ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಪೊವಾಯಿ ಎಸ್. ಎಂ. ಶೆಟ್ಟಿ ವಿಜ್ಞಾನ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜುಗಳ ಹತ್ತನೇ ವಾರ್ಷಿಕೋತ್ಸವವು ಡಿ. 22ರಂದು ಕಾಲೇಜಿನ ಶಶಿ ಮನ್‌ಮೋಹನ್ ಶೆಟ್ಟಿ ಮುಕ್ತ ಸಭಾಂಗಣದಲ್ಲಿ ಅತ್ಯಂತ ಅದ್ದೂರಿಯಾಗಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಾಯನ್ಸ್ ಇದರ ನಿರ್ದೇಶಕ ಪ್ರೊ| ಪರಶುರಾಮ್ ಅವರು ಆಗಮಿಸಿದ್ದರು. ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಅವರು ನೇತೃತ್ವ ವಹಿಸಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು, ಸಂಘದ ಎಸ್. ಎಂ. ಶೆಟ್ಟಿ ಪದವಿ ಕಾಲೇಜು ಈ ಬಾರಿ ಎರಡು ಪ್ರಶಸ್ತಿಗಳನ್ನು ಪಡೆದಿರುವುದನ್ನು ಉಲ್ಲೇಖೀಸಿ ಪೊವಾಯಿ ಶಿಕ್ಷಣ ಸಮಿತಿ ಮತ್ತು ಪದವಿ ಕಾಲೇಜು ಪ್ರಾಂಶುಪಾಲ ಡಾ| ಶ್ರೀಧರ್ ಶೆಟ್ಟಿ ಹಾಗೂ ಶಿಕ್ಷಕರನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ತಮ್ಮ ಅಪಾರ ಪರಿಶ್ರಮದ ಮೂಲಕ ಯಶಸ್ಸು ಪಡೆದು ಬದುಕಿನಲ್ಲಿ ಉನ್ನತ ವ್ಯಕ್ತಿಗಳಾಗುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರೊ| ಪರಶುರಾಮ್ ಮಾತನಾಡಿ, ಅತ್ಯಂತ ಕಡಿಮೆ ಸಮಯದಲ್ಲಿ ಬಹುದೊಡ್ಡ ಸಾಧನೆ ಮಾಡಿ ತೋರಿಸಿದ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಮಿತಿಯನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತೆಯ ಅಭಿವೃದ್ಧಿ ಪರಿಪಕ್ವತೆಯ ಕೇಂದ್ರವೊಂದನ್ನು ಟಿಐಎಸ್‌ಎಸ್ ಮೂಲಕ ಸ್ಥಾಪಿಸಲು ತಾನು ಸಹಕರಿಸುವುದಾಗಿ ಭರವಸೆ ನೀಡಿದರು.
ಕಾಲೇಜು ಪ್ರಾಂಶುಪಾಲ ಡಾ| ಶ್ರೀಧರ್ ಶೆಟ್ಟಿ ವಾರ್ಷಿಕ ವರದಿ ಸಲ್ಲಿಸಿದ ಬಳಿಕ ಶೈಕ್ಷಣಿಕ ವರ್ಷದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳ ಹೆಸರನ್ನು ಯಾಚಿಸಿದರು. ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಅವರು ಕಾಲೇಜಿನ ವಾರ್ಷಿಕ ವಿಶೇಷ ಪುರವಣಿಗಳಾದ ರಿಸೊನೆಂಟ್ ಮತ್ತು ಮಾಸ್ ಮೀಡಿಯಾ ವಿಭಾಗದ ಸ್ಮವಾರ್ತೆ, ವಾಣಿಜ್ಯ ವಿಭಾಗದ ವಾಣಿಜ್ಯ ಹಾಗೂ ಅಕೌಂಟೆನ್ಸಿ ಆ್ಯಂಡ್ ಫೈನಾನ್ಸ್ ವಿಭಾಗದ ಅರ್ಥ್ಲೇಖಾವನ್ನು ಬಿಡುಗಡೆಗೊಳಿಸಿದರು.
ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪೊವಾಯಿ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಬಿ. ಆರ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ಕಾರ್ಯದರ್ಶಿ ಹರೀಶ್ ವಾಸು ಶೆಟ್ಟಿ, ಕೋಶಾಧಿಕಾರಿ ಸಿಎ ಹರೀಶ್ ಶೆಟ್ಟಿ, ಬಂಟರ ಸಂಘ ಹಾಗೂ ಪೊವಾಯಿ ಶಿಕ್ಷಣ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.