Advertisement
ಗೋಪಾಲನ್, ರಾಜ್ ಆರೋಗ್ಯ ಚೆನ್ನಾಗಿರುವ ಮಾಹಿತಿ ತಂದೊಪ್ಪಿಸಿದ್ದರು. ವೀರಪ್ಪನ್ ಕಳುಹಿಸಿದ್ದ ಕ್ಯಾಸೆಟ್‌ನಲ್ಲಿ ಬೇಡಿಕೆಗಳ ಪಟ್ಟಿಯೇ ಇತ್ತು. ಅರಣ್ಯಾಧಿಕಾರಿ ಶ್ರೀನಿವಾಸನ್ ಹತ್ಯೆಯಲ್ಲಿ ಬೆಂಗಳೂರಿನ ಜೈಲಿನಲ್ಲಿದ್ದ ಸಹಚರರ ಬಿಡುಗಡೆ, 50 ಕೋಟಿ ರೂ. ಹಣ ಸೇರಿದಂತೆ ಹಲವು ಬೇಡಿಕೆ ಇಟ್ಟಿದ್ದ. ಅಷ್ಟರಲ್ಲಿ ವೀರಪ್ಪನ್ ಸೆರೆಯಿಂದ ನಾಗಪ್ಪ ಮಾರಡಗಿ ತಪ್ಪಿಸಿಕೊಂಡು ಬಂದು, ಒಂದಿಷ್ಟು ಮಾಹಿತಿ ಕೊಟ್ಟಿದ್ದರು. ಈ ನಡುವೆ ತಮಿಳುನಾಡಿನ ಹಲವು ಪ್ರಭಾವಿಗಳ ಸಲಹೆ ಕೇಳಿದರೂ ನಿರೀಕ್ಷಿತ ಸಹಕಾರ ಸಿಕ್ಕಿರಲಿಲ್ಲ. ಕೊಳತ್ತೂರು, ಮಣಿ, ನೆಡುಮಾರನ್ ಹೀಗೆ ಅನೇಕರ ಸಹಕಾರ ಕೋರಲಾಗಿತ್ತು. ಡಾ| ಶುಭಾ ಮೂಲಕ ಕಾರ್ಯಾಚರಣೆ ನಡೆಸಿ, ರಾಜ್‌ಬಿಡುಗಡೆಗೆ ವೀರಪ್ಪನ್‌ನನ್ನು ಒಪ್ಪಿಸಿದ್ದರು. ಆದರೆ ಆ 108 ದಿನಗಳು ನಿದ್ದೆಯಿಲ್ಲದೆ ದುಸ್ವಪ್ನವಾಗಿ ಕಾಡಿತ್ತು.
ರಾಜಕುಮಾರ್ ಅವರ ಅಪಹರಣವಾಗಿ ಎರಡು ವರ್ಷದ ಅನಂತರ ಚಾಮರಾಜ ನಗರ ಜಿಲ್ಲೆಯ ಹನೂರು, ಕೊಳ್ಳೆಗಾಲ ಭಾಗದಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದ ಮಾಜಿ ಸಚಿವ ಎಚ್.ನಾಗಪ್ಪ ಅವರನ್ನೂ ವೀರಪ್ಪನ್ ಸಹಚರರು ಅಪಹರಿಸಿದ್ದರು. ಪತ್ನಿ ಪರಿಮಳಾರನ್ನು ಬೆದರಿಸಿ, ನಾಗಪ್ಪ ಅವರ ಮನೆಯ ದೂರವಾಣಿ, ವಿದ್ಯುತ್ ಸಂಪರ್ಕದ ತಂತಿಗಳನ್ನು ಕತ್ತರಿಸಿ, ಭದ್ರತೆ ಸಿಬ್ಬಂದಿಯನ್ನು ಹೊಡೆದು ಹೊತ್ತೂಯ್ದಿದ್ದರು. ಒತ್ತೆಯಾಳಾಗಿ ಇಟ್ಟುಕೊಂಡು ಬೇಡಿಕೆಗಳನ್ನು ಇಟ್ಟಿದ್ದರು. ಸರಕಾರ ಈ ವಿಚಾರದಲ್ಲಿ ಪ್ರತಿಕ್ರಿಯಿಸುವ ಮುನ್ನವೇ ನಾಗಪ್ಪರ ಕೊಲೆಯೂ ನಡೆದು ಹೋಗಿತ್ತು.