Advertisement

ಎಲೆ ಚುಕ್ಕಿ ರೋಗದ ತೀವ್ರತೆ ತುಸು ಇಳಿಕೆ: ಎಲೆ ಕತ್ತರಿಸಲು ಇನ್ನೂ ಬಾರದ ಪ್ಯಾಕೇಜ್‌

11:58 PM Jan 23, 2023 | Team Udayavani |

ಮಂಗಳೂರು: ಅಡಿಕೆ ಬೆಳೆಗಾರರನ್ನು ಕಂಗೆಡಿಸಿದ ಎಲೆಚುಕ್ಕಿ ರೋಗ ಬದಲಾದ ಹವಾ ಮಾನ ಪರಿಸ್ಥಿತಿಯಿಂದಾಗಿ ತುಸು ನಿಯಂತ್ರಣಕ್ಕೆ ಬರುವ ಲಕ್ಷಣಗಳು ಗೋಚರಿಸಿವೆ. ಆದರೆ ಇದನ್ನು ನಂಬುವ ಪರಿಸ್ಥಿತಿಯಲ್ಲಿ ಕೃಷಿಕರಿಲ್ಲ.

Advertisement

ಇನ್ನೊಂದೆಡೆ ಎಲೆ ಕತ್ತರಿಸುವುದಕ್ಕೆ ಬೇಕಾದ ನೆರವು ಕೊಡುವುದಾಗಿ ಹೇಳಿ ಹೋಗಿರುವ ತೋಟಗಾರಿಕೆ ಸಚಿವ ಮುನಿರತ್ನ ಕೂಡ ಈ ಕುರಿತ ಪ್ರಸ್ತಾವವನ್ನು ಅಂಗೀಕರಿಸಿಲ್ಲ.

ಎರಡು ತಿಂಗಳ ಹಿಂದೆ ಎಲೆ ಚುಕ್ಕಿ ಬಾಧಿತ ತೋಟಗಳಿಗೆ ಭೇಟಿ ನೀಡಿದ್ದ ಮುನಿರತ್ನ ಅವರು ಮಂಗಳೂರಿನಲ್ಲಿ ಮಾತನಾಡುವಾಗ ಎಲೆಗಳನ್ನು ಕತ್ತರಿಸುವ ರೈತರಿಗೆ ಬೇಕಾದ ನೆರವು ನೀಡುವುದಾಗಿ ಪ್ರಕಟಿಸಿದ್ದರು. ಎಲ್ಲ ರೋಗ ಬಾಧಿತ ತೋಟಗಳಿರುವ ಜಿಲ್ಲೆಗಳಿಂದ ರೋಗ ಹರಡಿರುವ ಪ್ರಮಾಣ, ರೈತರ ಸಂಖ್ಯೆ ಇತ್ಯಾದಿ ವಿವರಗಳನ್ನು ಕೇಳಿದ್ದೇನೆ, ಅದು ಸಿಕ್ಕಿದ ಕೂಡಲೇ ಅವರಿಗೆ ಎಲೆ ಕತ್ತರಿಸಲು ಬೇಕಾದ ದೋಟಿಯ ಸಹಾಯಧನ, ಕತ್ತರಿಸಿದ ಬಳಿಕ ಸಿಂಪಡಿಸಬೇಕಾದ ರಾಸಾಯನಿಕವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದರು.

