ಮೈಸೂರು: ಪ್ರಧಾನಿ ಮೋದಿ ಕಾರಣದಿಂದಲೇ ನನಗೆ ಪ್ರಶಸ್ತಿ ದೊರೆತಿದೆ. ಅವರಂಥ ಸಮರ್ಥ ಪ್ರಧಾನಿ ದೇಶಕ್ಕೆ ಅಗತ್ಯವಿದ್ದು, ಮುಂದಿನ ಚುನಾವಣೆಯಲ್ಲಿ ಮೋದಿ ಮತ್ತೆ ಆಯ್ಕೆಯಾಗಿ 2029ರ ವರೆಗೂ ಪ್ರಧಾನಿಯಾಗಿರಬೇಕು ಎಂದು ಹಿರಿಯ ಸಾಹಿತಿ ಪ್ರೊ| ಎಸ್.ಎಲ್. ಭೈರಪ್ಪ ಹೇಳಿದರು.
ಕೇಂದ್ರ ಸರಕಾರ ಪದ್ಮಭೂಷಣ ಪುರಸ್ಕಾರ ನೀಡಿರುವ ಸಂಬಂಧ ಮೈಸೂರಿನ ಕುವೆಂಪುನಗರದ ತಮ್ಮ ನಿವಾಸದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಕ್ಕೆ ಮೋದಿ ನೇತೃತ್ವದ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಶಸ್ತಿ ಕೊಟ್ಟರೆಂಬ ಕಾರಣಕ್ಕೆ ಅವರ ಸರಕಾರವನ್ನು ಹೊಗಳುವುದಿಲ್ಲ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ ರಾಜಕೀಯದ ಬಗ್ಗೆ ಓದಿಕೊಂಡಿದ್ದೇನೆ ಎಂದರು.
ದೇಶದಲ್ಲಿ ಮೋದಿ ನೇತೃತ್ವ ದಂಥ ಸರಕಾರ ಇದುವರೆಗೆ ಬಂದಿರಲಿಲ್ಲ. ಸೇವೆಯನ್ನೇ ದೃಷ್ಟಿಯಲ್ಲಿಟ್ಟು ಕೊಂಡಿರುವ ಹಾಗೂ ಅಸಾಮಾನ್ಯ ಧೈರ್ಯ ಹೊಂದಿರುವಂಥ ಪ್ರಧಾನಿ ಇದುವರೆಗೆ ಬಂದಿರಲಿಲ್ಲ ಎಂದರು.
ಸಮಾನ ನಾಗರಿಕ ಸಂಹಿತೆ ಅಗತ್ಯ
Related Articles
ಏಕರೂಪ ನಾಗರಿಕ ಸಂಹಿತೆಯನ್ನು ಖಂಡಿತವಾಗಿ ಜಾರಿಗೊಳಿಸಬೇಕು. ಎಲ್ಲ ಕಾನೂನು ಎಲ್ಲರಿಗೂ ಅನ್ವಯ ವಾಗುವಂತೆ ಮಾಡಬೇಕು. ಮತಕ್ಕೋಸ್ಕರ ಒಂದು ವರ್ಗದ ಓಲೈಕೆ ಸರಿಯಲ್ಲ. ಅಲ್ಪಸಂಖ್ಯಾಕರು ಬೇರೆ ಎಂದು ಮಾಡಿದ್ದೇಕೆ ಎಂದು ಪ್ರಶ್ನಿಸಿದ ಅವರು, ಸ್ವಾತಂತ್ರÂ ಬಂದ ಬಳಿಕ ದೇಶಕ್ಕೆ ಸರಿಯಾದ ಅಡಿಪಾಯ ಹಾಕಲಿಲ್ಲ. ಇದರಿಂದ ಹಲವು ಸಮಸ್ಯೆಗಳಾಗಿವೆ ಎಂದು ಹೇಳಿದರು.
2002ರ ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವಿತ್ತು ಎಂದು ಆರೋಪಿಸಿ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರದ ಬಗ್ಗೆ ಮಾತನಾಡಿ, ಈಗ ಅದು ಹೊರಬಂದಿದ್ದೇಕೆ? ಜಿ 20 ಶೃಂಗಸಭೆಗೆ ಉತ್ತಮ ಅರ್ಥಶಾಸ್ತ್ರಜ್ಞರನ್ನು ಆಯ್ಕೆ ಮಾಡಿ ದ್ದನ್ನು ತಡೆಯಲಾಗದೆ ಇಂಥದ್ದೆಲ್ಲ ವನ್ನು ಆರಂಭಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಹಿತ್ಯದ ಖುಷಿ
ಪದ್ಮಭೂಷಣ ಪುರಸ್ಕಾರ ಸಿಕ್ಕಿದ್ದಕ್ಕಿಂತಲೂ, ನನ್ನ ಕೃತಿಗಳನ್ನು ಲಕ್ಷಾಂತರ ಮಂದಿ ಓದಿ ಸಂತೋಷಪಟ್ಟಿರುವುದು ಹೆಚ್ಚಿನ ಖುಷಿ ಕೊಡುತ್ತದೆ. ನನಗೀಗ 92 ವರ್ಷ ವಯಸ್ಸು. ನಾನು ಸತ್ತ ಮೇಲೂ ನನ್ನ ಪುಸ್ತಕಗಳು ಬದುಕುತ್ತವೆಯೇ ಎನ್ನುವುದು ಮುಖ್ಯವಾಗುತ್ತದೆ. ಮುಂದೆಯೂ ನನ್ನ ಪುಸ್ತಕಗಳು ಪ್ರಸ್ತುತವಾಗಿರುತ್ತವೆ ಎಂದಾದರೆ ಅದೇ ನಿಜವಾದ ಪ್ರಶಸ್ತಿ ಎಂದು ಹೇಳಿದರು.