Advertisement

ಬೆಳೆವಿಮೆ ಪಾವತಿ ಆಮೆಗತಿ

11:13 AM Jun 26, 2019 | Suhan S |

ಕೊಪ್ಪಳ: ಜಿಲ್ಲೆಯ ರೈತರು ಬರದ ಪರಿಸ್ಥಿತಿಯಲ್ಲಿ ಬೆಳೆ ಹಾನಿಯಾದರೆ ನಮಗೆ ಬೆಳೆ ವಿಮೆ ಮೊತ್ತವಾದರೂ ಕೈ ಹಿಡಿಯಲಿದೆ ಎಂದು ವಿವಿಧೆಡೆ ಹಗಲು-ರಾತ್ರಿ ಎನ್ನದೆ ನಿದ್ದೆಗೆಟ್ಟು ವಿಮೆ ಮೊತ್ತ ಪಾವತಿ ಮಾಡಿದ್ದರೆ ಕಂಪನಿಗಳ ಚೆಲ್ಲಾಟ, ಅಧಿಕಾರಿಗಳ ನಿಧಾನಗತಿಗೆ ಸಕಾಲಕ್ಕೆ ರೈತನ ಖಾತೆಗೆ ವಿಮೆ ಮೊತ್ತ ಪಾವತಿಯಾಗುತ್ತಿಲ್ಲ.

Advertisement

ಹೌದು. ವಿಮಾ ಕಂಪನಿಗಳು ಆಡಿದ್ದೇ ಆಟ.. ಕೊಟ್ಟಿದ್ದೇ ಲೆಕ್ಕ ಎನ್ನುವಂತಾಗಿವೆ. ಸರ್ಕಾರದ ಮಟ್ಟದಲ್ಲಿಯೂ ಇದಕ್ಕೆ ಸರಿಯಾದ ಮೂಗುದಾರ ಹಾಕುವವರೇ ಇಲ್ಲದಂತಾಗಿವೆ. ಇತ್ತ ರೈತ ಪ್ರತಿ ವರ್ಷ ವಿಮೆ ಕಟ್ಟುತ್ತಲೇ ವಿಮೆ ಬರಲಿದೆ ಎಂದು ಜಾತಕ ಪಕ್ಷಿಯಂತೆ ಕಾದು ಕಾದು ಸುತ್ತು ಹೊಡೆಯುತ್ತಿದ್ದಾನೆ. ಕೃಷಿ ಇಲಾಖೆ-ಬ್ಯಾಂಕ್‌-ವಿಮಾ ಕಂಪನಿಗಳ ಮಧ್ಯದ ನಿಧಾನಗತಿ ಕಾರ್ಯ ವೈಖರಿಗೆ ಹಲವೆಡೆ ರೈತ ಸಮೂಹ ಆಕ್ರೋಶ ವ್ಯಕ್ತಪಡಿಸುತ್ತಲೇ ಇದೆ.

ಇದಕ್ಕೆ ತಾಜಾ ಸಾಕ್ಷಿ ಎಂಬಂತೆ, ಕಳೆದ 2018-19ನಲ್ಲಿ ರೈತರು ಜಿಲ್ಲೆಯಾದ್ಯಂತ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ 61,885 ರೈತರು 8.40 ಕೋಟಿ ರೂ. ನಷ್ಟು ಬ್ಯಾಂಕ್‌ ಸೇರಿದಂತೆ ವಿವಿಧ ಸಿಎಸ್‌ಸಿ ಕೇಂದ್ರಗಳಲ್ಲಿ ವಿಮೆ ಪಾವತಿ ಮಾಡಿದ್ದಾರೆ. ಆಗ ಬರದ ಪರಿಸ್ಥಿತಿ ಆವರಿಸಿ ರೈತರ ಸಂಪೂರ್ಣ ಬೆಳೆ ಹಾನಿಯಾಗಿದೆ. ಇದರಿಂದ ನಷ್ಟದಲ್ಲೇ ನರಳಾಡಿದ ಅನ್ನದಾತ ವಿಮಾ ಮೊತ್ತಕ್ಕಾಗಿ ಕಾಯುತ್ತಿದ್ದಾನೆ. ಆದರೆ ರೈತ ತುಂಬಿದ ವಿಮಾದ ಪ್ರಕ್ರಿಯೆ ಇನ್ನೂ ಕೃಷಿ ಇಲಾಖೆಯಿಂದ ಈಗಷ್ಟೆ ವಿಮಾ ಕಂಪನಿಗೆ ವರ್ಗವಾಗಿದೆ.

