ಹಿರಿಯ ರಾಜಕಾರಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಮಾಜಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿ, ಬ್ರ್ಯಾಂಡ್ ಬೆಂಗಳೂರು ಖ್ಯಾತಿ ತಂದು ಕೊಟ್ಟಿದ್ದ ಎಸ್.ಎಂ. ಕೃಷ್ಣ (92ವರ್ಷ) ಮಂಗಳವಾರ ನಸುಕಿನ ವೇಳೆ ನಿಧನ ಹೊಂದಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ (2009-2012) ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿ, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿದ್ದ ಎಸ್ .ಎಂ.ಕೃಷ್ಣ ಅವರ ರಾಜಕೀಯ ಜೀವನ ಚಿತ್ರಣ ಬದಲಾಗಲು ಕಾರಣವೇನು ಎಂಬುದರ ಕಿರು ವಿಶ್ಲೇಷಣೆ ಇಲ್ಲಿದೆ…
ನಿಷ್ಠಾವಂತ ಕಾಂಗ್ರೆಸ್ಸಿಗ…ಬಿಜೆಪಿಗೆ ಸೇರ್ಪಡೆಯಾಗಿದ್ದೇಗೆ?
ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಅವರು ಬರೋಬ್ಬರಿ 46 ವರ್ಷ ಕಾಲ ಕಾಂಗ್ರೆಸ್ ಪಕ್ಷದ ಸಖ್ಯ ಹೊಂದಿದ್ದರು. ಆದರೆ 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿತ್ತು. ಈ ಸಂದರ್ಭದಲ್ಲಿ ಜೆಡಿಎಸ್ ಕಾಂಗ್ರೆಸ್ ಜತೆ ಕೈಜೋಡಿಸಿ ಸರ್ಕಾರ ರಚಿಸಲು ಮುಂದಾಗಿತ್ತು. ವಿಪರ್ಯಾಸ ಎಂಬಂತೆ ಒಕ್ಕಲಿಗ ನಾಯಕರಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ಮತ್ತೆ ಸಿಎಂ ಆಗಿ ಮುಂದುವರಿಸಲು ಜೆಡಿಎಸ್ ನ ಸಹಮತ ಇರಲಿಲ್ಲವಾಗಿತ್ತು. ಇದರ ಪರಿಣಾಮ 2004ರ ಮೇ 28ರಂದು ಧರಂ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು!
ಒಕ್ಕಲಿಗ ಮುಖಂಡರಾಗಿ, ಮುಖ್ಯಮಂತ್ರಿಯಾಗಿ ಜನಪ್ರಿಯತೆ ಪಡೆದು ಪ್ರಭಾವಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಬಗ್ಗೆ ಅಸಮಾಧಾನಗೊಂಡಿದ್ದರು. ಹೀಗಾಗಿ ಕೈ ಹೈಕಮಾಂಡ್ ಎಸ್ ಎಂಕೆ ಅವರ ಮುನಿಸನ್ನು ತಣಿಸಲು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನಿಯೋಜಿಸಿಬಿಟ್ಟಿತ್ತು. ಕೊನೆಗೂ ಎಸ್.ಎಂ.ಕೆ ಒಲ್ಲದ ಮನಸ್ಸಿನಿಂದ ಗವರ್ನರ್ ಹುದ್ದೆ ಅಲಂಕರಿಸಿದ್ದರು…
ಕೈತಪ್ಪಿ ಹೋದ ರಾಜ್ಯರಾಜಕಾರಣ…
ಮಹಾರಾಷ್ಟ್ರ ರಾಜ್ಯಪಾಲರಾಗಬೇಕೆಂಬ ಕಾಂಗ್ರೆಸ್ ಹೈಕಮಾಂಡ್ ನ ಆದೇಶವನ್ನು ಒಪ್ಪಿಕೊಳ್ಳುವ ಮೂಲಕ ಎಸ್.ಎಂ. ಕೃಷ್ಣ ಅವರು ಬಹುದೊಡ್ಡ ಅವಕಾಶದ ಬಾಗಿಲುಗಳನ್ನು ಮುಚ್ಚಿಕೊಂಡಂತಾಗಿತ್ತು. ಯಾಕೆಂದರೆ ನಾಲ್ಕು ವರ್ಷಗಳ ಕಾಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಎಸ್.ಎಂ. ಕೃಷ್ಣ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿಬಿಟ್ಟಿದ್ದರು. ಅಷ್ಟೇ ಅಲ್ಲ ತಾನು ಮತ್ತೆ ಕರ್ನಾಟಕದ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅಷ್ಟರಲ್ಲಾಗಲೇ ರಾಜಕೀಯ ಬೆಳವಣಿಗೆಯಲ್ಲಿ ಕಾಲ ಮಿಂಚಿ ಹೋಗಿತ್ತು! ಅದಕ್ಕೆ ಕಾರಣ ಸಿದ್ದರಾಮಯ್ಯ!..ಹೌದು ಎಚ್. ಡಿ.ದೇವೇಗೌಡರ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಬೃಹತ್ ಅಹಿಂದ ಸಮಾವೇಶ ನಡೆಸುವ ಮೂಲಕ ಬಲಪ್ರದರ್ಶನ ತೋರ್ಪಡಿಸಿದ್ದರು. ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ 2005ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಹೀಗೆ ಮುಂದುವರಿದ ರಾಜಕೀಯ ಪ್ರಹಸನದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಸ್.ಎಂ.ಕೆ ಅವರನ್ನು ರಾಜ್ಯ ರಾಜಕಾರಣದೊಳಕ್ಕೆ ಬಿಟ್ಟುಕೊಳ್ಳದೇ ರಾಷ್ಟ್ರರಾಜಕಾರಣಕ್ಕೆ ಎಂಟ್ರಿ ಕೊಡಿಸಿತ್ತು. ಅಲ್ಲಿ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವ ಹುದ್ದೆಯನ್ನು ನೀಡಿ “ಕೈ” ತೊಳೆದುಕೊಂಡು ಬಿಟ್ಟಿತ್ತು!…ಇದರ ಪರಿಣಾಮ ಜನಪ್ರಿಯ ನಾಯಕ ಎಸ್ ಎಂಕೆಗೆ ರಾಜ್ಯರಾಜಕಾರಣದಿಂದ ವಿಮುಖರಾಗುವಂತೆ ಮಾಡಿಮಾಡಿಬಿಟ್ಟಿತ್ತು…!
