ಬಳ್ಳಾರಿ: ಹೊರವಲಯದ ಹಲಕುಂದಿ ಮುಖ್ಯರಸ್ತೆಯ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಕಾನೂನು ಬಾಹಿರವಾಗಿ ವನ್ಯಜೀವಿಗಳ ಚರ್ಮ, ಕೊಂಬು, ಚಿಪ್ಪು, ಮೂಳೆಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳ ಬಳ್ಳಾರಿ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.
ಸಂಡೂರು ತಾಲೂಕಿನ ಎಚ್.ಕೆ. ವೀರೇಶ್, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆಯ ಹುಲಿಕುಂಟೆಪ್ಪ ಬಂಧಿತ ಆರೋಪಿಗಳು.
ಆರೋಪಿಗಳಿಬ್ಬರು ವನ್ಯಜೀವಿಗಳ ಚರ್ಮ, ಕೊಂಬು, ಚಿಪ್ಪು, ಮೂಳೆ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಳ್ಳಾರಿ ಘಟಕದ ಪಿಎಸ್‌ಐ ಎಸ್.ವಿ. ಮಾರುತಿ ಮತ್ತು ಸಿಬ್ಬಂದಿ ದಾಳಿ ನಡೆಸಿ, ಆರೋಪಿಗಳಿಬ್ಬರನ್ನು ಬಂಧಿಸುವುದರ ಜತೆಗೆ ಕೃಷ್ಣಮೃಗದ ತಲೆಬುರುಡೆ ಸಮೇತ ಎರಡು ಕೊಂಬುಗಳು, ಕೃಷ್ಣಮೃಗದ ಚರ್ಮ, ಚಿಪ್ಪು ಹಂದಿ ಚಿಪ್ಪುಗಳು, ಅದರ ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಬಳ್ಳಾರಿ ಅರಣ್ಯ ಸಂಚಾರಿ ದಳದಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.