Advertisement

‘ಪಠ್ಯದೊಂದಿಗೆ ಕೌಶಲವೂ ಮುಖ್ಯ’

12:59 PM Feb 18, 2018 | Team Udayavani |

ಪುತ್ತೂರು: ಮಕ್ಕಳ ಎದುರು ಆಕಾಶದಂತಹ ಅನಂತತೆಯನ್ನು ತೆರೆದಿಡಬೇಕು. ಪಠ್ಯದ ತರಬೇತಿ ಮಾತ್ರ ಎನ್ನುವ ಕಲ್ಪನೆಯಿಂದ ಹೊರಬಂದು ಕೌಶಲದ, ಹೊಸ ಚಿಂತನೆಗಳಿಗೆ ಅವಕಾಶವೀಯಬೇಕು ಎಂದು ಕೇಂದ್ರ ಕೌಶಲ ಅಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ ರಾಜ್ಯ ಸಚಿವ ಅನಂತ ಕುಮಾರ್‌ ಹೆಗಡೆ ಹೇಳಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ 57ನೇ ವಿದ್ಯಾಸಂಸ್ಥೆ ನರೇಂದ್ರ ಪ.ಪೂ. ಕಾಲೇಜಿನ ತೆಂಕಿಲದ ಹೊಸ ಕಟ್ಟಡಕ್ಕೆ ಶನಿವಾರ ನಡೆದ ಭೂಮಿ ಪೂಜೆ, ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಜಗತ್ತನ್ನು ಜಯಿಸುವ ಯುವ ಸಮುದಾಯ ನಿರ್ಮಾಣದ ಅಜೆಂಡಾವನ್ನು ಇಟ್ಟುಕೊಂಡು ಕೇಂದ್ರ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ನಮ್ಮ ದೃಷ್ಟಿ ಬದಲಾದರೆ ಎದುರಿನ ದೃಶ್ಯ ಬದಲಾಗುತ್ತದೆ ಎನ್ನುವಂತೆ ಮುಂದಿನ ದಿನಗಳು ಹೇಗಿರಬೇಕು ಮತ್ತು ಹೇಗಿರುತ್ತದೆ ಎನ್ನುವುದನ್ನು ಕಲ್ಪನೆ ಮಾಡಿಕೊಂಡು ಆ ನಿಟ್ಟಿನಲ್ಲಿ ನಾವು ಸಾಗಬೇಕು. ಮುಂದಿನ 25 ವರ್ಷ ಗಳಲ್ಲಿ ಭಾರತ ಜಗತ್ತಿನ ಕೇಂದ್ರವಾಗಿ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು, ಯುವ ಸಮುದಾಯದ ಹೆಜ್ಜೆಗೆ ಭಾರತ ಸರಕಾರ ನೆರವಾಗಲಿದೆ ಎಂದರು.

ಸರ್ವಾಂಗೀಣ ಕೌಶಲ
ಕೇವಲ ಐಕ್ಯೂ ಇದ್ದ ಮಾತ್ರಕ್ಕೆ ವ್ಯಕ್ತಿ ಯಶಸ್ವಿಯಾಗುತ್ತಾನೆ ಅನ್ನಲಾಗದು. ಈ ಕಾರಣದಿಂದ ವಿದ್ಯಾರ್ಥಿಗಳು ಸರ್ವಾಂಗೀಣ ಕೌಶಲದೊಂದಿಗೆ ವಿದ್ಯಾ ಸಂಸ್ಥೆಗಳಿಂದ ಹೊರಹೋಗುವಂತಾಗಬೇಕು. ಮುಂದಿನ ದಿನಗಳಲ್ಲಿ ಕ್ಲಾಸ್‌ರೂಂ ಶಿಕ್ಷಣ ಮರೆಯಾಗಿ ಆನ್‌ಲೈನ್‌, ಇಂಟರ್ಯಾಕ್ಟಿವ್‌, ವರ್ಚುವಲ್‌ ರಿಯಾಲಿಟಿಗೆ ಮಹತ್ವ ಬರುವುದರಿಂದ ಈ ನಿಟ್ಟಿನಲ್ಲಿ ನಮ್ಮ ಯೋಜನೆ, ಚಟುವಟಿಕೆಗಳು ಸಾಗಬೇಕು ಎಂದು ಅಭಿಪ್ರಾಯಿಸಿದರು. 

