ಶಿರಸಿ: ಗ್ರಾಮೀಣ ಜನರ ಆರೋಗ್ಯ ಸೇವೆಯಲ್ಲಿ ನಿರತವಾಗಿರುವ ಸ್ಕೊಡ್‌ವೆಸ್ ಸಂಸ್ಥೆ ಆರೋಗ್ಯ ಇಲಾಖೆ ನೆರವಿನೊಂದಿಗೆ “ಟೀಮ್ ಸಂಜೀವಿನಿ’ ಸಂಚಾರಿ ಆರೋಗ್ಯ ಘಟಕಗಳನ್ನು ಆರಂಭಿಸಿ ತುರ್ತುಸೇವೆ ನೀಡಲು ಸಜ್ಜಾಗಿದೆ. ಕಳೆದ ವರ್ಷ ಕೊಡಗಿನಲ್ಲಿ ಭಾರೀ ಭೂ ಕುಸಿತ ಆದಾಗಲೂ ಸ್ಪಂದಿಸಿದ್ದ ಸ್ಕೊಡ್‌ವೆಸ್ ಈಗ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದವರಿಗೆ ನೆರವು ನೀಡಲು ಮುಂದಾಗಿದೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗುರುವಾರ ಹಸಿರು ನಿಶಾನೆ ತೋರಿದ್ದು, ಸ್ಕೊಡ್‌ವೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಉಪಸ್ಥಿತರಿದ್ದರು.
ಕಾರ್ಯ ಹೇಗೆ?: ಸೇವೆ ಅವಶ್ಯಕತೆ ಇರುವವರು 08384-236398, 9900195285 ಸಂಖ್ಯೆಗೆ ಬೆಳಗ್ಗೆ 8ರಿಂದ ಸಂಜೆ 5ರೊಳಗೆ ಕರೆ ಮಾಡಿದರೆ ವೈದ್ಯರ ತಂಡ ಮನೆ ಬಾಗಿಲಿಗೆ ಬರಲಿದೆ. ವೈದ್ಯರು, ನರ್ಸ್‌ಗಳು, ಫಾರ್ಮಸಿಸ್ಟ್ ಗಳು, ಲ್ಯಾಬ್‌ಟೆಕ್ನಿಶಿಯನ್ಸ್, ಆರೋಗ್ಯ ಸಹಾಯಕರುಹಾಗೂ ಸ್ವಯಂ ಸೇವಕರು ಸೇವೆ ಸಲ್ಲಿಸುತ್ತಿದ್ದಾರೆ. ಎರಡು ಆಂಬ್ಯುಲನ್ಸ್‌ಗಳು, 5 ಬುಲೆಟ್ ಬೈಕ್ ಹಾಗೂ 1ಬೊಲೆರೊಜೀಪ್ ಬಳಸಲಾಗುತ್ತಿದೆ. ಮಧುಮೇಹ-ರಕ್ತದೊತ್ತಡ ಪರೀಕ್ಷೆ, ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವರ ಅನುಪಾಲನ ಸೇವೆ, ಆರೋಗ್ಯ ಸಲಹೆ, ತೀವ್ರ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಆಸ್ಪತ್ರೆಗಳಿಗೆ ಸಾಗಿಸಲು ಸಹಾಯ ಮಾಡುವುದು ಈ ಸಂಸ್ಥೆಯ ಪ್ರಮುಖ ಆಶಯ. ದೂರವಾಣಿ ಮೂಲಕವೂ ತಜ್ಞ ವೈದ್ಯರ ಆರೋಗ್ಯ ಸಲಹೆಯನ್ನು ಒದಗಿಸಲು ತೀರ್ಮಾನಿಸಿದೆ.