ಚಿಂಚೋಳಿ: ನಿರುದ್ಯೋಗ ಸಮಸ್ಯೆ ದೇಶದ ಪ್ರಧಾನ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸುವುದರಲ್ಲಿ ರಾಜ್ಯದ ಪಾಲು ಸಹಾ ಸೇರಿರುತ್ತದೆ. ರಾಜ್ಯದ ನಿರುದ್ಯೋಗಿ ಯುವಕ- ಯುವತಿಯರಿಗೆ ಕೌಶಲ ತರಬೇತಿ ನೀಡುವುದು ನಮ್ಮ ಸರಕಾರದ ಮುಖ್ಯ ಉದ್ದೇಶವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ತಾಲೂಕು ಆಡಳಿತ, ತಾಪಂ, ಪುರಸಭೆ ಇವುಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ನಿರುದ್ಯೋಗಿ ಯುವ ಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮ ಕೌಶಲ ವೆಬ್ ಪೋರ್ಟಲ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 6.85 ಲಕ್ಷ ಯುವಕರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ 3. 69 ಲಕ್ಷ ಯುವ ಜನರು ಪಿಯುಸಿ ಪರೀಕ್ಷೆ ಮತ್ತು 3.66 ಲಕ್ಷ ಯುವಕ ಯುವತಿಯರು ಪದವಿ ಪರೀಕ್ಷೆ ತೇರ್ಗಡೆಯಾಗಿ ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಯಾಗುತ್ತಿದ್ದಾರೆ. ಆದರೆ ಅಗತ್ಯ ನೈಪುಣ್ಯತೆಗಳ ಕೊರತೆಗಳಿಂದ ಸೂಕ್ತ ಉದ್ಯೋಗ ಪಡೆಯಲು ತಮ್ಮ ಶೈಕ್ಷಣಿಕ ಅರ್ಹತೆ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಆದ್ದರಿಂದ ಬಹುತೇಕ ಯುವ ಜನರಿಗೆ ತಮ್ಮ ನಿರೀಕ್ಷಿತ ಮಟ್ಟದಲ್ಲಿ ಸೂಕ್ತ ಉದ್ಯೋಗ ಪಡೆದುಕೊಳ್ಳಲು ಅಥವಾ ಸಬಲೀಕರಣ ಹೊಂದಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರಕಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಯುವ ಜನತೆಗೆ ಅಗತ್ಯ ಕೌಶಲ ತರಬೇತಿ ನೀಡಲು ಉದ್ದೇಶಿಸಿದೆ.
ನಮ್ಮ ವಿವಿಧ ಯೋಜನೆ ಅಡಿ 5 ಲಕ್ಷ ಯುವ ಜನತೆಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು. ಅಧಿಕಾರಿಗಳು ಹಳ್ಳಿಗಳಲ್ಲಿ ವ್ಯಾಪಕ ಪ್ರಚಾರ ಮಾಡಿ ಯೋಜನೆ ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸಿಡಿಪಿಒ ಜಗನ್ನಾಥ ಗಾದಾ, ಬಿಇಒ ಜರ್ನಾಧನರೆಡ್ಡಿ ಮಾಲಿಪಾಟೀಲ, ಶಿವಯೋಗಿ ಮಠಪತಿ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ ಭಾಗವಹಿಸಿದ್ದರು.
ತಾಲೂಕಿನ ಅನೇಕ ಗ್ರಾಮಗಳಿಂದ ನಿರುದ್ಯೋಗಿ ಯುವಕ ಯುವತಿಯರು ನೋಂದಣಿಗಾಗಿ ಆಗಮಿಸಿದ್ದರು. ತಹಶೀಲ್ದಾರ ಪ್ರಕಾಶ ಕುದುರೆ ಸ್ವಾಗತಿಸಿದರು. ಬಸವರಾಜ ಐನೋಳಿ ನಿರೂಪಿಸಿದರು. ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ ವಂದಿಸಿದರು.