Advertisement

ಚಿಲಕ ಹಾಕಿ ಮಲಗಿದ ಬಾಲಕಿ: ರಕ್ಷಣೆ

05:55 AM Jun 08, 2018 | Team Udayavani |

ಮಂಗಳೂರು: ನಾಲ್ಕನೇ ಮಹಡಿಯ ಮನೆಯಲ್ಲಿ ಹಗಲಿನಲ್ಲಿ ಮಲಗಿದ್ದ 12 ವರ್ಷದ ಬಾಲಕಿಯ ಪೋಷಕರು ಬಂದು ಕರೆದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ತತ್‌ ಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕ ದಳ ಸಿಬಂದಿ ಅತ್ಯಾಧುನಿಕ ಏರಿಯಲ್‌ ಲ್ಯಾಡರ್‌ ಪ್ಲಾಟ್‌ ಫಾರಂ ಬಳಸಿ ಒಳತೆರಳಿ ಎಬ್ಬಿಸಿದ ಘಟನೆ ಮಂಗಳೂರಿನ ಬಿಜೈ ಚರ್ಚ್‌ ರಸ್ತೆಯ ಅಭಿಮಾನ್‌ ಮ್ಯಾನ್ಶನ್‌ ಅಪಾರ್ಟ್‌ಮೆಂಟ್‌ ನಲ್ಲಿ ಗುರುವಾರ ನಡೆದಿದೆ.

Advertisement

ಕೆಲವು ದಿನಗಳ ಹಿಂದಷ್ಟೇ ಮಗುವೊಂದು ಪೋಷಕರು ಹೊರಗೆ ಹೋದ ಸಂದರ್ಭ 8ನೇ ಮಹಡಿಯ ಬಾಲ್ಕನಿಯಿಂದ ಕೆಳಬಿದ್ದು ಅನಾಹುತ ಸಂಭವಿಸಿತ್ತು. ಹಾಗಾಗಿ ಮನವಿ ಬಂದ ಕೂಡಲೇ ಘಟನೆಯ ಮಹತ್ವ ಅರಿತ ಕದ್ರಿ ಮತ್ತು ಪಾಂಡೇಶ್ವರ ಅಗ್ನಿ ಶಾಮಕ ಠಾಣೆಗಳ ಸಿಬಂದಿ ಇಲಾಖೆಯ ಅತ್ಯಾಧುನಿಕ ಎ.ಎಲ್‌.ಪಿ. ಯಂತ್ರ ಉಪಯೋಗಿಸಿ ಆಕೆಯಿದ್ದ ಫ್ಲ್ಯಾಟಿನ ಬಾಲ್ಕನಿಯ ಬಾಗಿಲಿನ ಮೂಲಕ ಒಳ ಪ್ರವೇಶಿಸಿ ಎಬ್ಬಿಸಿ ತಂದೆ-ತಾಯಿಯ ಮಡಿಲಿಗೆ ಒಪ್ಪಿಸಿದರು.

ಆದುದೇನು?
ಟಿ.ವಿ. ರವೀಂದ್ರ ಕುಮಾರ್‌ ಅವರು ಬ್ಯಾಂಕೊಂದರ ಅಧಿಕಾರಿಯಾಗಿದ್ದು, ಅವರ ಪತ್ನಿ ಕೂಡ ಉದ್ಯೋಗಸ್ಥೆ. ಇಲ್ಲಿಯ ನಾಲ್ಕನೇ ಮಹಡಿಯ ಮನೆಯಲ್ಲಿ ವಾಸವಾಗಿದ್ದು, ಮಗಳು ಪ್ರಶಂಸಾ ಗುರುವಾರ ಸಂಜೆ ತಾಯಿ ಹೊರಗೆ ಹೋಗಿದ್ದಾಗ ಬಾಗಿಲು ಮುಚ್ಚಿ ಬೆಡ್‌ ರೂಂನಲ್ಲಿ ನಿದ್ದೆಗೆ ಜಾರಿದ್ದಳು. ಸಂಜೆ 5 ಗಂಟೆ ವೇಳೆಗೆ ತಾಯಿ ವಾಪಸಾದಾಗ ಮನೆಯ ಮುಖ್ಯ ದ್ವಾರಕ್ಕೆ ಒಳಗಿನಿಂದ ಚಿಲಕ ಹಾಕಿತ್ತು. ಎಷ್ಟು ಬೆಲ್‌ ಮಾಡಿದರೂ ಎಷ್ಟೇ ಕೂಗಿ ಕರೆದರೂ ಆಕೆಗೆ ಎಚ್ಚರವಾಗಲಿಲ್ಲ. ಇದರಿಂದ ತಾಯಿ ಗಾಬರಿಗೊಂಡು, ಪಕ್ಕದ ಫ್ಲ್ಯಾಟ್‌ನಲ್ಲಿರುವ ನಿವೃತ್ತ ಪೊಲೀಸ್‌ ಅಧಿಕಾರಿ ವಿನಯ್‌ ಗಾಂವ್‌ ಕರ್‌ ಗೆ ವಿಷಯ ತಿಳಿಸಿದರು. ಬಳಿಕ ಗಾಂವ್‌ ಕರ್‌ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದರು.


