Advertisement

ಹೊಸ ಶಿಕ್ಷಣ ನೀತಿ ಜತೆ ಕೌಶಲ್ಯಾಭಿವೃದ್ಧಿಗೂ ಆದ್ಯತೆ ಅಗತ್ಯ

06:28 PM Nov 13, 2021 | Team Udayavani |

ಹಾನಗಲ್ಲ: ಇಂದು ಹೊಸ ಶಿಕ್ಷಣ ನೀತಿ ಅತ್ಯವಶ್ಯಕವಾಗಿದೆ. ಇದರೊಂದಿಗೆ ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ಶುಕ್ರವಾರ ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕ-ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಕೌಶಲ್ಯಾಧಾರಿತ ಶಿಕ್ಷಣದಿಂದ ಉದ್ಯೋಗಾವಕಾಶಗಳು ದೊರೆಯುತ್ತವೆ. ನೌಕರಿಗಾಗಿ ಅಲೆಯುವ ಸಮಸ್ಯೆ ಇಲ್ಲ. ಹೀಗಾಗಿ, ಕೌಶಲ್ಯಕ್ಕೆ ಒತ್ತು ನೀಡುವ ಅವಶ್ಯಕತೆ ಇದೆ. ನಾವು ಮಾಡುವ ಪ್ರತಿಯೊಂದು ಕಾರ್ಯ ಸರಿಯಾದ ಮಾರ್ಗದಲ್ಲಿ ಇರಬೇಕು. ನ್ಯಾಯ, ನೀತಿ, ಧರ್ಮದ ಚೌಕಟ್ಟಿನಲ್ಲಿ ನಡೆಯುವವರಾಗಿರಬೇಕು. ಯಾರಿಗೂ ಕೆಟ್ಟದ್ದನ್ನು ಮಾಡದಿರುವುದೇ ಧರ್ಮ. ಜೀವನದಲ್ಲಿ ಗೆಲ್ಲಲೇಬೇಕಾದರೆ ಸದಾ ಜಾಗರೂಕನಾಗಿರಬೇಕು. ಹಾಗೆಯೇ, ನಿರಂತರವಾಗಿ ಕಾಯಕದಲ್ಲಿ ತೊಡಗಿರಬೇಕು ಎಂದರು.

ಮುಖ್ಯ ಅತಿಥಿಗಳಾದ ಶಿಗ್ಗಾವಿ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಬಾಂಧವ್ಯ ದೂರ ಸರಿಯುತ್ತಿದ್ದು, ಅದಕ್ಕೆ ಶಿಕ್ಷಣದಲ್ಲಿ ಆಗಿರುವ ಬದಲಾವಣೆಯೂ ಒಂದು ಕಾರಣ. ವಿದ್ಯಾರ್ಥಿ ಶಿಕ್ಷಕರ ಸಂಬಂಧದ ಅರಿವು ಮೂಡಿಸಬೇಕಾಗಿದೆ. ಶಿಕ್ಷಕ ಹೊಸದನ್ನು ಕಾಣುವ, ಹೊಸದನ್ನು ಕಟ್ಟುವಲ್ಲಿ ಮನೋಜ್ಞನಾಗಿರುತ್ತಾನೆ. ಶಿಕ್ಷಕರು ಸ್ವಯಂ ಸೇವಕರಲ್ಲದೆ ಸಹಾನೂಭೂತಿಗಳಾಗಿರಬೇಕು. ಹಾಗೆಯೇ, ಧನಾತ್ಮಕ ಚಿಂತನೆ ಜೊತೆಗೆ ಕಲಾ ಆರಾಧಕರಾಗಿರಬೇಕು ಎಂದರು.

ಕರ್ನಾಟಕ ಲೊಕಾಯುಕ್ತ ಹಾವೇರಿ ಡಿವೈಎಸ್‌ಪಿ ಡಾ. ಬಿ.ಪಿ. ಚಂದ್ರಶೇಖರ ಮಾತನಾಡಿ, ಇತಿಹಾಸದ ವಿಚಾರಗಳ ಜೊತೆಗೆ ಶಿಕ್ಷಕ ಕೂಡಿಕೊಂಡು ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ನಮ್ಮ ಆದರ್ಶಗಳು ಮುಂದಿನ ಪಿಳಿಗೆಗೆ ಮಾದರಿಯಾಗುವಂತಿರಬೇಕು. ಹಾಗೆಯೇ, ಶಿಕ್ಷಕ ಬೋಧನೆ ಮಾಡುವುದರ ಜೊತೆಗೆ ಸಮಾಜ ಸೇವಾ ಕಾರ್ಯ ಮೈಗೂಡಿಸಿಕೊಂಡಿರಬೇಕು ಎಂದರು.

ಕವಿವಿಯ ಎರಡನೇ ರ್‍ಯಾಂಕ್‌ ವಿಜೇತೆ ಗೌರಮ್ಮ ಕೊಂಡೋಜಿ ಮಾತನಾಡಿ, ಸಂಸ್ಥೆಯ ಹೆಮ್ಮೆಯ ಸಂಸ್ಥಾಪಕರಾದ ದಿವಂಗತ ಸಿ.ಎಂ. ಉದಾಸಿ ಅವರ ಆಡಳಿತದಲ್ಲಿ ಈ ಮಹಾವಿದ್ಯಾಲಯ ಶಿಸ್ತು, ಸಂಯಮತೆಯ ಸಂಕೇತವಾಗಿದೆ ಎಂದು ಹೇಳಿದರು.

Advertisement

ನಂತರ ನಾಲ್ಕನೇ ರ್‍ಯಾಂಕ್‌ ವಿಜೇತೆ ಸೌಮ್ಯ ಸುಣಗಾರ ಹಾಗೂ ಒಂಬತ್ತನೇ ರ್‍ಯಾಂಕ್‌ ವಿಜೇತೆ ನಯನಾ ಎಸ್‌. ಅವರು ಅನಿಸಿಕೆಗಳನ್ನು ಹಂಚಿಕೊಂಡರು. ಪೂರ್ಣಿಮಾ ಮತ್ತು ಸಂಘಡಿಗರು ವಚನ ನೃತ್ಯ ಮಾಡಿದರು. ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್‌ ಸಲಹಾ ಮಂಡಳಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಡಾ. ಹರೀಶ ಟಿ ತಿರಕಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ಸದಾಶಿವಪ್ಪ ಎನ್‌. ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ  ಬೋಧಿಸಿದರು. ನಾಗರಾಜ ಬಡಿಗೇರ ಸ್ವಾಗತಿಸಿ, ಮಂಜುನಾಥ ಕೋಟೂರ ನಿರೂಪಿಸಿ, ಲಿಂಗರಾಜ ಬೆಳ್ಳಿಕಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next