Advertisement

ಸೀರೆ ಜಂಪ್‌ನ ಆ ಕ್ಷಣ

04:35 PM Mar 08, 2018 | Harsha Rao |

ಆಕೆಗೆ ಆಕಾಶದಿಂದ ನೆಲದತ್ತ ಚಿಮ್ಮುವುದು ಹೊಸತೇನಲ್ಲ. ಸ್ಕೈ ಡೈವಿಂಗ್‌ನಲ್ಲಿ ವಿಶ್ವ ದಾಖಲೆ ಬರೆದಿರುವ ಅವರ ಆ ಒಂದು ಜಿಗಿತವನ್ನು ಮಾತ್ರ ಜಗತ್ತು ಕುತೂಹಲದಿಂದ ನೋಡಿತು. ಖುದ್ದು ಇನ್‌ಸ್ಟ್ರಕ್ಟರ್‌ ಕೂಡ ಹಾಗೆ ಜಿಗಿಯುವುದನ್ನು ಒಪ್ಪಿರಲಿಲ್ಲ. ಆದರೆ, ಆಕೆಯನ್ನು ತಡೆಯುವರಾರು? 9 ಗಜ ಉದ್ದದ ನವ್ವಾರಿ ಸೀರೆಯುಟ್ಟು ಜಿಗಿದೇಬಿಟ್ಟರು, ಅಲ್ಲಿ ಮತ್ತೂಂದು ವಿಶ್ವದಾಖಲೆ ನಿರ್ಮಾಣವಾಯ್ತು.

Advertisement

ಶೀತಲ್‌ ರಾಣೆ ಮಹಾಜನ್‌, ಪದ್ಮಶ್ರೀ ಪುರಸ್ಕೃತ ಸ್ಕೈ ಡೈವರ್‌! ಈಗಾಗಲೇ 700ಕ್ಕೂ ಹೆಚ್ಚು ಬಾರಿ ಸ್ಕೈ ಡೈವ್‌ ಮಾಡಿರುವ ಇವರ ಹೆಸರಿನಲ್ಲಿ 17 ರಾಷ್ಟ್ರೀಯ ಹಾಗೂ 6 ವಿಶ್ವ ದಾಖಲೆಗಳಿವೆ. ಆದರೂ, ಇತ್ತೀಚೆಗೆ ಸೀರೆಯುಟ್ಟು ಜಿಗಿದ ಒಂದು ಜಿಗಿತ ಉಳಿದೆಲ್ಲ ಸಾಧನೆಗಳಿಗಿಂತಲೂ ಮಿಗಿಲು ಎನ್ನುತ್ತಾರೆ ಅವರು. “ಅವಳು’ ಜತೆ ವಿಶೇಷ ಮಾತುಕತೆಗೆ ಸಿಕ್ಕಿದ ಪುಣೆ ಮೂಲದ ಶೀತಲ್‌, ಆ ಸೀರೆ ಜಿಗಿತದ ಹಿಂದಿನ ಸಾಹಸದ ಪ್ರತಿಕ್ಷಣವನ್ನೂ ತೆರೆದಿಟ್ಟರು.
ಅಪ್ಪನೇ ಹೇಳಿಕೊಟ್ಟಿದ್ದು…

ಸ್ಕೈ ಡೈವ್‌ನಲ್ಲಿ ಶೀತಲ್‌ ಇಷ್ಟೊಂದೆಲ್ಲ ಸಾಧನೆ ಮಾಡಲು ಅವರ ತಂದೆ, ಕಮಲಾಕರ್‌ ಮಹಾಜನ್‌ರ ಪ್ರೋತ್ಸಾಹವೇ ಕಾರಣ. ಈ ವರ್ಷ ಯಾವ ಹೊಸ ದಾಖಲೆ ಬರೆಯಬಹುದು ಅಂತ ಯೋಚಿಸುತ್ತಿದ್ದಾಗ ಅಪ್ಪ ಹೇಳಿದ್ದು, “ಸೀರೆ ಉಟ್ಟು ಸ್ಕೈ ಡೈವ್‌ ಮಾಡು!’ ಅಂತ. ಇದು ಸಾಧ್ಯವಾ ಅಂತ ಮೊದಲಿಗೆ ಶೀತಲ್‌ಗ‌ೂ ಅನುಮಾನ ಮೂಡಿತಂತೆ. “ಇದು ತುಂಬಾ ರಿಸ್ಕಿ, ಆಗೋದೇ ಇಲ್ಲ’ ಅಂದ ಇನ್‌ಸ್ಟ್ರಕ್ಟರ್‌ ಅನ್ನು ಒಪ್ಪಿಸಲೂ ಎರಡು ದಿನ ಬೇಕಾಯ್ತು.