20 ನಿಮಿಷಗಳ ಕಾರ್ಯಾಚರಣೆ

ಮಂಗಳೂರು ವಿಭಾಗದ ಮುಖ್ಯ ಅಗ್ನಿ ಶಾಮಕ ಅಧಿಕಾರಿ ಟಿ.ಎನ್‌. ಶಿವಶಂಕರ್‌ ಅವರ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ನಾಲ್ವರು ಅಧಿಕಾರಿಗಳು ಮತ್ತು 15 ಸಿಬಂದಿ 20 ನಿಮಿಷಗಳಲ್ಲಿ ಕಾರ್ಯಾಚರಣೆ ನಡೆಸಿದರು. ದಳದ ರಿಯಲ್‌ ಲ್ಯಾಡರ್‌ ಪ್ಲಾಟ್‌ಫಾರಂ ಯಂತ್ರದಲ್ಲಿ 10ನೇ ಮಹಡಿ ತನಕವೂ ತೆರಳಲು ಅವಕಾಶವಿದೆ.

ಯಶಸ್ವಿ ಕಾರ್ಯಾಚರಣೆ
ಸಂಜೆ 5.35ಕ್ಕೆ ಕದ್ರಿ ಅಗ್ನಿಶಾಮಕ ಠಾಣೆಗೆ ಮಾಹಿತಿ ಲಭಿಸಿದ್ದು, ಹತ್ತು ನಿಮಿಷಗಳಲ್ಲಿ ಠಾಣೆಯ ಅಧಿಕಾರಿ ಮತ್ತು ಸಿಬಂದಿ ಸ್ಥಳಕ್ಕೆ ತಲುಪಿದರು. ಈ ಮನೆ ನಾಲ್ಕನೇ ಮಹಡಿಯಲ್ಲಿದ್ದು, ಐದನೇ ಮಹಡಿಯ ಮನೆಯಲ್ಲಿ ಯಾರೂ ಇಲ್ಲದ ಕಾರಣ ಹಾಗೂ ಲಾಕ್‌ ಮಾಡಿದ್ದರಿಂದ ನಾಲ್ಕನೇ ಮಾಳಿಗೆಗೆ ಹೋಗಲು ಅಗ್ನಿಶಾಮಕ ದಳದವರು ಎಎಲ್‌ಪಿ ಯಂತ್ರವನ್ನು ಪಾಂಡೇಶ್ವರ ಠಾಣೆಯಿಂದ ತರಿಸಿದ್ದರು. ಅದರ ಮೂಲಕ ನಾಲ್ಕನೇ ಮಾಳಿಗೆಯ 404ನೇ ಫ್ಲ್ಯಾಟ್‌ ನ ಬಾಲ್ಕನಿ ಏರಿದಾಗ ಅಲ್ಲಿ ಬಾಗಿಲು ತೆರೆದೇ ಇತ್ತು. ಅದರ ಮೂಲಕ ಅಗ್ನಿಶಾಮಕ ಸಿಬಂದಿ ಮನೆಯ ಒಳಗೆ ತೆರಳಿ ಮಲಗಿದ್ದ ಬಾಲಕಿಯನ್ನು ಎಬ್ಬಿಸಿದರು. ಬಳಿಕ ಮುಖ್ಯ ದ್ವಾರದ ಬಾಗಿಲಿನ ಒಳಗಿನ ಚಿಲಕ ತೆಗೆದು, ಬಾಗಿಲು ತೆರೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next