Advertisement

ಜಾನುವಾರುಗಳಲ್ಲಿ ಹರಡುತ್ತಿದೆ ಚರ್ಮ ಗಂಟು ರೋಗ

03:05 PM Sep 19, 2022 | Team Udayavani |

ಚಿಕ್ಕೋಡಿ: ದೇಶದ ಹಲವು ರಾಜ್ಯಗಳಲ್ಲಿ ರೈತರಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ದನಕರುಗಳ ಚರ್ಮ ಗಂಟು ರೋಗ ಇದೀಗ ರಾಜ್ಯದ ಗಡಿ ಭಾಗಕ್ಕೂ ಹರಡಿಕೊಂಡಿದ್ದು, ಇದರಿಂದ ರೈತಾಪಿ ವರ್ಗದ ಜನರಲ್ಲಿ ಆತಂಕ ಹೆಚ್ಚಿದೆ.

Advertisement

ನಿಪ್ಪಾಣಿ ತಾಲೂಕಿನ ಗಡಿ ಗ್ರಾಮಗಳಾದ ಮಾಣಕಾಪೂರ ಮತ್ತು ಇನ್ನಿತರ ಗ್ರಾಮಗಳಲ್ಲಿ ಸುಮಾರು 50 ಕ್ಕೂ ಹೆಚ್ಚಿನ ದನಕರುಗಳಿಗೆ ಈ ರೋಗ ಅಂಟಿಕೊಂಡಿದ್ದು, ರಾಜ್ಯದ ಗಡಿ ಭಾಗದ ಮಹಾರಾಷ್ಟ್ರದಲ್ಲಿ ಈ ರೋಗ ಹೆಚ್ಚಿನ ಪ್ರಮಾಣದಲ್ಲಿ ಉಲ್ಬಣಗೊಂಡಿರುವ ಪರಿಣಾಮ ಈಗಾಗಲೇ ಗಡಿ ಗ್ರಾಮವಾದ ರಾಂಗೋಳೆಯಲ್ಲಿ ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ.

ಆಕಳು ಮತ್ತು ಎಮ್ಮೆಗಳಲ್ಲಿ ಈ ರೋಗ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿದೆ. ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರದ ನಂತರ ಇದೀಗ ಕರ್ನಾಟಕಕ್ಕೆ ಹಬ್ಬುತ್ತಿದೆ. ಕೂಡಲೇ ಪಶುಸಂಗೋಪನಾ ಇಲಾಖೆ ಸೂಕ್ತ ಗಮನಹರಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

ಏನಿದು ರೋಗ: ಜಾನುವಾರು ಚರ್ಮದ ಮೇಲೆ ಗಂಟಿನ ತರಹ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ತಕ್ಷಣ ಚಿಕಿತ್ಸೆ ನೀಡಿದರೆ ದನಕರುಗಳು ಗುಣಮುಖವಾಗುತ್ತವೆ. ನಿರ್ಲಕ್ಷ ಮಾಡಿದರೆ ದನಗಳು ಮೃತಪಡುವ ಸಾಧ್ಯತೆಗಳು ಹೆಚ್ಚು.

ರೋಗದ ಪ್ರಮುಖ ಲಕ್ಷಣಗಳು: ಪ್ರಾಣಿಗಳ ಕಣ್ಣು ಮತ್ತು ಮೂಗಿನಿಂದ ನೀರು ಬರುತ್ತದೆ. ಮೂಗಿನಿಂದ ಊತ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲಿ ಪ್ರಾಣಿಗಳಿಗೆ ಜ್ವರ ಬರುತ್ತದೆ ಮತ್ತು ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಮೇವು ತಿನ್ನುವುದು, ನೀರು ಕುಡಿಯುವುದು ಕಡಿಮೆಯಾಗುತ್ತದೆ. ಪ್ರಾಣಿಗಳ ತಲೆ, ಕುತ್ತಿಗೆ, ಹಣೆ, ಎದೆ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ಬಾಯಿ ಹುಣ್ಣುಗಳು ಉಂಟಾಗಿ ಆಹಾರ ತಿನ್ನಲು ಕಷ್ಟವಾಗುತ್ತದೆ. ಇದರಿಂದ ಪ್ರಾಣಿಗಳು ಮೃತಪಡುವ ಸಾಧ್ಯತೆ ಇರುತ್ತದೆ.

Advertisement

ಸೋಂಕಿತ ಪ್ರಾಣಿಗಳನ್ನು ಪ್ರತ್ಯೇಕಿಸಿ: ಪಶುಸಂಗೋಪನಾ ಇಲಾಖೆ ವೈದ್ಯರ ಪ್ರಕಾರ, ಸೋಂಕಿತ ಪ್ರಾಣಿಗಳನ್ನು ಆರೋಗ್ಯಕರ ಪ್ರಾಣಿಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲು ರೈತರು ಮುಂದಾಗಬೇಕು. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಆರೋಗ್ಯವಂತ ಪ್ರಾಣಿಗಳೂ ಸೋಂಕಿತ ಪ್ರಾಣಿಗಳ ಸಂಪರ್ಕಕ್ಕೆ ಬಂದರೆ ರೋಗಕ್ಕೆ ತುತ್ತಾಗಬಹುದು. ಆರೋಗ್ಯಕರ ಪ್ರಾಣಿಗಳಿಗೆ ಉಳಿದ ನೀರು ಅಥವಾ ಸೋಂಕಿತ ಪ್ರಾಣಿಗಳ ಮೇವನ್ನು ತಿನ್ನಲು ಅನುಮತಿಸಬಾರದೆಂದು ಮಾಂಗೂರದ ಪಶು ವೈದ್ಯ ಅರವಿಂದ ಕಾಮಿರೆ ರೈತರಿಗೆ ಸಲಹೆ ನೀಡಿದ್ದಾರೆ.

ಚರ್ಮದ ಗಂಟು ರೋಗ ಸಾಂಕ್ರಾಮಿಕ ರೋಗವಾಗಿದೆ. ಜಾನುವಾರಗಳಲ್ಲಿ ಈ ರೋಗದ ಲಕ್ಷಣ ಕಂಡು ಬಂದರೇ ತಕ್ಷಣ ಆ ಜಾನುವಾರನ್ನು ಪ್ರತ್ಯೇಕಿಸಬೇಕು. ಕೂಡಲೇ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಬೇಕು. ಈಗಾಗಲೇ ಇದನ್ನು ತಡೆಯಲು ಜಾನು‌ವಾರಗಳ ಸಂತೆಯನ್ನು ಜಿಲ್ಲಾಧಿಕಾರಿಗಳು ರದ್ದು ಮಾಡಿದ್ದಾರೆ. ರೈತರು ಸದ್ಯದ ಪರಿಸ್ಥಿಯಲ್ಲಿ ಜಾನುವಾರುಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬಾರದು. ಡಾ| ಸದಾಶಿವ ಉಪ್ಪಾರ, ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಚಿಕ್ಕೋಡಿ

Advertisement

Udayavani is now on Telegram. Click here to join our channel and stay updated with the latest news.

Next