ಈಗಾಗಲೇ ಎಲ್ಲ ಜಿಲ್ಲೆಗಳಿಂದಲೂ ಪ್ರಸ್ತಾವನೆ ತೋಟಗಾರಿಕೆ ಇಲಾಖೆ ಕೇಂದ್ರ ಕಚೇರಿಗೆ ತಲುಪಿದೆ. ನಾವು ಎಲ್ಲ ಅಂಕಿ-ಅಂಶವಿರುವ ಪ್ರಸ್ತಾವನೆಯನ್ನು ಸಚಿವಾಲಯಕ್ಕೆ ಕಳುಹಿಸಿದ್ದೇವೆ. ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಮಾಹಿತಿಯನ್ನು ಕೇಂದ್ರ ಸರಕಾರ ಎಲೆ ಚುಕ್ಕಿ ರೋಗ ಕುರಿತು ರಚಿಸಿರುವ ಕೇಂದ್ರೀಯ ಸಮಿತಿಗೂ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ತೀವ್ರತೆ ತುಸು ಇಳಿಕೆ
ಎಲೆಚುಕ್ಕಿ ರೋಗ ಪಸರಿಸುವ ತೀವ್ರತೆ ಸದ್ಯಕ್ಕೆ ತುಸು ಇಳಿಕೆಯಾಗಿದೆ ಎನ್ನುವುದು ಕೃಷಿಕರು ಹಾಗೂ ಅಧಿಕಾರಿಗಳು ತಿಳಿಸುವ ಸಂಗತಿ. ತೇವಾಂಶ ಹೆಚ್ಚಿರುವ ಹವೆಯಲ್ಲಿ ರೋಗ ಹರಡುವ ವೇಗ ಜಾಸ್ತಿ. ಈಗ ಒಣಹವೆಯಿರುವುದರಿಂದ ಫಂಗಸ್‌ ಮೂಲಕ ರೋಗ ಪ್ರಸಾರದ ಪ್ರಮಾಣ ಕಡಿಮೆಯಾಗಿದೆ. ಆದರೆ ಮತ್ತೆ ಮಳೆಗಾಲ ಆರಂಭವಾದರೆ ಮರುಕಳಿಸಬಹುದು ಎನ್ನುತ್ತಾರೆ ಎಳನೀರಿನ ಕೃಷಿಕ ಪ್ರಕಾಶ್‌.

Advertisement

ರಾಸಾಯನಿಕ ವಿತರಣೆ
ದ.ಕ.ದಲ್ಲಿ 3,502.37 ಹೆಕ್ಟೇರ್‌ ಪ್ರದೇಶದಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. 4,859 ಕೃಷಿಕರು ತಮ್ಮ ತೋಟಕ್ಕೆ ರೋಗ ಬಾಧಿಸಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದುವರೆಗೆ 1.6 ಲಕ್ಷ ರೂ. ಮೊತ್ತದ ರಾಸಾಯನಿಕವನ್ನು ಸಿಂಪಡಣೆಗಾಗಿ ವಿತರಿಸಲಾಗಿದೆ. ಸಬ್ಸಿಡಿ ಯೋಜನೆಯಲ್ಲಿ 150ರಷ್ಟು ಸಿಂಪಡಣಾ ಉಪಕರಣಗಳನ್ನು ವಿತರಿಸಲಾಗಿದೆ.

ದ.ಕ.ದ ಬೆಳ್ತಂಗಡಿಯಲ್ಲಿ 2,580 ಹೆಕ್ಟೇರ್‌, ಸುಳ್ಯ 638 ಹೆಕ್ಟೇರ್‌, ಪುತ್ತೂರು 152 ಹೆಕ್ಟೇರ್‌, ಬಂಟ್ವಾಳ 120 ಹೆಕ್ಟೇರ್‌ ಪ್ರದೇಶ ರೋಗ ಬಾಧಿತ. ಉಡುಪಿ ಜಿಲ್ಲೆಯಲ್ಲಿ ಅಷ್ಟಾಗಿ ರೋಗ ಬಾಧಿಸಿಲ್ಲ. ಕಾರ್ಕಳ ತಾಲೂಕಿನ 100 ಹೆಕ್ಟೇರ್‌ ಹಾಗೂ ಕುಂದಾಪುರದ 60 ಹೆಕ್ಟೇರ್‌ ಮಾತ್ರವೇ ಬಾಧೆಗೊಳಗಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next