Advertisement

ಇಕ್ಕಟ್ಟಾದ ರಸ್ತೆಯಲ್ಲಿ ಕಗ್ಗಂಟಾದ ಸಂಚಾರ

03:18 PM Oct 26, 2021 | Team Udayavani |

ಗುಳೇದಗುಡ್ಡ: ಇಕ್ಕಟ್ಟಾದ ರಸ್ತೆಯಲ್ಲಿ ನಿತ್ಯವು ಇಲ್ಲಿನ ಜನರಿಗೆ ಸಂಚರಿಸುವುದು ಕಗ್ಗಂಟಾಗಿದ್ದು, ಹಳದೂರ-ಇಂಜಿನವಾರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ಮೆಟ್ಲಿಂಗ್‌ ಮಾಡಿದ್ದರೂ ಅದು ಕೂಡಾ ಹಾಳಾಗಿದ್ದು, ಕೂಡಲೇ ರಸ್ತೆ ನಿರ್ಮಾಣ ಮಾಡಬೇಕೆಂದು ಹಳದೂರು ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.

Advertisement

ಹಳದೂರು ಮಾರುತೇಶ್ವರ ದೇವಸ್ಥಾನದಿಂದ ಇಂಜಿನವಾರಿಗೆ ಹೋಗುವ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ಸಾಕಷ್ಟು ತಗ್ಗು ದಿನ್ನಿಗಳು ಬಿದ್ದು, ರೈತರಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಅಲ್ಲದೇ ರೈತರ ದನ ಕರು ಹಾಗೂ ಚಕ್ಕಡಿ ಓಡಿಸಲು ತೊಂದರೆಯಾಗುತ್ತಿದೆ. ಈ ರಸ್ತೆಯು ಗ್ರಾಮಸ್ಥರಿಗೆ ಅನುಕೂಲವಾಗಿದ್ದು, ಸುಮಾರು 2 ಕಿಮೀ ಅಂತರ ಕಡಿಮೆಯಾಗಲಿದ್ದು, ನೇರವಾಗಿ ಕಮತಗಿ ಪಟ್ಟಣಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂಬುದು ಗ್ರಾಮಸ್ಥರ ಮಾತು.

ಈ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅಲ್ಲದೇ ಈ ರಸ್ತೆಯ ಎರಡು ಕಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಾಲಿ ಕಂಟಿಗಳು ಬೆಳೆದಿವೆ. ರಸ್ತೆಯಲ್ಲಿ ಒಂದು ಬಂಡಿ ಅಥವಾ ಟ್ರ್ಯಾಕ್ಟರ್‌ ಬಂದರೆ ಮುಂದೆ ಮತ್ತೂಂದು ವಾಹನ ಬರಲು ಸಾಧ್ಯವಾಗುವುದಿಲ್ಲ. ಕಾರಣ ರಸ್ತೆ ಇಕ್ಕಟ್ಟಾಗಿದೆ. ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಅರ್ಧಕ್ಕೆ ನಿಂತಿರುವ ಸುಮಾರು ಒಂದೂವರೆ ಕಿ.ಮೀ. ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಹಳದೂರು ಗ್ರಾಮದ ಗುರು ಅಂಗಡಿ, ಸಂಗಪ್ಪ ಬಡಿಗೇರ, ಮಹಮದ್‌ ಸಾಧನಿ, ರಾಮಣ್ಣ ಜಮ್ಮನಕಟ್ಟಿ, ಈರಣ್ಣ ಹುನಗುಂದ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೆಟ್ಲಿಂಗ್‌ಗೆ ಸೀಮಿತ

ಈ ರಸ್ತೆಗೆ ಈ ಎರಡು ವರ್ಷಗಳ ಹಿಂದೆ ಜಿಪಂ-ತಾಪಂ ವತಿಯಿಂದ ಸುಮಾರು 14 ಲಕ್ಷ ರೂಗಳಲ್ಲಿ ಮೆಟ್ಲಿಂಗ್‌ ಕೆಲಸ ಮಾಡಲಾಗಿದೆ ಎನ್ನಲಾಗಿದೆ. ಮೆಟ್ಲಿಂಗ್‌ ಸಂದರ್ಭದಲ್ಲಿ ಈ ರಸ್ತೆಗೆ ಬರುವ ಹಳ್ಳಗಳಿಗೆ ಸೇತುವೆ ನಿರ್ಮಾಣ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಹಳದೂರ ಇಂಜಿನವಾರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಮೆಟ್ಲಿಂಗ್‌ ಮಾಡಿದ್ದಾರೆ. ಆದರೆ ಕಾಂಕ್ರಿಟ್‌ ಇಲ್ಲವೇ ಡಾಂಬರ್‌ ರಸ್ತೆ ನಿರ್ಮಾಣ ಮಾಡಬೇಕಿತ್ತು. ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಗಮನಹರಿಸುತ್ತಿಲ್ಲ ಎಂದು ಹಳದೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next