ಇಲ್ಲಿ ರಾಜ್ಯ ಕೃಷಿ ಇಲಾಖೆ, ವಿಮಾ ಕಂಪನಿ ನಡುವೆ ಸಭೆ ನಡೆಯಬೇಕಿದೆ. ಇಲಾಖೆಯಿಂದ ರೈತರ ಎಲ್ಲ ಮಾಹಿತಿಯನ್ನೂ ವಿಮಾ ಕಂಪನಿ ಪಡೆಯಬೇಕಿದೆ. ಆಗ ಬೆಳೆ ಹಾನಿ ಈ ಹಿಂದಿನ ವರ್ಷಗಳಲ್ಲಿ ಬೆಳೆಯ ಇಳುವರಿ ಪ್ರಮಾಣ ಸೇರಿದಂತೆ ಹಾನಿ ನಷ್ಟದ ಲೆಕ್ಕಾಚಾರ ಹಾಕಿದ ಬಳಿಕ ಹೋಬಳಿ, ಗ್ರಾಪಂವಾರು ರೈತರಿಗೆ ಕಂಪನಿ ನೇರವಾಗಿ ರೈತನ ಖಾತೆಗೆ ವಿಮೆ ಪರಿಹಾರ ಮೊತ್ತ ಪಾವತಿಯಾಗಲಿದೆ. ಅದು ಕೆಲವೊಂದು ರೈತರಿಗೆ ಬರುತ್ತೆ, ಇನ್ನು ಕೆಲವೊಂದು ರೈತರಿಗೆ ಮೊತ್ತ ಬರಲ್ಲ. ಹೀಗಾಗಿ ವಿಮೆ ಬಗ್ಗೆ ರೈತ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದಾನೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ, ಕಳೆದ ವರ್ಷದ ಮುಂಗಾರಿನಲ್ಲಿ ರೈತರು ತುಂಬಿದ ವಿಮೆ ಮಾಹಿತಿಯನ್ನು ಈಗಷ್ಟೆ ವಿಮಾ ಕಂಪನಿಗೆ ಮಾಹಿತಿಯನ್ನು ವರ್ಗಾವಣೆ ಮಾಡಿದೆಯಂತೆ. ಆಗ ಕಂಪನಿ ಇದೆಲ್ಲವನ್ನೂ 2-3 ಬಾರಿ ಅವಲೋಕನ ಮಾಡಿ ಬೆಳೆ ಇಳುವರಿ ಮಾದರಿ ವರದಿ ಆಧರಿಸಿ, ಹಾನಿ, ಕೆಲವೊಂದು ಮಾನದಂಡಗಳ ಪ್ರಕಾರ ಅಳೆದು ತೂಗಿ ರೈತರಿಗೆ ಪರಿಹಾರ ಮೊತ್ತವನ್ನು ಕೊಡಲಿದೆ. ಏನಾದರೂ ವರದಿಯಲ್ಲಿ ವ್ಯತ್ಯಾಸವಾಗಿದ್ದರೆ ಮತ್ತೆ ರಾಜ್ಯ ಮಟ್ಟದಲ್ಲಿ ವಿಮೆ ಕಂಪನಿ, ಕೃಷಿ ಇಲಾಖೆ ನಡುವೆ ಸಭೆ ನಡೆಸಬೇಕಿದೆ.

Advertisement

ವಿಮೆ ಕಂಪನಿಗಳಿಗಿಲ್ಲ ಮೂಗುದಾರ: ವಿಮಾ ಕಂಪನಿಗಳು ಆಡಿದ್ದೇ ಆಟ, ಕೊಟ್ಟಿದ್ದೇ ಲೆಕ್ಕ ಎನ್ನುವಂತಾಗಿವೆ. ರೈತರಿಗೆ ಬರದಲ್ಲಿ ಸಂಕಟ. ವಿಮಾ ಕಂಪನಿಗಳಿಗೆ ಚೆಲ್ಲಾಟ ಎನ್ನುವ ಮಾತು ಗ್ರಾಮೀಣ ಪ್ರದೇಶದಲ್ಲಿ ಸರ್ವೆ ಸಾಮಾನ್ಯವಾಗಿದೆ. ವಿಮೆ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಿ ಅಧಿಕಾರಿಗಳು ಬೇಕು. ಆದರೆ ವಿಮೆ ಮೊತ್ತ ಪಾವತಿ ವಿಳಂಬವಾದರೆ ವಿಮೆ ಅಧಿಕಾರಿಗಳ ಬಳಿ ಮಾಹಿತಿಯೇ ಇರುವುದಿಲ್ಲ.

ಬೆಳೆ ಹಾನಿಯಾದ ಇಂತಿಷ್ಟು ದಿನಕ್ಕೆ ವಿಮೆ ಪರಿಹಾರ ಕೊಡುವುದು ದೂರದ ಮಾತು. ಜಿಲ್ಲಾ ಮಟ್ಟದಲ್ಲಿ ರೈತರು ನಿತ್ಯ ಕೃಷಿ ಇಲಾಖೆಗೆ ಸುತ್ತಾಡಿ ಬೆಳೆವಿಮೆ ಬಂತಾ ಎಂದು ಅಧಿಕಾರಿಗಳನ್ನ ಕೇಳಬೇಕಿದೆ. ಆದರೆ ಅಧಿಕಾರಿಗಳಿಗೆ ಏನೂ ಮಾಹಿತಿಯೇ ಇರಲ್ಲ. ಇನ್ನೂ ವಿಮಾ ಕಂಪನಿ ಬಗ್ಗೆ ವಿಚಾರಿಸಬೇಕೆಂದರೆ ಒಬ್ಬ ವಿಮಾ ಪ್ರತಿನಿಧಿಯೂ ಜಿಲ್ಲೆಯಲ್ಲಿರಲ್ಲ. ಜಿಲ್ಲಾ ಕೇಂದ್ರದಲ್ಲೂ ಅವರ ಕಚೇರಿ ಇರಲ್ಲ. ಇಲ್ಲಿ ಅಧಿಕಾರಿಗಳನ್ನು ಸಿಲುಕಿಸಿ, ವಿಮಾ ಕಂಪನಿಗಳು ಬಚಾವ್‌ ಆಗುತ್ತಿವೆ ಎನ್ನುವ ಆಪಾದನೆ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಕಡಿವಾಣ ಹಾಕಲೇ ಬೇಕಿದೆ ಎನ್ನುವ ಮಾತು ಕೇಳಿ ಬಂದಿವೆ.

ಜಿಲ್ಲೆಯಲ್ಲಿ ಕಳೆದ ವರ್ಷವೂ ಬರದ ಪರಿಸ್ಥಿತಿ ಆವರಿಸಿತ್ತು. ರೈತರು ಬೆಳೆವಿಮೆ ತುಂಬಿದ್ದಾರೆ. ಆ ಮಾಹಿತಿಯನ್ನು ನಾವು ವಿಮಾ ಕಂಪನಿಗೆ ವರ್ಗಾವಣೆ ಮಾಡಿದ್ದೇವೆ. ಕಂಪನಿಯಿಂದ ನಮಗೆ ವಿಮಾ ಮೊತ್ತ ಪಾವತಿಯ ಮಾಹಿತಿ ಬರಬೇಕಿದೆ. ಆದರೆ ಇನ್ನೂ ಬಂದಿಲ್ಲ.•ಶಬಾನಾ ಶೇಖ್‌ ಜಂಟಿ ಕೃಷಿ ನಿರ್ದೇಶಕಿ, ಕೊಪ್ಪಳ

ನಾವು ಕಳೆದ ವರ್ಷ ವಿಮೆ ಪಾವತಿಸಿದ್ದೇವೆ. ಆದರೆ ಇಲಾಖೆ ಅಧಿಕಾರಿಗಳ ನಿಧಾನಗತಿ ವಿಮಾ ಕಂಪನಿಗಳ ಮಧ್ಯೆ ಮಾತುಕತೆ ಕೊರತೆಯಿಂದ ಈ ರೀತಿಯಾಗುತ್ತಿದೆ. ವಿಮೆ ಕಟ್ಟಿ ಎಂದು ನಮಗೆ ಅಧಿಕಾರಿಗಳು ಹೇಳ್ತಾರೆ. ಆದರೆ ಕಟ್ಟಿದ ವಿಮೆ ಮೊತ್ತ ಕೊಡಿಸಿ ಎಂದು ನಾವು ಕೇಳಿದರೆ, ವಿಮಾ ಕಂಪನಿ ಪಾವತಿ ಮಾಡಬೇಕು ಅಂತಾರೆ. ಇದಕ್ಕೆ ಯಾರು ಜವಾಬ್ದಾರರು? ವರ್ಷದಿಂದ ವರ್ಷಕ್ಕೆ ವಿಮೆ ಕೂಡಲೇ ಪಾವತಿಯಾಬೇಕು.•ಅಂದಪ್ಪ ಕೋಳೂರು, ರೈತ
•ದತ್ತು ಕಮ್ಮಾರ
Advertisement

Udayavani is now on Telegram. Click here to join our channel and stay updated with the latest news.

Next