ಮಕ್ಕಳಿಗೆ ಸವಾಲುಗಳನ್ನು ಕೊಡಿ. ಯಾರೋ ಹೋದ ದಾರಿಯಲ್ಲಿ ನಾವು ಹೋಗಬೇಕು ಎನ್ನುವುದನ್ನು ಕಲಿಸದೆ ಹೊಸ ಕಲ್ಪನೆಗಳನ್ನು ತೆರೆದಿಡಲು ಅವಕಾಶ ನೀಡಬೇಕು. ‌ನಸುಗಳನ್ನು ಮಕ್ಕಳಿಗೆ ಕೊಟ್ಟರೆ ಅವರು ಬೆಳಕಾಗುತ್ತಾ ಸಾಗುತ್ತಾರೆ. ಭವಿಷ್ಯದ ಸಂಕೀರ್ಣತೆಗೆ ಹೊಂದಿಕೊಳ್ಳಲು ಅವಕಾಶಗಳನ್ನು ಮಕ್ಕಳಿಗೆ ತೆರೆದಿಡಬೇಕು ಎಂದು ಅನಂತ್‌ ಕುಮಾರ್‌ ಹೆಗಡೆ ಹೆತ್ತವರಿಗೆ ಹಾಗೂ ಶಿಕ್ಷಕರಿಗೆ ಸಲಹೆ ನೀಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್‌, ನರೇಂದ್ರ ಪ.ಪೂ. ಕಾಲೇಜು ಆಡಳಿತ
ಮಂಡಳಿ ಸಂಚಾಲಕ ಡಿ. ವಿಜಯಕೃಷ್ಣ ಭಟ್‌ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ರೂಪಲೇಖಾ ಸ್ವಾಗತಿಸಿ, ಪ್ರಾಂಶುಪಾಲ ಅನಿಲ್‌ ಕುಮಾರ್‌ ವಂದಿಸಿದರು. ಉಪನ್ಯಾಸಕರಾದ ರಶ್ಮಿ ಎ. ಹಾಗೂ ವಿನಯಾ ಬಿ. ಕಾರ್ಯಕ್ರಮ ನಿರ್ವಹಿಸಿದರು.

Advertisement

ಜಗತ್ತು ಆಳುವ ಜೀನ್‌
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಮಾತನಾಡಿ, ಭಾರತೀಯರಿಗೆ ವಿಜ್ಞಾನ ಗೊತ್ತಿಲ್ಲ, ಸಾಹಸದ ಪ್ರವೃತ್ತಿ ಇಲ್ಲ ಎನ್ನುವವರ ಮಧ್ಯೆ ಜಗತ್ತನ್ನೇ ಆಳುವಂತಹ ಸಾಧನೆ ಮಾಡುವ ಜೀನ್‌ ನಮ್ಮಲ್ಲಿದೆ ಎಂದು ಭಾರತೀಯರು ಸಾಧಿಸಿ ತೋರಿಸಿದ್ದಾರೆ ಎಂದರು. ಪ್ರಧಾನಿ ಅವರ ಕಲ್ಪನೆಯ ಭಾರತಕ್ಕೆ ಇಂಬು ನೀಡುವ ಸಣ್ಣ ಪ್ರಮಾಣ ಪ್ರಯತ್ನವನ್ನು ವಿವೇಕಾನಂದ ವಿದ್ಯಾಸಂಸ್ಥೆ ಆರಂಭಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next