ಈ ಎಲ್ಲಾ ಬೆಳವಣಿಗೆಯಿಂದ ಕಾಂಗ್ರೆಸ್ ಹೈಕಮಾಂಡ್ ನ ನಡೆಗೆ ಬೇಸತ್ತು ದೀರ್ಘಕಾಲದ ಕಾಂಗ್ರೆಸ್ ಪಕ್ಷದ ಒಡನಾಟ ತೊರೆದು 2017ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈ ನಿರ್ಧಾರ ರಾಜಕೀಯ ವಲಯದಲ್ಲಿ ಹಲವರನ್ನು ಅಚ್ಚರಿಗೆ ತಳ್ಳಿದ್ದು ಸುಳ್ಳಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸ್ ಇದೊಂದು ಗೊಂದಲದ ಮನಸ್ಥಿತಿಯ ದುಡುಕು ನಿರ್ಧಾರ ಎಂದು ಎಸ್ ಎಂಕೆ ವಿರುದ್ಧ ಟೀಕಾಪ್ರಹಾರ ನಡೆಸಿತ್ತು!
Brand Bengaluru ಖ್ಯಾತಿಯ ಎಸ್ ಎಂಕೆ:
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್ಎಂ ಕೃಷ್ಣ ಅವರು ತಮ್ಮ ಅಮೋಘವಾದ ಅಭಿವೃದ್ಧಿ ಕಾರ್ಯಗಳ ಮೂಲಕ ಖ್ಯಾತಿಪಡೆದಿದ್ದರಲ್ಲದೇ…ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಬೆಂಗಳೂರು ಎಂದು ಗುರುತಿಸುವಂತೆ ಮಾಡುವ ರೂವಾರಿಯಾಗುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು.
ಸಿಎಂ ಎಸ್ ಎಂ ಕೃಷ್ಣ ಅವರ ಕಾಲಾವಧಿಯಲ್ಲಿ ಐಟಿ ಕಂಪನಿಗಳಿಗೆ ಅಮೆರಿಕದ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ ಖ್ಯಾತಿಗಳಿಸಿತ್ತು..ಅದಕ್ಕೆ ಪರ್ಯಾಯವಾಗಿ ಎಸ್ ಎಂ ಕೃಷ್ಣ ಅವರು ಐಟಿ ಸೆಕ್ಟರ್ ಅನ್ನು ಬೆಂಗಳೂರಿಗೆ ರೆಡ್ ಕಾರ್ಪೆಟ್ ಮೂಲಕ ಬರಮಾಡಿಕೊಳ್ಳುವುದರೊಂದಿಗೆ ಸಾವಿರಾರು ಯುವಕರಿಗೆ ಉದ್ಯೋಗ ಸೃಷ್ಟಿಸಿದ್ದರು. 1999ರಿಂದ 2004ರ ಮೇ ವರೆಗೆ ಮುಖ್ಯಮಂತ್ರಿಯಾಗಿದ್ದ ಎಸ್. ಎಂ.ಕೃಷ್ಣ ಅವರು ಬೆಂಗಳೂರನ್ನು ಐಟಿ ಹಬ್ ಆಗಿ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು ಅವರ ಹೆಗ್ಗಳಿಕೆಗೆ ಸಂದ ಕಾರ್ಯವಾಗಿದೆ. ರಾಜ್ಯ, ರಾಷ್ಟ್ರರಾಜಕಾರಣದಲ್ಲಿ ಹಲವಾರು ಉನ್ನತ ಹುದ್ದೆ ಅಲಂಕರಿಸಿದ್ದ ಎಸ್.ಎಂ.ಕೆ ಅವರು 2023ರ ಜನವರಿಯಲ್ಲಿ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದರು.