Advertisement

Movies: ಬಂಡವಾಳ ಸ್ವಲ್ಪ ಲಾಭಾಂಶ ಜಾಸ್ತಿ..ಸಣ್ಣ ಬಜೆಟ್‌ನಲ್ಲಿ ದೊಡ್ಡ ಹಿಟ್ ಕೊಟ್ಟ ಚಿತ್ರಗಳು

06:14 PM Aug 03, 2024 | Team Udayavani |

ಸದಾ ಒಂದಲ್ಲ ಒಂದು ಹೊಸ ಬಗೆಯ ಪ್ರಯೋಗಗಳು ಸಿನಿಮಾರಂಗದಲ್ಲಿ ನಡೆಯುತ್ತಲೇ ಇರುತ್ತವೆ. ಈ ಪ್ರಯೋಗಗಳನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವುದು ಥಿಯೇಟರ್‌ ಗೆ ಬಂದ ಒಂದೆರೆಡು ವಾರದಲ್ಲೇ ಗೊತ್ತಾಗುತ್ತದೆ.

Advertisement

ಒಂದು ಸಿನಿಮಾ 100 ಕೋಟಿಗೂ ಹೆಚ್ಚು ಗಳಿಕೆ ಕಾಣಬೇಕಾದರೆ. ಇತ್ತೀಚೆಗಿನ ವರ್ಷದಲ್ಲಿ ಅದು ಪ್ಯಾನ್‌ ಇಂಡಿಯಾವೆಂಬ (Pan India) ದೊಡ್ಡ ವರ್ಗವನ್ನು ಸೆಳೆಯುವ ಚಿತ್ರವಾಗಿಯೇ ಬರಬೇಕು. ದೊಡ್ಡ ಬಜೆಟ್‌, ದೊಡ್ಡ ಸ್ಟಾರ್ಸ್ ಹಾಗೂ ಅದ್ಧೂರಿ ದೃಶ್ಯರೂಪವೂ ಈ ಸಿನಿಮಾದಲ್ಲಿದ್ದರೆ ಆ ಸಿನಿಮಾ ಒಂದು ಭಾಷೆಗೆ ಮಾತ್ರ ಸೀಮಿತವಾಗದೆ, ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ತೆರೆಗೆ ಬರುತ್ತವೆ.

ಉದಾಹರಣೆಗೆ ಕನ್ನಡದ ʼಕೆಜಿಎಫ್‌ʼ(KGF) ತಮಿಳಿನ ʼಲಿಯೋʼ(LEO), ಹಿಂದಿಯ ‘ಬ್ರಹ್ಮಾಸ್ತ್ರʼ (Brahmāstra: Part One – Shiva) , ತೆಲುಗಿನ ʼಪುಷ್ಪʼ(Pushpa: The Rise).. ಹೀಗೆ ಇತ್ತೀಚೆಗೆ ಬಂದಿರುವ ಈ ಸಿನಿಮಾಗಳು ತಮ್ಮ ಚಿತ್ರಕ್ಕೆ ಕೋಟಿ – ಕೋಟಿ ಹಣ ಸುರಿದು ಅದನ್ನು ಪ್ಯಾನ್‌ ಇಂಡಿಯಾದಲ್ಲಿ ರಿಲೀಸ್‌ ಮಾಡುವ ನಿರ್ಧಾರವನ್ನು ಮೊದಲೇ ತೆಗೆದುಕೊಂಡು ಎಲ್ಲಾ ಭಾಷಿಗರಿಂದ ಮೆಚ್ಚುಗೆ ಪಡೆದು ಲಾಭಾಂಶ ಗಳಿಸುತ್ತದೆ.

2024ರ ಮೊದಲಾರ್ಧದಲ್ಲಿ ಬಂದಿರುವ ಕೆಲ ಸಿನಿಮಾಗಳು ಪ್ಯಾನ್‌ ಇಂಡಿಯಾ ಹಾಗೂ ಹೆಚ್ಚು ಬಜೆಟ್‌ ಇಲ್ಲದೆಯೋ 100 ಕೋಟಿಗೂ ಅಧಿಕ ಗಳಿಕೆ ಕಾಣುವ ಮೂಲಕ ಕಂಟೆಂಟ್‌ ಚೆನ್ನಾಗಿದ್ದರೆ ಪ್ರೇಕ್ಷಕರು ಕೈ ಬಿಡುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ.

