Advertisement

ಗಗನಕ್ಕೇರಿದ ಪಶು ಆಹಾರದ ಬೆಲೆ; ರೈತರ ಆದಾಯಕ್ಕೆ ಹೊಡೆತ

05:29 PM May 12, 2022 | Team Udayavani |

ದೇವನಹಳ್ಳಿ: ಗ್ರಾಮೀಣ ಭಾಗದಲ್ಲಿ ಕೃಷಿ ಜತೆ ಉಪಕಸುಬಾಗಿ ಹೈನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದ ರೈತ ಸಮುದಾಯಕ್ಕೆ ಹಾಲು ಉತ್ಪಾದನೆಗೆ ಹೆಚ್ಚಿನ ವೆಚ್ಚದ ಹೊರೆ, ಪಶು ಆಹಾರ ಬೆಲೆ ಗಗನಕ್ಕೇರಿದ್ದು, ಹಾಲು ಉತ್ಪಾದಕರು, ಸಣ್ಣ ರೈತರ ಆದಾಯಕ್ಕೆ ಹೊಡೆತ ಬಿದ್ದಿದೆ.

Advertisement

ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ರೈತರು ಹೈನೋದ್ಯಮ ಮಾಡಿಕೊಂಡು ಬಂದಿದ್ದಾರೆ. ಹಾಲು ಸರಬರಾಜು ಮಾಡುವ ರೈತರಿಗೆ ಹದಿನೈದು ದಿನಕ್ಕೊಮ್ಮೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ರೈತರ ಖಾತೆಗೆ ಹಣ ಜಮಾ ಮಾಡುತ್ತಾರೆ. ನಾಲ್ಕೈದು ಹಸು ಸಾಕುವವರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಎಷ್ಟು ಹಾಲು ಹಾಕುತ್ತೇವೋ, ಹಿಂಡಿ, ಬೂಸಾ, ಮೇವು, ಫೀಡ್‌, ಹಸು ಕೊಟ್ಟಿಗೆ ಸ್ವತ್ಛತೆ, ನಿರ್ವಹಣೆ ಸೇರಿ ಇತರೆ ಕೂಲಿ ಮಾಡುವವರಿಗೆ ಇಂತಿಷ್ಟು ಹಣ ನೀಡಬೇಕು. ಎಷ್ಟು ಖರ್ಚು ಆಯಿತು. ಎಷ್ಟು ಉಳಿಯುತ್ತದೆ ಎಂಬ ಲೆಕ್ಕಾಚಾರವನ್ನು ರೈತರು ಹಾಕುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ: ಪಶು ಆಹಾರದ ಬೆಲೆ ಮಾರುಕಟ್ಟೆಯಲ್ಲಿ ಗಗನಕ್ಕೇರಿದೆ. ಮಾಲೀಕರು ಪಶು ಆಹಾರವನ್ನು ಇಷ್ಟ ಬಂದ ಬೆಲೆಯಲ್ಲಿ ರೈತರಿಗೆ ಮಾರುತ್ತಿದ್ದಾರೆ. ಬೂಸಾ 45 ಕೆ.ಜಿ.ಗೆ 1,200, ಹಿಂಡಿ 40 ಕೆ.ಜಿ. ಮೂಟೆಗೆ 1,500, ಫೀಡ್‌ ಮೂಟೆ 50 ಕೆ.ಜಿ.ಗೆ 970, ಉಪ್ಪು 220 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಇಷ್ಟೆಲ್ಲಾ ಬಂಡವಾಳ ಹಾಕಿದರೂ, ರೈತರ ಶ್ರಮಕ್ಕೆ ಆದಾಯ ಬರದಂತಾಗುತ್ತಿದೆ.

