಪಡೆದು ಕೊಂಡಿವೆಯಷ್ಟೇ. ಭಾರತದಲ್ಲಿನ ಉತ್ತಮ ಪುಸ್ತಕ ಮಾರಾಟಗಾರರ ಪಟ್ಟಿ ನೋಡಿದರೆ ನಿಮಗೆ ಸಿಗುವುದು ಪರೀಕ್ಷೆ ಮತ್ತು ವೃತ್ತಿಪರ ಮಾರ್ಗದರ್ಶಿಗಳ ಮಾರಾಟಗಾರರಷ್ಟೇ. ನಮ್ಮ ದೇಶದ ಜನರು ಮೋಜು, ಮನೋರಂಜನೆಗಾಗಿ ಪುಸ್ತಕ ಓದುತ್ತಿಲ್ಲ ಎನ್ನುವುದನ್ನು ನನ್ನರಿವಿಗೆ ಬಂತು.

ಯಾವುದೇ ನೆಗೆಟಿವ್‌ನಲ್ಲೂ, ಪಾಸಿಟಿವ್‌ ಒಂದನ್ನು ಹುಡುಕಬೇಕು ಎಂದುಕೊಂಡು ಹುಡುಕಿದಾಗ, ಈ ಸ್ಮಾರ್ಟ್‌ಫೋನ್‌ ಕ್ರಾಂತಿ ವಿಭಿನ್ನ ರೀತಿಯ ಓದುಗರು ಮತ್ತು ಬರಹಗಾರರನ್ನು ಸೃಷ್ಟಿಸುತ್ತದೆ ಎನ್ನುವುದನ್ನು ನನ್ನ ಕಣ್ಣಿಗೆ ಕಂಡಿತು. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂಥ ಜಾಲತಾಣಗಳಲ್ಲಿ ಜನರು ಎಲ್ಲ ರೀತಿಯ ವಿಷಯಗಳನ್ನು ಬರೆಯುತ್ತಿದ್ದರು, ಹಂಚಿಕೊಳ್ಳುತ್ತಿದ್ದರು, ಮತ್ತದನ್ನು ಓದುತ್ತಿದ್ದರು. ಹಾಸ್ಯ, ಭಾವನಾತ್ಮಕ ಬರಹ, ಕಥೆ, ಕವನ, ಸರಕಾರದ ವಿರುದ್ಧ ವಾಗ್ಧಾಳಿ ಹೀಗೆ ನಾನಾ ರೀತಿಯ ಬರಹಗಳು ಅಲ್ಲಿದ್ದವು. ಆಗ ನನಗೊಂದು ಪ್ರಶ್ನೆ ಕಾಡಿತು, “ಈ ರೀತಿಯ ಬರಹಗಾರರನ್ನು ಮತ್ತು ಓದುಗರನ್ನು ನಮ್ಮವರನ್ನಾಗಿಸಿಕೊಳ್ಳಬಹುದೇ? ನನ್ನ ಓದುಗರಾಗಿ ಪರಿವರ್ತಿಸಬಹುದೇ?’ ಎನ್ನುವುದು.

Advertisement

2015ರಲ್ಲಿ ಈ ಆಲೋಚನೆ ಬಲವಾದ ಅನಂತರ ನಾನು ಕೆಲಸ ಮಾಡುತ್ತಿದ್ದ ಪ್ರಸಿದ್ಧ ಪಬ್ಲಿಷಿಂಗ್‌ ಕಂಪೆನಿಯ ಕೆಲಸವನ್ನು ತ್ಯಜಿಸಿದೆ. ದಿಲ್ಲಿಯಲ್ಲಿ ಸಣ್ಣದೊಂದು ಕೋಣೆ ತೆರೆದು, ಅದನ್ನೇ ನನ್ನ ಕಚೇರಿಯ ನ್ನಾಗಿಸಿ ಕೊಂಡೆ. “ಜಗ್ಗರ್‌ನಾಟ್‌’ ಹೆಸರಿನೊಂದಿಗೆ ಆರಂಭ ವಾದ ನನ್ನ ಪ್ರಕಾಶನ ಸಂಸ್ಥೆಗೆ ಹೊಸ ರೀತಿಯ ಓದುಗ, ಹೊಸ ರೀತಿಯ ಪುಸ್ತಕ ಬೇಕಿತ್ತು. “ಈ ಹೊಸ ಓದುಗರಿಗೆ ಏನು ಬೇಕು. ತುರ್ತಿನಲ್ಲಿ ಓದುವಂತಹ, ಪ್ರಸ್ತುತತೆ, ಸಮಯೋಚಿತ, ನೇರ ನುಡಿಯ ಪುಸ್ತಕ ಬೇಕು’ ಎಂದು ಉತ್ತರ ಕಂಡುಕೊಂಡೆ. ಜನರು ನನ್ನ ಪುಸ್ತಕಗಳಿಗೆ ಹೊಂದಿಕೊಳ್ಳುವ ಬದಲು ನನ್ನ ಪುಸ್ತಕಗಳು ಅವರ ಜೀವನಶೈಲಿಗೆ ಹೊಂದಿಕೊಳ್ಳಬೇಕಿತ್ತು. 200- 300 ಪುಟಗಳ ಪುಸ್ತಕ ಬರೆದು ಓದಿಸುವುದು ಕಷ್ಟ ವೆಂದು ಗೊತ್ತಾಗಿತ್ತು. ಇವೆಲ್ಲ ಮುಂದಾಲೋಚನೆಗಳನ್ನು ತಲೆಯಲ್ಲಿಟ್ಟುಕೊಂಡೇ ನನ್ನ ಕಂಪೆನಿ ಹುಟ್ಟಿತು.