ದೊಡ್ಡ ಬಜೆಟ್‌, ಖ್ಯಾತ ಕಲಾವಿದರಿಲ್ಲದೆ ಗೆದ್ದ ʼಮುಂಜ್ಯಾʼ: ಬಾಲವುಡ್‌ ನಲ್ಲಿ(Bollywood) ಒಂದು ಸಮಯದಲ್ಲಿ  ಸಿನಿಮಾ ಹಿಟ್‌ ಆಗಬೇಕಾದರೆ ಅದರಲ್ಲಿ ಖ್ಯಾತ ಕಲಾವಿದರು ಅದೂ ಕೂಡ ಸಲ್ಮಾನ್‌, ಶಾರುಖ್‌, ಆಮೀರ್‌ ನಂತಹ ಕಲಾವಿದರಿದ್ದರೆ ಆ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಓಡುವುದು ಪಕ್ಕಾವೆನ್ನುವ ಕಾಲವಿತ್ತು. ಆದರೆ ಇತ್ತೀಚೆಗಿನ ವರ್ಷದಲ್ಲಿ ಬಿ ಟೌನ್‌ ಸಿನಿಮಾದ ಪ್ರೇಕ್ಷಕ ಕೂಡ ತನ್ನ ಹಣವನ್ನು ವ್ಯಯಿಸಿ ಒಂದು ಸಿನಿಮಾದ ಟಿಕೆಟ್‌ ಖರೀದಿಸುವಾಗ ʼಕಂಟೆಂಟ್‌ʼ ಬಗ್ಗೆ ಯೋಚನೆ ಮಾಡೇ ಮಾಡುತ್ತಾನೆ.

Advertisement

ಇದೇ ಕಾರಣದಿಂದ ಶಾರುಖ್‌, ಆಮೀರ್‌ ,ಸಲ್ಮಾನ್‌, ಅಕ್ಷಯ್‌ ಕುಮಾರ್ ಅವರ ಇತ್ತೀಚೆಗಿನ ಕೆಲ ಸಿನಿಮಾಗಳು ಸೋತು ಸುಣ್ಣವಾಗಿದ್ದವು.‌ ಆದರೆ ಕಡಿಮೆ ಬಜೆಟ್‌, ಖ್ಯಾತ ಕಲಾವಿದರೇ ಇಲ್ಲದೆ ಈ ವರ್ಷ ಬಂದ ಹಾರರ್-ಕಾಮಿಡಿ ʼಮುಂಜ್ಯಾʼ (Munjya) ಬಾಕ್ಸ್‌ ಆಫೀಸ್‌ ನಲ್ಲಿ 125 ಕೋಟಿ ರೂ.ಗಳಿಸಿದೆ. ಅಂದಾಜು 30 ಕೋಟಿ ರೂ. ಬಜೆಟ್‌ ನಲ್ಲಿ ಬಂದ ಈ ಸಿನಿಮಾದಲ್ಲಿನ ಕಥೆ ಹಾಗೂ ವಿಎಫ್‌ ಎಕ್ಸ್‌ ಕೆಲಸಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು.

ಸಿನಿಮಾದಲ್ಲಿನ ವಿಎಫ್‌ ಎಕ್ಸ್‌ ಕ್ಯಾರೆಕ್ಟರ್‌ ಫ್ಯಾಮಿಲಿ  ಆಡಿಯನ್ಸ್ ಗಳಿಗೆ ಹೆಚ್ಚು ಗಮನ ಸೆಳೆದಿತ್ತು.

ಮಾಲಿವುಡ್‌ ನಲ್ಲಿ ಮೋಡಿ ಮಾಡಿದ ʼಮಂಜಮ್ಮೆಲ್‌ ಬಾಯ್ಸ್‌ʼ:  ಮಾಲಿವುಡ್‌ (Mollywood) ಸಿನಿಮಾರಂಗ ಪ್ರಯೋಗಗಳನ್ನು ಮಾಡುವುದರಲ್ಲಿ ಒಂದು ಹೆಜ್ಜೆ ಮುಂದೆಯೇ ಇದೆ. ಒಂದು ಸಾಮಾನ್ಯ ಕಥೆಯನ್ನು ಕೂಡ ಎರಡು – ಎರಡೂವರೆ ಗಂಟೆ ಪ್ರೇಕ್ಷಕರು ಎಂಗೇಜ್‌ ಆಗಿ ಕೂತು ನೋಡುವಂತೆ ಮಾಲಿವುಡ್‌ ಸಿನಿಮಾಗಳು ಮಾಡುತ್ತವೆ.