ರೈತರು ಕಂಗಾಲು: ಇಡೀ ಪ್ರಪಂಚವನ್ನೇ ಕೊರೊನಾ ಸಾಂಕ್ರಾಮಿಕ ರೋಗ ತಲ್ಲಣಗೊಳಿಸಿತ್ತು. ರೈತರಿಗೆ ಕೋವಿಡ್‌ ಸಮಯದಲ್ಲಿ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಿದ್ದರು. ಆಗ ರೈತರಿಗೆ ಹೈನುಗಾರಿಕೆ ವರವಾಗಿತ್ತು. ಈ ಸಮಯದಲ್ಲಿ ಜನರು ಉದ್ಯೋಗ ಕಳೆದುಕೊಂಡು ಹಳ್ಳಿ ಸೇರಿದ ಅನೇಕರು ಹೈನುಗಾರಿಕೆಯನ್ನೇ ಉದ್ಯೋಗವನ್ನಾಗಿ ರೂಪಿಸಿಕೊಂಡಿದ್ದರು. ಇದೀಗ ಪಶು ಸಾಕಾಣಿಕೆಗೆ ಆಹಾರ ನಿರ್ವಹಣೆಯ ಅಧಿಕ ವೆಚ್ಚ ಹೈನೋದ್ಯಮ ಪ್ರಾರಂಭಿಸಿದ್ದ ರೈತರಲ್ಲಿ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಲು ಉತ್ಪಾದಕ ರೈತರಿಗೆ ತಲೆ ಬಿಸಿ: ರೈತರಿಗೆ ಒಂದು ಲೀಟರ್‌ ಹಾಲು ಉತ್ಪಾದಿಸಲು 40 ರೂ. ವೆಚ್ಚವಾಗುತ್ತದೆ. ಸಹಕಾರ ಸಂಘಗಳು ಗುಣಮಟ್ಟದ ಆಧಾರಿತವಾಗಿ ಒಂದು ಲೀಟರ್‌ ಹಾಲಿಗೆ 27 ರೂ. ನೀಡುತ್ತಿದೆ. ಈ ಹಣಕ್ಕೆ ಸರ್ಕಾರದ ಸಹಾಯಧನ ಸೇರಿದರೆ ಸರಾಸರಿ 30ರೂ. ನಷ್ಟು ರೈತರಿಗೆ ಸಿಗುತ್ತದೆ. ಪ್ರತಿ ಲೀಟರ್‌ ಹಾಲು ಉತ್ಪಾದನೆಯಲ್ಲಿ ರೈತರಿಗೆ 5 ರಿಂದ 10 ರೂ. ನಷ್ಟ ಅನುಭವಿಸುತ್ತಿದ್ದು, ರೈತರು ಸಂಕಷ್ಟಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿದೆ. ಪಶು ಸಾಕಾಣಿಕೆಗೆ ಬರೀ ಪಶು ಆಹಾರ, ಮೇವಿನ ಬೆಲೆ, ಹಾಲಿನ ದರ ಕಡಿಮೆಯಿರುವುದು ಒಂದೇ ಕಾರಣವಾಗಿಲ್ಲ. ಪಶುಗಳ ಚಿಕಿತ್ಸೆ ದರ ರೈತರಿಗೆ ದುಬಾರಿಯಾಗಿದೆ. ಗ್ರಾಮೀಣ ಭಾಗಗಳಲ್ಲಿ ಸೂಕ್ತ ಸಮಯಕ್ಕೆ ವೈದ್ಯರು ಸಿಗದಂತಾಗಿದೆ. ಚಿಕಿತ್ಸೆ ವೆಚ್ಚವು, ಔಷಧೋಪಚಾರಗಳ ವೆಚ್ಚವು ಹೆಚ್ಚಾಗಿರುವುದರಿಂದ ಹಾಲು ಉತ್ಪಾದಕ ರೈತರಿಗೆ ತಲೆಬಿಸಿಯಾಗುವಂತೆ ಆಗಿದೆ.

Advertisement

ಲೀಟರ್‌ ಹಾಲಿಗೆ 40 ರೂ. ನೀಡಿ: ಜಿಲ್ಲೆಯಲ್ಲಿ ಹೈನು ಉದ್ಯಮವನ್ನು ಉಳಿಸಲು ಸರ್ಕಾರ ಮುಂದಾಗಬೇಕು. ಯಾವುದೇ ಮಾನದಂಡಗಳಿಲ್ಲದೆ ಬೆಲೆ ಏರುತ್ತಿರುವ ಪಶು ಆಹಾರ ಬೆಲೆಗಳಿಗೆ ಕಡಿವಾಣ ಹಾಕಬೇಕು. ರಿಯಾಯಿತಿ ದರದಲ್ಲಿ ಪಶು ಆಹಾರ ನೀಡಬೇಕು. ಪ್ರತಿ ಲೀಟರ್‌ ಹಾಲಿಗೆ 40ರೂ. ನೀಡುವಂತಾಗಬೇಕು. ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಲೀಟರ್‌ ಹಾಲಿಗೆ ಸಹಾಯಧನ ಹೆಚ್ಚಿಸಬೇಕು. ಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸಬೇಕೆಂದು ಹಾಲು ಉತ್ಪಾದಕ ರೈತರು ಒತ್ತಾಯಿಸಿದರು.

ಮಾರುಕಟ್ಟೆಯಲ್ಲಿ ಮೇವಿನ ಬೆಲೆಯೂ ಹೆಚ್ಚಳ
ಬೇಸಿಗೆ ಆರಂಭದಿಂದ ಪಶು ಮೇವಿನ ಕೊರತೆ ಕಾಡುತ್ತದೆ. ಕೆಲವು ಕೊಳವೆಬಾವಿ ಹೊಂದಿದ ರೈತರು ಮಾತ್ರ ಹಸಿ ಮೇವು ಬೆಳೆಯುತ್ತಾರೆ. ನೀರಿನ ಸೌಲಭ್ಯ ಇಲ್ಲದವರು ಮೇವಿಗಾಗಿ ದುಬಾರಿ ವೆಚ್ಚವೇ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಯಲ್ಲಿ ಮೇವಿನ ಬೆಲೆಯೂ ಹೆಚ್ಚಾಗಿದ್ದು, ಒಂದು ಟ್ರ್ಯಾಕ್ಟರ್‌ ಒಣ ಹುಲ್ಲು 20 ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ. ಹಸಿ ಮೇವಿನ ಒಂದು ಸಣ್ಣಕಟ್ಟಿಗೆ 30 ರೂ. ವೆಚ್ಚವಾಗುತ್ತಿದೆ. ಜಿಲ್ಲೆಯ ರೈತರು ಅಕ್ಕಪಕ್ಕದ ಜಿಲ್ಲೆಗಳಿಂದ, ಇತರೆ ಕಡೆಗಳಿಂದ ಪಶು ಸಾಕಲು ಒಣ ಮೇವು ತರಿಸಲು ಮುಂದಾಗಿದ್ದಾರೆ.

