Advertisement

ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯ ಪೂರೈಕೆ: ಸಚಿವ ಅಶ್ವತ್ಥನಾರಾಯಣ

03:23 PM Jun 28, 2022 | Team Udayavani |

ಬೆಂಗಳೂರು: ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯ ತರಬೇತಿ ನೀಡಲು ಸರ್ಕಾರ ಬದ್ಧವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನೂ ಉತ್ಪಾದಕನನ್ನಾಗಿ ಮಾಡುವ ದಿಸೆಯಲ್ಲಿ ಅವಕಾಶಗಳನ್ನು ಸೃಷ್ಟಿಸುವುದೇ ಸರ್ಕಾರದ ಗುರಿಯಾಗಿದೆ ಎಂದು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಗಳವಾರ ಹೇಳಿದರು.

Advertisement

ಕೌಶಲ್ಯ ಕರ್ನಾಟಕ ಮತ್ತು ದೇಶಪಾಡೆ ಫೌಂಡೇಷನ್ ವತಿಯಿಂದ ಐಟಿ/ ಐಟಿಇಎಸ್ ವಲಯದ ಉದ್ಯಮ ನಾಯಕರು ಮತ್ತು ನವೋದ್ಯಮಿಗಳೊಂದಿಗೆ ‘ಕರ್ನಾಟಕವನ್ನು ಕೌಶಲ್ಯಪೂರ್ಣವಾಗಿಸುವುದು’ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯಮ ವಲಯದೊಂದಿಗೆ ಸಹಭಾಗಿತ್ವದಲ್ಲಿ ಕಾರ್ಯಾಚರಿಸಲು ಸರ್ಕಾರ ಒತ್ತು ನೀಡಲಿದೆ ಎಂದರು.

ಹಿತಾಸಕ್ತಿದಾರರೊಂದಿಗೆ ಸಮಾಲೋಚಿಸಿ ಮುನ್ನಡೆಯಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಸರ್ಕಾರವು ಯಾವುದೇ ಅಧಿಕಾರದ ಹಸ್ತಕ್ಷೇಪ ನಡೆಸದೇ ಸುಗಮ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಲಿದೆ. ಉದ್ಯೋಗ, ಕೌಶಲ, ಉದ್ಯಮಶೀಲತೆ ಹೀಗೆ ಎಲ್ಲ ವಲಯಗಳಲ್ಲೂ ತರಬೇತಿ ಕೊಡುವ ಯೋಜನೆ ಹೊಂದಿದೆ ಎಂದು ವಿವರಿಸಿದರು.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಉದ್ಯೋಗಾವಕಾಶ ಹೆಚ್ಚಾಗಿದೆ ಎಂದ ಅವರು, ಇದೇ ವೇಳೆ ಪ್ರತಿಯೊಂದು ಕಂಪನಿಯೂ ಸರ್ಕಾರದ ‘ಸ್ಕಿಲ್ ಪೋರ್ಟಲ್’ಗೆ ನೋಂದಣಿಯಾಗಬೇಕು. ಹೀಗಾದಾಗ, ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಎಲ್ಲೆಲ್ಲಿವೆ ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ಅದನ್ನು ಆಧರಿಸಿ ಉದ್ಯೋಗಾಕಾಂಕ್ಷಿಗಳು ಶುಲ್ಕಾಧಾರಿತ ತರಬೇತಿ, ಉಚಿತ ತರಬೇತಿ, ಸರ್ಕಾರಿ ತರಬೇತಿ ಯಾವುದನ್ನು ಬೇಕಾದರೂ ಪಡೆದುಕೊಳ್ಳಬಹುದು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಕೂಡ ಕೌಶಲಗಳಿಗೆ ಒತ್ತು ಕೊಡುತ್ತದೆ. ನಾವು ರಾಜ್ಯದಲ್ಲಿ ಎನ್ ಇಪಿ ಅಳವಡಿಸಿರುವ ಮಾದರಿಯನ್ನು ದೇಶದ ಬೇರೆ ರಾಜ್ಯಗಳು ಅನುಸರಿಸುತ್ತಿವೆ. ನಾವು ಅನುಷ್ಠಾನಗೊಳಿಸಿದ ಎಲ್ಎಂಎಸ್ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಕಲಿಕಾ ರೀತಿ ಸಂಪೂರ್ಣ ಬದಲಾಗಿದೆ. ಡಿಜಿಟಲ್ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ಆರೋಗ್ಯ ಮತ್ತು ಸ್ವಾಸ್ಥ್ಯ, ಇವುಗಳನ್ನು ಕಡ್ಡಾಯಗೊಳಿಸಲಾಗಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಸಂಯೋಜನೆಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

Advertisement

ಇದನ್ನೂ ಓದಿ:ಮುಂಬೈ: ಅರಬ್ಬಿ ಸಮುದ್ರದ ನಡುವೆ ಒಎನ್ ಜಿಸಿ ಹೆಲಿಕಾಪ್ಟರ್ ಪತನ, 6 ಮಂದಿ ರಕ್ಷಣೆ

ರಾಜ್ಯದ ಕಾಲೇಜುಗಳಲ್ಲಿ ಒಟ್ಟಾರೆ ಪ್ರವೇಶಾತಿ ಅನುಪಾತ (ಜಿಇಆರ್) ಕಳೆದ 3 ವರ್ಷಗಳಲ್ಲಿ ಶೇ 6ಕ್ಕಿಂತಲೂ ಜಾಸ್ತಿಯಾಗಿದೆ. ಪಾಲಿಟೆಕ್ನಿಕ್ ಗೆ ಸೇರುವವರ ಸಂಖ್ಯೆ 30,000ದಿಂದ 75,000ಕ್ಕೆ ಜಾಸ್ತಿಯಾಗಿದೆ, ಜಿಟಿಟಿಸಿ ಮತ್ತು ಐಟಿಟಿ ಜನಪ್ರಿಯಗೊಂಡಿವೆ. ಒಟ್ಟಾರೆ, ವೈಟ್ ಕಾಲರ್ ವಲಯವಿರಲಿ ಅಥವಾ ಬ್ಲೂ ಕಾಲರ್ ವಲಯವಿರಲಿ ರಾಜ್ಯದಲ್ಲಿ ಮಾನವ ಸಂಪನ್ಮೂಲದ ಕೊರತೆ ಇರಬಾರದು ಎಂಬುದೇ ಸರ್ಕಾರದ ಧ್ಯೇಯವಾಗಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ಕಾರ್ಯಕ್ರಮದಲ್ಲಿ ದೇಶಪಾಂಡೆ ಪ್ರತಿಷ್ಠಾನದ ಸ್ಥಾಪಕ ಗುರುರಾಜ್ ದೇಶಪಾಂಡೆ, ಸಿಒಒ ಪಿ.ಎನ್.ನಾಯಕ್, ಸಿಇಒ ಸುನೀಲ್, ಕೌಶಲ್ಯಾಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ
ಅಶ್ವಿನ್ ಗೌಡ, ಉದ್ಯಮಿ ನವನೀತ್ ಸನ್ಯಾಲ್ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next