ಈ ವರ್ಷ ಮಾಲಿವುಡ್‌ ನಲ್ಲಿ ಬಂದ ಚಿದಂಬರಂ ಎಸ್. ಪೊದುವಾಳ್ ನಿರ್ದೇಶನದ ʼಮಂಜಮ್ಮೆಲ್‌ ಬಾಯ್ಸ್‌ʼ (Manjummel Boys) ಇದಕ್ಕೆ ಮತ್ತೊಂದು ಉದಾಹರಣೆ. ಒಂದು ಫ್ರೆಂಡ್ಸ್‌ ಗ್ರೂಪ್‌ ಪ್ರವಾಸವೊಂದಕ್ಕೆ ಹೋಗುವಾಗ ನಡೆದ ದುರಂತದ ಕಥೆಯನ್ನು ಕಾಮಿಡಿ, ಗಂಭೀರ ಹಾಗೂ ಥ್ರಿಲ್‌ ನೀಡುವ ಹಾಗೆ ತೋರಿಸಲಾಗಿದೆ. ನೈಜ ಘಟನೆ ಆಧಾರಿತ ಈ ಕಥೆಯನ್ನು ದೊಡ್ಡ ಸ್ಕ್ರೀನ್‌ ನಲ್ಲಿ ನೈಜವಾದ ರೀತಿಯಲ್ಲೇ ತೋರಿಸಲಾಗಿದೆ.

20 ಕೋಟಿ ಬಜೆಟ್‌ ನಲ್ಲಿ ಬಂದ ʼಮಂಜಮ್ಮೆಲ್ ಬಾಯ್ಸ್‌ʼ ವರ್ಲ್ಡ್‌ ವೈಡ್‌ 241 ಕೋಟಿ ರೂ. ಗಳಿಸಿದೆ.

ಈ ಸಿನಿಮಾ ಮಾತ್ರವಲ್ಲದೆ ಮಾಲಿವುಡ್‌ ನಲ್ಲಿ ಬಂದ ʼಆವೇಶಮ್‌ʼ ಕೂಡ ಅಂದಾಜು 30 ಕೋಟಿ ಬಜೆಟ್‌ನಲ್ಲಿ 150 ಕೋಟಿಗೂ ಅಧಿಕ ಗಳಿಕೆಯನ್ನು ಕಂಡಿತು.

ಅರಮನೈ -4: ತಮನ್ನಾ(Tamannaah Bhatia), ರಾಶಿ ಖನ್ನಾ(Raashii Khanna)ರಂತಹ ಟಾಪ್‌ ನಟಿಯರನ್ನು ಒಳಗೊಂಡ ʼಅರಮನೈ-4ʼ (Aranmanai 4) ಟಾಲಿವುಡ್‌ ನಲ್ಲಿ ಈ ವರ್ಷ ಹಿಟ್‌ ಸಾಲಿಗೆ ಸೇರಿದ ಸಿನಿಮಾಗಳಲ್ಲೊಂದು. ಹಾರರ್‌ ಕಥೆಯ ಈ ಸಿನಿಮಾ ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸಿಕೊಂಡು ಸಾಗುತ್ತದೆ. 35 ಕೋಟಿ ರೂ. ಅಂದಾಜು ಬಜೆಟ್‌ ನಲ್ಲಿ ಬಂದ ಸಿನಿಮಾ 100 ಕೋಟಿ ಗಳಿಕೆ ಕಂಡಿತು.

ಅಜಯ್‌ ದೇವಗನ್‌ ಗೆ ಹಿಟ್‌ ಕೊಟ್ಟ ʼಸೈತಾನ್‌ʼ: ಅಜಯ್ ದೇವಗನ್‌ (Ajay Devgn), ಆರ್.ಮಾಧವನ್‌ (R. Madhavan), ಜ್ಯೋತಿಕಾ (Jyothika) ಮಲ್ಟಿಸ್ಟಾರ್ಸ್‌ ಒಳಗೊಂಡ ಸಸ್ಪೆನ್ಸ್‌, ಥ್ರಿಲ್ಲರ್‌ ʼಸೈತಾನ್‌ʼ (Shaitaan) ಬಾಕ್ಸ್‌ ಆಫೀಸ್‌ ನಲ್ಲಿ ಉತ್ತಮ ಗಳಿಕೆ ಕಂಡಿತು. 65 ಕೋಟಿ ವೆಚ್ಚದಲ್ಲಿ ಬಂದ ಈ ಸಿನಿಮಾ ವರ್ಲ್ಡ್‌ ವೈಡ್‌ 213.55 ಕೋಟಿ ರೂ. ಗಳಿಕೆ ಕಂಡಿತು.

