Advertisement

ಮೌಲ್ಯದ ಜತೆ ಕೌಶಲ್ಯಾಧಾರಿತ ಶಿಕ್ಷಣ ಅಗತ್ಯ

12:20 PM Aug 08, 2018 | |

ಬೆಂಗಳೂರು: ಕೌಶಲ್ಯತೆ ಇಲ್ಲದ ಮೌಲ್ಯಾಧಾರಿತ ಶಿಕ್ಷಣದಿಂದ ಯಾವ ಪ್ರಯೋಜನವೂ ಇಲ್ಲ. ಕಾಲೇಜು ಪಠ್ಯಕ್ರಮದಲ್ಲಿ ಕೌಶಲಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

Advertisement

ವಿ.ಎಚ್‌.ಡಿ. ಕೇಂದ್ರೀಯ ಗೃಹ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ  ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಾಂಸ್ಕೃತಿಕ ಸಂಘ ಹಾಗೂ ವಿವಿಧ ಸಂಘಗಳ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದ ಅವರು, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ಸಿಗುತ್ತಿಲ್ಲ ಎಂದು ತಿಳಿಸಿದರು.

ರಾಜ್ಯದ 100ಕ್ಕೂ ಅಧಿಕ ಕಾಲೇಜಿನಲ್ಲಿ ಸ್ವಂತ ಕಟ್ಟಡ ಇಲ್ಲ. ಅನೇಕ ಕಾಲೇಜುಗಳಲ್ಲಿ ಲ್ಯಾಬ್‌, ಶೌಚಾಲಯ, ತರಗತಿ ಕೊಠಡಿ ಸೇರಿದಂತೆ ಮೂಲ ಸೌಕರ್ಯ ಇಲ್ಲ.  ಆದರೂ ಕಾಲೇಜಿನ ಪ್ರಾಧ್ಯಾಪಕರಿಗೆ 70 ಸಾವಿರದಿಂದ 2 ಲಕ್ಷ ರೂ.ಗಳ ವರೆಗೂ ವೇತನ ನೀಡುತ್ತೇವೆ. ಇಷ್ಟಾದರೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಈ ಬಗ್ಗೆ ಪ್ರಾಧ್ಯಾಪಕರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಖಾಸಗಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಆಗಾಗ ಪಠ್ಯಕ್ರಮ ಪರಿಷ್ಕರಣೆಯಾಗುತ್ತದೆ. ಆದರೆ, ಸರ್ಕಾರಿ ಕಾಲೇಜಿನಲ್ಲಿ ಹತ್ತು ವರ್ಷಗಳಿಂದ ಪಠ್ಯಕ್ರಮದ ಪರಿಷ್ಕರಣೆ ಸರಿಯಾಗಿ ಆಗಿಲ್ಲ. ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ಶಿಕ್ಷಣ ನೀಡಬೇಕು. ಅದಕ್ಕಾಗಿ ಪಠ್ಯಕ್ರಮದ ಪರಿಷ್ಕರಣೆ ಅಗತ್ಯವಿದೆ. ಕೌಶಲಾಧಾರಿತ ಶಿಕ್ಷಣ ಇಲ್ಲದೇ ಮೌಲ್ಯಾಧಾರಿತ ಶಿಕ್ಷಣ ನೀಡದರೇ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದರು.

ಕಾಲೇಜುಗಳನ್ನು ಮದ್ಯಪಾನ, ಧೂಮಪಾನ ಸೇರಿದಂತೆ ಎಲ್ಲ ರೀತಿಯ ವ್ಯಸನ ಮುಕ್ತ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ.  ಮುಂದಿನ ವರ್ಷದಿಂದ ಈ ಸಂಬಂಧ ಕೆಲವು ಕೋರ್ಸ್‌ಗಳನ್ನು ಅನುಷ್ಠಾನಕ್ಕೆ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

Advertisement

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಪ್ರತಿಯೊಬ್ಬರು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು. ಕಾಲೇಜಿನಲ್ಲಿ ಜಾತಿ ವ್ಯವಸ್ಥೆ ಇರಬಾರದು. ಎಲ್ಲರ ಸಂಪ್ರದಾಯ, ಆಚರಣೆ ಗೌರವಿಸಬೇಕು. ಆದರೆ ದೇಶ ಕಟ್ಟಲು ಏನು ಬೇಕು ಎಂಬದನ್ನು ಯೋಚಿಸಬೇಕಿದೆ. ವಿದ್ಯಾರ್ಥಿಗಳು ಪೂರ್ವ ಗ್ರಹಪೀಡಿತರಾಗಬಾರದು ಎಂದು ಸಲಹೆ ನೀಡಿದರು.

ಬಿಬಿಎಂಪಿ ಸದಸ್ಯೆ ಆರ್‌.ಜೆ.ಲತಾ ರಾಥೋಡ್‌, ಪ್ರಾಂಶುಪಾಲರಾದ ಪ್ರೊ.ನಜೀಬಾ ಖಾನಂ, ಸಾಂಸ್ಕೃತಿಕ ಹಾಗೂ ಕನ್ನಡ ಸಂಘದ ಸಂಚಾಲಕಿ ಡಾ. ಸೆಲ್ವ ಕುಮಾರಿ, ಕ್ರೀಡಾ ವಿಭಾಗದ ಸಂಚಾಲಕ ಡಾ. ಜಗದೀಶ್‌ ಕುಮಾರ್‌, ಎನ್‌ಸಿಸಿ ಅಧಿಕಾರಿ ಡಾ. ನೀತಾ ಪಠಾಣ್‌,  ನಟಿ ಅಶ್ವಿ‌ನಿ ಶೆಟ್ಟಿ  ಉಪಸ್ಥಿತರಿದ್ದರು.

ಸಂಪ್ರದಾಯ ಮರೆಯಬೇಡಿ: ನಮ್ಮ ಸಂಪ್ರದಾಯ ಮರೆಯಾಗುತ್ತಿದೆ. ಮಹಿಳೆಯರು ಹಣೆಗೆ ಕುಂಕುಮ ಇಡುತ್ತಿಲ್ಲ. ಹಿಂದೆ ವಿಚ್ಛೇಧನೆ ಎಂಬ ಪದವೇ ಇರಲಿಲ್ಲ. ಈಗ ಪ್ರೀತಿಸಿ ಮದುವೆಯಾಗಿ ಒಂದು ತಿಂಗಳಲ್ಲಿ ವಿಚ್ಛೇಧನೆ ಪಡೆಯುತ್ತಾರೆ. ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ವಿದ್ಯಾರ್ಥಿಗಳು ಎಲ್ಲ ವಿಷಯದಲ್ಲೂ ಎಚ್ಚರದಿಂದ ಇರಬೇಕು. ಪ್ರೀತಿ ಮತ್ತು ಸ್ನೇಹದ ಅರ್ಥ ತಿಳಿದುಕೊಳ್ಳಬೇಕು. ಪೇಲಾದಾಗ ಆತ್ಮಹತ್ಯೆ ಪರಿಹಾರ ಅಲ್ಲ. ನಾನು ಮೈಸೂರು ರಾಜವಂಶಸ್ಥರ ವಿರುದ್ಧ ಸ್ಪರ್ಧಿಸಿ ಸೋತ್ತಿದ್ದೆ, ಆದರೂ, ಛಲ ಬಿಟ್ಟಿಲ್ಲ. ಈಗ ಉನ್ನತ ಶಿಕ್ಷಣ ಸಚಿವನಾಗಿದ್ದೇನೆ ಎಂದು ಸಚಿವ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಬುದ್ಧಿ ಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next