Advertisement

ಚರ್ಮಗಂಟು ರೋಗ-ಬೇಡ ಆತಂಕ: ಪ್ರಭು ಚವ್ಹಾಣ

06:41 PM Dec 20, 2022 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣದಲ್ಲಿ ಅದರ ಮಾಲೀಕರಿಗೆ ಆಗುವ ಆರ್ಥಿಕ ನಷ್ಟ ತಪ್ಪಿಸಲು ಪರಿಹಾರ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ ಹೇಳಿದರು.

Advertisement

ಬೆಳಗಾವಿ ತಾಲೂಕಿನ ಖನಗಾವಿ ಬಿ.ಕೆ, ಖನಗಾವಿ ಕೆ.ಹೆಚ್‌ ಮತ್ತು ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮಗಳಲ್ಲಿ ಚರ್ಮಗಂಟು ರೋಗ ಪೀಡಿತ ಜಾನುವಾರುಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 43000ಕ್ಕೂ ಮೇಲ್ಪಟ್ಟ ಜಾನುವಾರುಗಳು ಚರ್ಮಗಂಟು ರೋಗಪೀಡಿತವಾಗಿದ್ದು, ಉತ್ತಮ ಚಿಕಿತ್ಸೆಯಿಂದ 25,000ಕ್ಕೂ ಹೆಚ್ಚು ಜಾನುವಾರು ಗುಣಮುಖ ಹೊಂದಿವೆ. ಇನ್ನುಳಿದ ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಪತ್ತೆಯಾಗಿದ್ದು, 1.75 ಲಕ್ಷಕ್ಕೂ ಮೇಲ್ಪಟ್ಟ ಜಾನುವಾರುಗಳಲ್ಲಿ ಚೇತರಿಕೆ ಕಂಡು ಬಂದಿದೆ. ರೈತರು ಆತಂಕಕ್ಕೆ ಒಳಗಾಗದೇ ಸರ್ಕಾರದೊಂದಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ರಾಜ್ಯಾದ್ಯಂತ 67 ಲಕ್ಷ ರಾಸುಗಳಿಗೆ ಲಸಿಕೆ ನೀಡಲಾಗಿದ್ದು, ಲಭ್ಯವಿರುವ 23 ಲಕ್ಷ ಡೋಸ್‌ ಲಸಿಕೆಯನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತಿದೆ. ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು ರೈತರಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಇದೇ ಸಂದರ್ಭದಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಅವರು, ಖನಗಾವಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಪಶುಸಂಗೋಪನೆ ಇಲಾಖೆಯಿಂದ ಕೈಗೊಂಡ ಔಷಧೋಪಚಾರ, ಚಿಕಿತ್ಸೆ ಮತ್ತು ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದು, ಸರ್ಕಾರ ನಿಮ್ಮೊಂದಿಗಿದೆ ಎಂದು ಅಭಯ ನೀಡಿದರು.

Advertisement

ರೈತರಿಂದ ಜಾನುವಾರುಗಳ ಆರೋಗ್ಯ ಸಮಸ್ಯೆ ಕುರಿತು ಕರೆ ಬಂದ ತಕ್ಷಣ ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಪಶು ಸಂಜೀವಿನಿ ಆಂಬ್ಯುಲೆನ್ಸ್‌ ವಾಹನದಲ್ಲಿ ತೆರಳಿ ತುರ್ತು ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ಪಶು ವೈದ್ಯಾಧಿಕಾರಿಗಳ ಮೊಬೆ„ಲ್‌ ಸ್ವೀಚ್‌ ಆಫ್‌ ಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರಲ್ಲದೆ ಜಾನುವಾರುಗಳ ಆರೋಗ್ಯ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡುವ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಯಾವುದೇ ಮುಲಾಜಿಲ್ಲದೇ ಅಮಾನತು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಹುಕ್ಕೇರಿ ತಾಲ್ಲೂಕಿನ ಬೆಳವಿಯಲ್ಲಿರುವ ಜಿಲ್ಲಾ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಡಿಸೆಂಬರ್‌ ಅಂತ್ಯದಲ್ಲಿ ಜಿಲ್ಲಾ ಸರ್ಕಾರಿ ಗೋಶಾಲೆ ಲೋಕಾರ್ಪಣೆಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಇಲಾಖೆ ನಿರ್ದೇಶಕ ಡಾ.ಮಂಜುನಾಥ್‌ ಪಾಳೇಗಾರ್‌, ಬೆಳಗಾವಿ ಜಿಲ್ಲಾ ಉಪ ನಿರ್ದೇಶಕ ಡಾ.ರಾಜು ಕೂಲೇರ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಡಾ| ಪರಮೇಶ್‌ ನಾಯ್ಕ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ನಾಯಕ ಉಮೇಶ್‌ ಕತ್ತಿ ಅವರ
ಬೆಲ್ಲದಬಾಗೇವಾಡಿ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next