ರಾಜಕೀಯವಾಗಿ ಸದ್ದು ಮಾಡಿದ ʼಅರ್ಟಿಕಲ್‌ 370ʼ : ರಾಜಕೀಯ ವಲಯದಲ್ಲಿ ಸದ್ದು ಮಾಡಿದ ಯಾಮಿ ಗೌತಮ್‌ (Yami Gautam) ಅವರ ʼಅರ್ಟಿಕಲ್‌ 370ʼ(Article 370) , ಅದೇ ಪ್ರಚಾರದಿಂದ ಥಿಯೇಟರ್‌ನಲ್ಲಿ ಒಂದಷ್ಟು ದಿನ ತನ್ನ ಓಟವನ್ನು ಮುಂದುವರೆಸಿತು. ಹಾಕಿದ್ದ ಬಂಡವಾಳಕ್ಕೆ ಸೂಕ್ತ ಲಾಭ ತಂದುಕೊಡಲು ಇದು ಸಾಕಾಗಿತ್ತು. 20 ಕೋಟಿ ವೆಚ್ಚದಲ್ಲಿ ಬಂದು, ವರ್ಲ್ಡ್‌ ವೈಡ್‌ 105 ಕೋಟಿ ರೂ. ಗಳಿಸಿತು.

ಮಾಸ್‌ ಹಿಟ್‌ ಆದ ʼಮಹಾರಾಜʼ: ವಿಜಯ್‌ ಸೇತುಪತಿಯವರ (Vijay Sethupathi)  50ನೇ ಚಿತ್ರ ಮಹಾರಾಜ (Maharaja) ಕಾಲಿವುಡ್‌ ನಲ್ಲಿ ಬ್ಲಾಕ್‌ ಬಸ್ಟರ್‌ ಹಿಟ್‌ ಸಾಲಿಗೆ ಸೇರಿದ ಸಿನಿಮಾ. ಒಂದು ಕಸದ ಬುಟ್ಟಿ ಕಳೆದು ಹೋಗಿದೆ ಎನ್ನುವ ಅಂಶವನ್ನಿಟ್ಟುಕೊಂಡೇ ಸಾಗುವ ಕಥೆಯನ್ನು ಥ್ರಿಲ್‌ ಹಾಗೂ ಸಸ್ಪೆನ್ಸ್‌ ಆಗಿ ಸಿನಿಮಾದಲ್ಲಿ ಹೇಳಲಾಗಿದೆ. ಅಂದಾಜು 20 ಕೋಟಿ ರೂ.ವೆಚ್ಚದಲ್ಲಿ ಬಂದ ಈ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಅಂದಾಜು 107 ಕೋಟಿ ರೂ. ಗಳಿಸಿದೆ.

2024ರಲ್ಲಿ ತೆರೆಕಂಡ ʼಕಲ್ಕಿʼ ಸಿನಿಮಾ ಹೊರತುಪಡಿಸಿದರೆ ಉಳಿದ ಬಹುತೇಕ ಸಿನಿಮಾಗಳು ಕಡಿಮೆ ಬಜೆಟ್‌ ಬಂದು ದೊಡ್ಡ ಗಳಿಕೆಯನ್ನು ಕಂಡಿರುವುದು ವಿಶೇಷ. ಸಿನಿಮಾಕ್ಕೆ ಬಜೆಟ್‌ ಹಾಗೂ ದೊಡ್ಡ ಸ್ಟಾರ್ಸ್‌ ಗಳು ಮುಖ್ಯವಲ್ಲ. ಕಥೆ ಚೆನ್ನಾಗಿದ್ದರೆ ಪ್ರೇಕ್ಷಕರು ಅದಕ್ಕೆ ಜೈಹಾರ ಹಾಕಿ ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಈ ಸಿನಿಮಾಗಳು ಸಾಕ್ಷಿ ಎಂದರೆ ತಪ್ಪಾಗದು.

Advertisement

Udayavani is now on Telegram. Click here to join our channel and stay updated with the latest news.

Next