ಸ್ಮಾರ್ಟ್‌ಫೋನ್‌ಗಾಗಿಯೇ ವಿನ್ಯಾಸಗೊಳಿಸಲಾದ ಪುಸ್ತಕಗಳಲ್ಲಿ ಹವ್ಯಾಸಿ ಬರಹಗಾರರೆಲ್ಲರಿಗೂ ಬರೆಯು ವುದಕ್ಕೆ ಅವಕಾಶ ಸಿಕ್ಕಿತು. ಎಲ್ಲ ರೀತಿಯ ಡಿಜಿಟಲ್‌ ಪ್ಲಾರ್ಟ್‌ ಫಾರ್ಮ್ಗೂ ನಮ್ಮ ಈ ಸ್ಮಾರ್ಟ್‌ ಪುಸ್ತಕಗಳು ಎಂಟ್ರಿ ಕೊಟ್ಟವು.
ದಿನಪೂರ್ತಿ ಕೆಲಸ ಮಾಡಿ, ಸುಸ್ತಾಗಿ, ಕ್ಯಾಬ್‌ ಬುಕ್‌ ಮಾಡಿ ಹೊರಟಾಗ, ಟ್ರಾಫಿಕ್‌ನ ಸಮಸ್ಯೆ ನಿಮ್ಮನ್ನ ಕೈ ಬೀಸಿ ಕರೆದಿರುತ್ತದೆ. ಆ ವೇಳೆ ನೀವು ನಮ್ಮ ಆ್ಯಪ್ಲಿಕೇಶನ್‌ ತೆರೆದು, ನಿಮಗಿಷ್ಟವಾಗುವಂತಹ ಕಥೆಗಳನ್ನೇ ಅಲ್ಲಿ ಓದಬಹುದು. ದೇಶದ ಪ್ರಸಿದ್ಧ ರಾಜಕಾರಣಿಗಳ ಜೀವನ ಕಥೆ, ನೋವಿನ ಕಥೆ, ಸೆಲೆಬ್ರಿಟಿಗಳ ಯಾರಿಗೂ ಗೊತ್ತೇ ಇರದ ಕಥೆ ಹೀಗೆ ಎಲ್ಲವನ್ನೂ ಅವರ ಕೈಯಿಂದಲೇ ಬರೆಸುತ್ತಾ ಬಂದೆವು. ಅದಕ್ಕೆ ವ್ಯಾಪಕ ಪ್ರತಿಕ್ರಿಯೆಗಳೂ ಬರಲಾರಂಭಿಸಿದವು. ಪುಸ್ತಕದಂಗಡಿಯೇ ಇಲ್ಲದ ಯಾವುದೋ ಸಣ್ಣ ಹಳ್ಳಿಯ ವ್ಯಕ್ತಿಯೊಬ್ಬ, ದೂರದೂರುಗಳಿಂದ ಪುಸ್ತಕ ತಂದು ಓದುವಾಗಲೆಲ್ಲ ನಾನೂ ಈ ರೀತಿಯ ಪುಸ್ತಕ ಬರೆಯಬೇಕೆಂದು ಆತನ ಮನಸ್ಸು ಹೇಳುತ್ತಿತ್ತು. ಆದರೆ ಅಲ್ಲಿದ್ದ ಸೌಲಭ್ಯಕ್ಕೆ ಅದು ದೂರದ ಮಾತಾಗಿತ್ತು. ನಮ್ಮ ಆ್ಯಪ್ಲಿಕೇಶನ್‌ ಬಳಸಲಾರಂಭಿಸಿದ ಆತ, ಗಟ್ಟಿ ಧೈರ್ಯ ಮಾಡಿ, ನಮ್ಮಲ್ಲಿ ಕಥೆ ಪ್ರಕಟಿಸಿಯೇ ಬಿಟ್ಟ. ಇದೀಗ ಆತನ ಕಥೆಗಳು ಅತೀ ಹೆಚ್ಚು ಓದುಗರಿರುವ ಕಥೆಗಳಲ್ಲಿ ಒಂದಾಗಿದೆ. ಹಾಗೆಯೇ ಬ್ಯುಸಿ ಶೆಡ್ನೂಲ್‌ ಇರುವ ಅನೇಕರಿಗೆ ಕಾರಿನಲ್ಲಿ ಕುಳಿತು ಪ್ರಯಾಣ ಮಾಡುವಾಗ ನಮ್ಮ ಸ್ಮಾರ್ಟ್‌ ಪುಸ್ತಕ ಕೈ ಸೇರಿ, ಓದಿಸಿಕೊಳ್ಳುತ್ತದೆ.