ನಮ್ಮ ತಾತ, ಮುತ್ತಾತ ಕಾಲದಿಂದಲೂ ಹೈನುಗಾರಿಕೆ ನಡೆಸಿಕೊಂಡು ಬಂದಿದ್ದೇವೆ. ಹೈನುಗಾರಿಕೆಗೆ ಶೇ.75ರಷ್ಟು ಹಣ ವೆಚ್ಚ ಮಾಡುವಂತಾಗಿದೆ. ಹಸು ನಿರ್ವಹಣೆ, ಪಶು ಆಹಾರ, ಔಷಧೋಪಚಾರ, ಹಸು ಕೊಟ್ಟಿಗೆ ಸ್ವತ್ಛತೆ, ಹಾಲು ಕರೆಯುವವರಿಗೆ ಕೂಲಿಯಾಗಿ 500 ರೂ. ನೀಡುತ್ತೇವೆ. ಇಷ್ಟೆಲ್ಲಾ ನಿರ್ವಹಣೆ ಮಾಡಿದರೂ, ಹೈನುಗಾರಿಕೆಯಲ್ಲಿ ರೈತರಿಗೆ ಲಾಭ ಬರದ ಸ್ಥಿತಿ ನಿರ್ಮಾಣವಾಗಿದೆ.
ನಾರಾಯಣಸ್ವಾಮಿ, ಕುಂದಾಣ ಹಾಲು ಉತ್ಪಾದಕ ರೈತ.

ರೈತರಿಗೆ ಪ್ರತಿ ಹದಿನೈದು ದಿನಕ್ಕೊಮ್ಮೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲಿನ ಬಟವಾಡೆ ರೈತರ ಖಾತೆಗೆ ಬರುತ್ತದೆ. ಈಗಾಗಲೇ ಸರ್ಕಾರಕ್ಕೆ ಗ್ರಾಹಕರಿಗೆ ಹಾಲಿನ ದರ ಹೆಚ್ಚಿಸಲು ಮನವಿ ಮಾಡಿದ್ದೇವೆ. ಆ ದರ ಹೆಚ್ಚಾದರೆ ರೈತರಿಗೆ ನೀಡಲು ಒಕ್ಕೂಟ ತೀರ್ಮಾನಿಸುತ್ತದೆ. 24.50 ರೂ. ಇದ್ದದ್ದು, ಒಕ್ಕೂಟ 27 ರೂ. ರೈತರಿಗೆ ನೀಡುತ್ತಿದೆ. ಹಾಲಿನ ದರದಲ್ಲಿ ರೈತರಿಗೆ ಯಾವುದೇ ವ್ಯತ್ಯಾಸ ಆಗತ್ತಿಲ್ಲ ನಮ್ಮ ಮನೆಯಲ್ಲಿ 24 ಹಸು ಸಾಕಿದ್ದೇವೆ. ಅದರಲ್ಲಿ 16 ಹಸು ಹಾಲು ಕರೆಯುವುದಿಲ್ಲ. 8 ಹಸುಗಳಲ್ಲಿ ಹಾಲು ಕರೆಯಲಾಗುತ್ತಿದೆ. ಕಳೆದ ವರ್ಷ 120 ಲೀಟರ್‌ ಇದ್ದದ್ದು, ಇದೀಗ 80 ಲೀಟರ್‌ಗೆ ಬಂದಿದೆ.
● ಬಿ.ಶ್ರೀನಿವಾಸ್‌, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ

ರೈತರ ಹಾಲಿಗೆ ಸರ್ಕಾರ ಹೆಚ್ಚು ಮಾಡುತ್ತೇವೆ ಎಂದು ಹೇಳಿ ಹೆಚ್ಚುವರಿ ಮಾಡಿಲ್ಲ. ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಸರ್ಕಾರ ಮಾಡುತ್ತಿದೆ. ಹಾಲಿನ ದರ ಮಾತ್ರ ಹೆಚ್ಚಿಸುತ್ತಿಲ್ಲ. ಹೈನೋದ್ಯಮ ಸಂಕಷ್ಟದಲ್ಲಿದ್ದು, ಪಶು ಆಹಾರ ಬೆಲೆ ಹೆಚ್ಚಳದಿಂದ ರೈತರು ಕಂಗಾಲಾಗಿದ್ದಾರೆ. ಪಶು ಆಹಾರ ಬೆಲೆ ಕಡಿಮೆ ಮಾಡುವ ಮೂಲಕ ರೈತರ ಹಿತ ಕಾಪಾಡಬೇಕು.
ಎಸ್‌.ಪಿ. ಮುನಿರಾಜು, ಸಾವಕನಹಳ್ಳಿ
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ

●ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next