ಸೀರೆ ಸಾಹಸ
ಸೀರೆ ಉಡೋಕೆ ಕೆಲವರು ಗಂಟೆಗಟ್ಟಲೆ ತಗೋತಾರೆ. ನಡೆಯುವಾಗ ಕಾಲಿಗೆ ಸಿಗದಂತೆ, ಕೂರುವಾಗ ಜಾರದಂತೆ ಎಚ್ಚರ ವಹಿಸುತ್ತಾರೆ. ಇನ್ನು ಸೀರೆಯುಟ್ಟು ಸ್ಕೈ ಡೈವ್‌ ಮಾಡೋದು ಅಂದ್ರೆ?! ಅದೂ ಶೀತಲ್‌ ಆರಿಸಿಕೊಂಡಿದ್ದು ಮಹಾರಾಷ್ಟ್ರ ಶೈಲಿಯ ನವ್ವಾರಿ ಸೀರೆಯನ್ನು. 6 ಗಜದ ಸಾಮಾನ್ಯ ಸೀರೆಗಿಂತ ಉದ್ದದ, ಅಂದರೆ 9 ಗಜದ (8.25 ಮೀ) ಸೀರೆ ಅದು. ಹಲವಾರು ಕಡೆ ಪಿನ್‌ ಹಾಕಿ, ಬಿಚ್ಚಿಕೊಳ್ಳದಂತೆ ಗಟ್ಟಿ ಹೊಲಿಗೆ ಹಾಕಿ, ಟೇಪ್‌ ಮಾಡಿ, ಡೈವ್‌ಗೂ ಮೊದಲೇ ಸಾಹಸ ಮಾಡಿದ್ದಾಯ್ತು. ನಂತರ, ಹೆಲ್ಮೆಟ್‌, ಗಾಗಲ್ಸ್‌, ಸಂಪರ್ಕಕ್ಕೆ ಬಳಸುವ ಸಾಧನ, ಪ್ಯಾರಚೂಟ್‌ ಕಟ್ಟಿದರು. ಚೂರು ಹೆಚ್ಚು ಕಡಿಮೆ ಆದರೂ ಸೀರೆ ಬಿಚ್ಚಿಕೊಳ್ಳಬಹುದು ಅಥವಾ ಜಿಗಿಯುವುದಕ್ಕೆ ಕಷ್ಟವಾಗಬಹುದು. ಇನ್‌ಸ್ಟ್ರಕ್ಟರ್‌ಗಿದ್ದ ಭಯವೂ ಅದೇ. ಕೊನೆಗೂ ಅವರು ಥಾಯ್ಲೆಂಡ್‌ನ‌ಲ್ಲಿ 13, 000 ಅಡಿ ಎತ್ತರದಿಂದ ಯಶಸ್ವಿಯಾಗಿ ಜಿಗಿದು ನೆಲ ಮುಟ್ಟಿದರು. “ಈ ನನ್ನ ಜಿಗಿತ ಸೀರೆಯುಟ್ಟ ಭಾರತೀಯ ನಾರಿಯರಿಗೆ ಸಮರ್ಪಣೆ’ ಎನ್ನುವ ಅವರ ದನಿಯಲ್ಲಿ, ನಾವು ಯಾರಿಗೂ ಕಮ್ಮಿಯಿಲ್ಲ ಅನ್ನೋ ಭಾವವಿದೆ.

ದಾಖಲೆಗಳ ಸರದಾರಿಣಿ
2004ರಲ್ಲಿ ಜಿಯಾಗ್ರಾಫಿಕಲ್‌ ನಾರ್ತ್‌ ಪೋಲ್‌ನ -37 ಡಿಗ್ರಿ ಸೆಲಿÒಯಸ್‌ ವಾತಾವರಣದಲ್ಲಿ, ಯಾವುದೇ ಟ್ರಯಲ್‌ ಇಲ್ಲದೆ 2,400 ಅಡಿ ಎತ್ತರದಿಂದ ಜಿಗಿದು ಮೊದಲ ದಾಖಲೆ ಬರೆದರು. ಆಗ ಅವರಿಗೆ 21 ವರ್ಷ. ಅಲ್ಲಿಯವರೆಗೆ ಅವರು ವಿಮಾನ ಹತ್ತುವುದಿರಲಿ, ಹತ್ತಿರದಿಂದ ಪ್ಯಾರಾಚೂಟ್‌ ಅನ್ನೂ ನೋಡಿರಲಿಲ್ಲ! 2006ರಲ್ಲಿ, ತನ್ನ 23ನೇ ವಯಸ್ಸಿನಲ್ಲಿ ಯಾವುದೇ ಟ್ರಯಲ್‌ ಇಲ್ಲದೆ ಸೌತ್‌ ಪೋಲ್‌ ಅಂಟಾರ್ಟಿಕಾದ 11,600 ಅಡಿ ಎತ್ತರದಿಂದ ಆ್ಯಕ್ಸಿಲರೇಟೆಡ್‌ ಫ್ರೀ ಫಾಲ್‌ ಜಂಪ್‌ ಮಾಡಿ, ಎರಡು ಪೋಲ್‌ಗ‌ಳಿಂದ ಸ್ಕೈ ಡೈವ್‌ ಮಾಡಿದ ಜಗತ್ತಿನ ಅತಿ ಕಿರಿಯ ಮಹಿಳೆ ಎನಿಸಿಕೊಂಡರು.