ಇದನ್ನೂ ಓದಿ:ತಿಮ್ಮಪ್ಪನಿಗೆ ಸ್ವರ್ಣ ಹಸ್ತ ಕೊಡುಗೆ ನೀಡಿದ ಚಿನ್ನಾಭರಣ ಉದ್ಯಮಿ !

ವಿಶೇಷವೆಂದರೆ ನಮ್ಮ ಸ್ಮಾರ್ಟ್‌ ಪುಸ್ತಕ ಓದುಗರಲ್ಲಿ ಬಹುತೇಕರು 30 ವರ್ಷ ಒಳಗಿನ ಯುವಕರು. ಮನೆಯಲ್ಲೇ ಕುಳಿತಿರುವ ಗೃಹಿಣಿಯಿಂದ ಹಿಡಿದು ಸದಾ ಬ್ಯುಸಿ ಇರುವ ನಟನಟಿಯರ ವರೆಗೂ ಪ್ರತಿಯೊಬ್ಬರೂ ನಮ್ಮ ಆ್ಯಪ್ಲಿಕೇಶನ್‌ ಬಳಸಲಾ ರಂಭಿಸಿದರು, ಮೆಚ್ಚಿಕೊಳ್ಳಲಾರಂಭಿಸಿದರು, ತಾವೂ ಬರೆಯಲಾರಂಭಿಸಿದರು.
ನನ್ನ ಈ ಪ್ರಯಾಣ ತುಂಬಾ ಚಿಕ್ಕದ್ದು. ನನ್ನ ಕಂಪೆನಿ ಈಗಿನ್ನೂ ಯೌವನಾವಸ್ಥೆ ಯಲ್ಲಿದೆ. ಆದರೆ ಈಗಾಗಲೇ ನಾವು ಲಕ್ಷಾಂತರ ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಕೋಟ್ಯಂತರ ಓದುಗರನ್ನು ಸಂಪಾದಿಸಿಕೊಂಡಿದ್ದೇವೆ. ಸ್ಮಾರ್ಟ್‌ಫೋನ್‌ ಅವಲಂಬಿತ ಜನರನ್ನು ಸ್ಮಾರ್ಟ್‌ ಪುಸ್ತಕ ಪ್ರೇಮಿಗಳಾಗಿ ಬದಲಾಗಿಸಿದ್ದೇವೆ. ಈಗ ನಮ್ಮ ಪುಸ್ತಕ ಸುಲಭವಾಗಿ ಜನರನ್ನು ತಲುಪಲಾರಂಭಿಸಿದೆ. ಅದೂ ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ. ಸ್ಮಾರ್ಟ್‌ಫೋನ್‌ ಎನ್ನುವುದು ಇಷ್ಟವಾಗದೇ ಇದ್ದ ನನಗೆ ಈಗ ಅದೇ ಆರು ಇಂಚಿನ ಸ್ಮಾರ್ಟ್‌ಫೋನ್‌ನಲ್ಲಿ ನನ್ನ ದೊಡ್ಡದೊಂದು ಜಗತ್ತೇ ಕಾಣಲಾರಂಭಿಸಿದೆ.
(ಕೃ ಪೆ: ಟೆಡ್‌ ಟಾಕ್‌)

– ಚಿಕೀ ಸರ್ಕಾರ್‌, ಜಗ್ಗರ್‌ನಾಟ್‌ ಬುಕ್ಸ್‌ ಸಂಸ್ಥೆ ಸಹ ಸಂಸ್ಥಾಪಕಿ

Advertisement

Udayavani is now on Telegram. Click here to join our channel and stay updated with the latest news.

Next