ಉಡುಪಿ: ಸಣ್ಣ ಕೈಗಾರಿಕೆಗಳ ಪುನಶ್ಚೇತನ ದೃಷ್ಟಿಯಿಂದ ಒಂದು ವರ್ಷದ ಅವಧಿಗೆ ಸಾಲದ ಬಡ್ಡಿದರವನ್ನು ಶೇ. 6ಕ್ಕೆ ಇಳಿಸಬೇಕು. ಜತೆಗೆ ಪಿಎಫ್ ಕೊಡುಗೆಯನ್ನು ಇ.ಎಸ್.ಐ.ಗೂ ವಿಸ್ತರಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ (ಕಾಸಿಯಾ) ಅಧ್ಯಕ್ಷ ಕೆ.ಬಿ. ಅರಸಪ್ಪ ಸರಕಾರವನ್ನು ಆಗ್ರಹಿಸಿದ್ದಾರೆ.
ಶನಿವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಕಾರಣದಿಂದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಸಂಕಷ್ಟ ಎದುರಿಸುತ್ತಿದ್ದು, ಆರ್ಥಿಕ ಚೇತರಿಕೆಗಾಗಿ ರಾಜ್ಯದಲ್ಲಿ ಪ್ರತೀ ವರ್ಷ ಮೂಲಸೌಕರ್ಯಗಳನ್ನೊಳಗೊಂಡ ಕನಿಷ್ಠ 2 ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.
ಸರಕಾರ ಹಣಕಾಸಿನ ವರ್ಷದ ಅಂತ್ಯದವರೆಗೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ವೇತನ ಪಾವತಿಸಲು ಸೂಕ್ತ ಹಣಕಾಸಿನ ನೆರವು ನೀಡಬೇಕು. ಇಎಸ್‌ಐಗೆ ಪಿ.ಎಫ್. ಕೊಡುಗೆ ನೀಡುವುದರಿಂದ ಉದ್ಯಮಗಳ ಮೇಲಿನ ಹಣಕಾಸು ಹೊರಹೋಗುವಿಕೆ ಒತ್ತಡ ಸ್ವಲ್ಪಮಟ್ಟಿಗೆ ನಿವಾರಣೆಯಾಗುತ್ತದೆ. ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಎನ್‌ಪಿಎ ಮಾನದಂಡಗಳನ್ನು ಸಡಿಲ ಮಾಡಬೇಕು.
ಸಾಲ ಮರುಪಾವತಿ ಮೇಲಿನ ಮೊರಟೋರಿಯಂ ಅವಧಿಯನ್ನು ಹಣಕಾಸಿನ ವರ್ಷಾಂತ್ಯದವರೆಗೆ ವಿಸ್ತರಿಸಬೇಕು ಹಾಗೂ ಸಾಲ ಮರುಪಾವತಿ ಅವಧಿಯನ್ನು ಮತ್ತಷ್ಟು ಸಡಿಲಗೊಳಿಸಬೇಕು ಎಂದು ಆಗ್ರಹಿಸಿದರು.
ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾಧ್ಯಕ್ಷ ಐ.ಆರ್. ಫೆರ್ನಾಂಡಿಸ್, ಉಪಾಧ್ಯಕ್ಷ ಪ್ರಶಾಂತ್ ಬಾಳಿಗಾ, ಜಿಲ್ಲಾ ಕಾರ್ಯದರ್ಶಿ ವಲ್ಲಭ ಭಟ್, ಕಾಸಿಯಾ ಪ್ರ. ಕಾರ್ಯದರ್ಶಿ ಎನ್.ಆರ್. ಜಗದೀಶ್, ಜತೆ ಕಾರ್ಯದರ್ಶಿ ಜೈ ಕುಮಾರ್ ಉಪಸ್ಥಿತರಿದ್ದರು.
ಬೃಹತ್ ಉದ್ಯಮದ ಆವಶ್ಯಕತೆ
ಉಡುಪಿ ಜಿಲ್ಲೆಯಲ್ಲಿ ಬೃಹತ್ ಉದ್ಯಮದ ಆವಶ್ಯಕತೆ ಇದೆ. ಇದರಿಂದ ಕಾರ್ಮಿಕರಿಗೆ ಉದ್ಯೋಗ ಹಾಗೂ ಆದಾಯವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಇದು ವಾಹನಗಳು, ವಿದ್ಯುತ್ ಯಂತ್ರೋಪಕರಣಗಳು ಅಥವಾ ಎನ್‌ಎಂಪಿಟಿಗೆ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ರಫ್ತು ಆಧಾರಿತ ಪೆಟ್ರೋ ರಾಸಾಯನಿಕಗಳಂತಹ ಯಾವುದೇ ಸಂಬಂಧಿತ ಕ್ಷೇತ್ರಗಳ ಬೃಹತ್ ಯೋಜನೆಯನ್ನು ಸರಕಾರ ರೂಪಿಸಬೇಕು ಎಂದು ಕೆ.ಬಿ. ಅರಸಪ್ಪ ಮನವಿ ಮಾಡಿದರು.