Advertisement

ಆಕಾಶದಲ್ಲೇ ಮದುವೆ!
ಈ “ಕ್ವೀನ್‌ ಆಫ್ ಸ್ಕೈ’ನ ಮದುವೆ ನಡೆದಿದ್ದೂ ಆಕಾಶದಲ್ಲೇ. ಹಾಗೆ ನಭದಲ್ಲೇ ಮದುವೆ ನಡೆಯಬೇಕೆಂಬುದು ಅವರ ಕನಸು. ಫಿನ್‌ಲಾÂಂಡ್‌ನ‌ ಸಾಫ್ಟ್ವೇರ್‌ ಎಂಜಿನಿಯರ್‌ ವೈಭವ್‌ ರಾಣೆ ಜೊತೆಗೆ ಮದುವೆ ಪ್ರಸ್ತಾಪ ಬಂದಾಗ, ತಮ್ಮ ಕನಸನ್ನು ಹೇಳಿ ಅವರನ್ನು ಒಪ್ಪಿಸಿದರು. 750 ಅಡಿ ಎತ್ತರದಲ್ಲಿ ಬಿಸಿ ಗಾಳಿಯ ಬಲೂನ್‌ನಲ್ಲಿ ನಡೆದ ಆ ಮದುವೆ ಲಿಮ್ಕಾ ಬುಕ್‌ ಆಫ್ ರೆಕಾರ್ಡ್ಸ್‌ ಸೇರಿತು. ಈಗ ಅವರಿಗೆ 9 ವರ್ಷದ ಇಬ್ಬರು ಅವಳಿ ಗಂಡುಮಕ್ಕಳಿದ್ದಾರೆ.
– – –
– 9 ಗಜದ ಸೀರೆ ಉಟ್ಟು ಆಗಸದಿಂದ ಜಿಗಿತ
– 21 ವಯಸ್ಸಿನಲ್ಲಿ ಉತ್ತರ ಉತ್ತರ ಧ್ರುವದಲ್ಲಿ 2,400 ಅಡಿಯಿಂದ ಜಿಗಿತ
– 750 ಅಡಿ ಎತ್ತರದಲ್ಲಿ ಬಿಸಿ ಗಾಳಿಯ ಬಲೂನ್‌ನಲ್ಲಿ ಶೀತಲ್‌ ಮದ್ವೆ
– 2019 ಮುಂದಿನ ವರ್ಷ ಹಿಮಾಲಯ, ಅಂತರಿಕ್ಷದಿಂದ ಜಂಪ್‌ ಮಾಡ್ತಾರೆ
– 13000 ಥಾಯ್ಲೆಂಡ್‌ನ‌ಲ್ಲಿ ಸೀರೆಯುಟ್ಟು, ಇಷ್ಟು ಅಡಿಯಿಂದ ಜಿಗಿದರು

ನನ್ನ ಸೀರೆ ಜಿಗಿತ ಭಾರತೀಯ ನಾರಿಯರಿಗೆ ಸಮರ್ಪಣೆ. ಮುಂದಿನ ವರ್ಷ ಹಿಮಾಲಯ ಮತ್ತು ಅಂತರಿಕ್ಷದಿಂದ ಜಿಗಿಯಲು ಸಿದ್ಧತೆ ನಡೆಸುತ್ತಿದ್ದೇನೆ.
– ಶೀತಲ್‌ ಮಹಾಜನ್‌, ಸ್ಕೈ ಡೈವರ್‌

– ಪ್ರಿಯಾಂಕಾ ಎನ್

Advertisement

Udayavani is now on Telegram. Click here to join our channel and stay updated with the latest news.

Next